
ಬೆಂಗಳೂರು (ಆ.8): ದೆಹಲಿ ಭೇಟಿ ಸಹಜವಾದದ್ದು ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ದೆಹಲಿ ಭೇಟಿ ವಿಚಾರವಾಗಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಡಿಸಿಎಂ ಹುದ್ದೆ ವಿಚಾರವಾಗಿ ಸದ್ಯಕ್ಕೆ ಯಾವುದೇ ಚರ್ಚೆ ನಡೆದಿಲ್ಲ. ಮುಂದೆ ಅವಕಾಶ ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ ಎಂದರು. ಇದೇ ವೇಳೆ ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು 'ಇವತ್ತು ಅಥವಾ ನಾಳೆ ಸಿಎಂ ಅವರು ಖಾತೆ ಹಂಚಿಕೆ ಮಾಡಬಹುದು. ಸಿಎಂ ಅವರು ಇಂದು ದೆಹಲಿಗೆ ಹೋಗುತ್ತಿದ್ದಾರೆ. ಬಹುಶಃ ಸೋಮವಾರದವರೆಗೆ ಪ್ರಕ್ರಿಯೆ ನಡೆಯಬಹುದು. ಸೋಮವಾರದೊಳಗೆ ಅಂತಿಮಗೊಳಿಸುವ ನಿರೀಕ್ಷೆ ಇದೆ. ಸಂಪುಟದಲ್ಲಿ ಹಳಬರು ಹಾಗೂ ಅನುಭವ ಇರುವವರು ಇದ್ದಾರೆ. ಹೀಗಾಗಿ ಖಾತೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಪುಟದಲ್ಲಿ ಬದಲಾವಣೆ ಮಾಡುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈಗಾಗಲೇ ಎಲ್ಲರೂ ಈ ಬಗ್ಗೆ ಮಾತನಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಮಾತನಾಡಿದ್ದಾರೆ. ಸಿಎಂ ಖುದ್ದಾಗಿ ದೆಹಲಿಗೆ ತೆರಳಿ ಚರ್ಚಿಸಿದ್ದಾರೆ. ಪಕ್ಷದ ಅಧ್ಯಕ್ಷರು ಹಾಗೂ ಇತರ ಸಚಿವರೂ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ಒಬ್ಬರು ಕುರುಬರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಪಟ್ಟು ಹಿಡಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆ ಬಗ್ಗೆ ಗೊಂದಲ ಇದೆ ಅದನ್ನು ಸರಿಪಡಿಸುವ ಪ್ರಯತ್ನ ನಮ್ಮ ವರಿಷ್ಠರು ಮಾಡುತ್ತಾರೆ ಎಲ್ಲನೂ ಸರಿ ಆಗುತ್ತೆ. ಎಲ್ಲದಕ್ಕೂ ಕಾಲ ಬೇಕು ಅಷ್ಟೇ ಎಂದರು.
ಸಂಪುಟದಲ್ಲಿ ಮಹಿಳೆಗೆ ಅವಕಾಶ ಬೇಕು
ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಲೇಬೇಕು ಎಂದ ಸತೀಶ್ ಜಾರಕಿಹೊಳಿ ಅವರು, ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆ ಬೇಕೇ ಬೇಕು. ಈಗ 19 ಮಂದಿ ಇದ್ದಾರೆ, ಇನ್ನೊಂದು ಅವಕಾಶ ಇದೆ. ಯಾವುದೇ ಸರ್ಕಾರವಾಗಿರಲಿ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದರು.
ಹೊರಟ್ಟಿ ರಾಜೀನಾಮೆಗೆ ಬೆದರಿಕೆ ಆರೋಪ ತಳ್ಳಿಹಾಕಿದ ಸತೀಶ್
ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬೆದರಿಕೆ ಹಾಕಿ ರಾಜೀನಾಮೆ ಪಡೆದಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಹೊರಟ್ಟಿಯವರೇ ರಾಜೀನಾಮೆ ನೀಡಿದ್ದಾರೆ. ಅವರು ಅತ್ಯಂತ ಹಿರಿಯ ಶಾಸಕರು. ಅವರೇ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. ನಾನು ಪತ್ರಿಕೆಯಲ್ಲಿ ನೋಡಿದ್ದೇನೆ ಎಂದರು.
ಸಭಾಪತಿ ಹೊರಟ್ಟಿ ರಾಜೀನಾಮೆ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅದು ಈಗ ಮುಗಿದು ಹೋಗಿದೆ. ಈಗಾಗಲೇ ರಾಜೀನಾಮೆ ನೀಡಲಾಗಿದ್ದು, ಅದನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು ಮುಂದುವರಿದು ಬೆದರಿಕೆ ಹಾಕುವಂತಹ ಕಾಲ ಇದಲ್ಲ. ಅವರು ಹಿರಿಯ ರಾಜಕಾರಣಿ, ಸಭಾಪತಿ. ಅವರಿಗೆ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.