ಸಿಎಂ ವಿರುದ್ಧ ವಿನಯ್‌ ಕುಲಕರ್ಣಿ ಸ್ಪರ್ಧೆ?: ತವರಲ್ಲೇ ಬೊಮ್ಮಾಯಿ ಕಟ್ಟಲು ಕಾಂಗ್ರೆಸ್‌ ಪ್ಲ್ಯಾನ್‌

By Kannadaprabha News  |  First Published Mar 18, 2023, 4:20 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಉಮೇದಿಯಲ್ಲಿರುವ ಕಾಂಗ್ರೆಸ್‌ ಹೈಕಮಾಂಡ್‌, ಮಾಜಿ ಸಚಿವ ಹಾಗೂ ಪಂಚಮಸಾಲಿ ನಾಯಕ ವಿನಯ್‌ ಕುಲಕರ್ಣಿ ಅವರಿಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದೆ. 


ಬೆಂಗಳೂರು (ಮಾ.18): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಉಮೇದಿಯಲ್ಲಿರುವ ಕಾಂಗ್ರೆಸ್‌ ಹೈಕಮಾಂಡ್‌, ಮಾಜಿ ಸಚಿವ ಹಾಗೂ ಪಂಚಮಸಾಲಿ ನಾಯಕ ವಿನಯ್‌ ಕುಲಕರ್ಣಿ ಅವರಿಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದೆ. ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರೂ ಈ ಬಾರಿಯ ಗೆಲುವು ಸುಲಭವಿರುವುದಿಲ್ಲ ಎಂಬುದು ಕಾಂಗ್ರೆಸ್‌ ಸಮೀಕ್ಷೆಗಳಿಂದ ತಿಳಿದುಬಂದಿದೆ. 

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಯ್ಯದ್‌ ಅಜ್ಜಂ ಪೀರ್‌ ಖಾದ್ರಿ ವಿರುದ್ಧ ಕೇವಲ 9,265 ಮತಗಳ ಅಂತರದಲ್ಲಿ ಬೊಮ್ಮಾಯಿ ಗೆದ್ದಿದ್ದರು. ಅಲ್ಪಸಂಖ್ಯಾತರು ಹಾಗೂ ಪಂಚಮಸಾಲಿ ಲಿಂಗಾಯತರೇ ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬೊಮ್ಮಾಯಿ ಗೆಲುವು ಕಷ್ಟವಾಗಲಿದೆ ಎಂದು ಕಾಂಗ್ರೆಸ್‌ ಈ ಕ್ಷೇತ್ರದ ಬಗ್ಗೆ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ. ಇದೇ ಸಮೀಕ್ಷೆಯು ವಿನಯ ಕುಲಕರ್ಣಿ ಅವರನ್ನು ಬೊಮ್ಮಾಯಿ ವಿರುದ್ಧ ಕಣಕ್ಕೆ ಇಳಿಸಿದರೆ ಮುಖ್ಯಮಂತ್ರಿಯವರನ್ನು ಕಟ್ಟಿಹಾಕಬಹುದು ಎಂದು ತಿಳಿಸಿದೆ. 

Tap to resize

Latest Videos

ನಾನು ನಿಮಿತ್ತ ಮಾತ್ರ, ಎಲ್ಲವೂ ಯಡಿ​ಯೂ​ರ​ಪ್ಪ​ನ​ವ​ರೇ: ಸಿಎಂ ಬೊಮ್ಮಾ​ಯಿ

ಇದರಿಂದ ಪ್ರೇರಿತವಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ಅದರಲ್ಲೂ ವಿಶೇಷವಾಗಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಶಿಗ್ಗಾಂವಿಯಿಂದ ಸ್ಪರ್ಧಿಸುವಂತೆ ವಿನಯ ಕುಲಕರ್ಣಿ ಅವರ ಮನವೊಲಿಸಲು ಮುಂದಾಗಿದ್ದಾರೆ. ಆದರೆ, ಧಾರವಾಡ ಕ್ಷೇತ್ರದಿಂದ ಟಿಕೆಟ್‌ ಬಯಸಿರುವ ವಿನಯ ಕುಲಕರ್ಣಿ ಅವರು ಶಿಗ್ಗಾಂವಿಯಿಂದ ಸ್ಪರ್ಧಿಸುವ ಬಗ್ಗೆ ಹಿಂಜರಿಕೆ ಹೊಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಮುದಾಯದ ನಾಯಕರ ಒತ್ತಡ ಕಾರಣ ಎನ್ನಲಾಗಿದೆ. ಲಿಂಗಾಯತ ಸಮುದಾಯದ ನಾಯಕ ಹಾಗೂ ಮೇರು ಹುದ್ದೆಯಲ್ಲಿರುವ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸುವುದು ಸಮುದಾಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. 

ಮಧು ಬಂಗಾರಪ್ಪ ನಾಲಾಯಕ್‌ ಶಾಸಕ: ಕುಮಾರ್ ಬಂಗಾರಪ್ಪ ವಾಗ್ದಾ​ಳಿ

ನಮ್ಮ ಸಮುದಾಯದ ನಾಯಕ ಯಾವುದೇ ಪಕ್ಷದಲ್ಲಿದ್ದರೂ ಅವರಿಗೆ ಹಿನ್ನಡೆ ಉಂಟಾಗುವಂತೆ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿಗೆ ಅವರಿಗೆ ಶಿಗ್ಗಾಂವಿಯಲ್ಲಿ ಸ್ಪರ್ಧಿಸಲು ಹಿಂಜರಿಕೆಯಿದೆ. ಆದರೆ, ಹೈಕಮಾಂಡ್‌ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡ ಹಾಕಿದೆ. ಹೀಗಾಗಿ ಧಾರವಾಡ ಹಾಗೂ ಶಿಗ್ಗಾಂವಿ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಖೈರುಗೊಳಿಸಲಾಗಿಲ್ಲ. ಈ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆದ ನಂತರವೇ ವಿನಯ ಕುಲಕರ್ಣಿ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿವೆ.

click me!