ಸ್ಥಿರ ಸರ್ಕಾರ ಕಾಂಗ್ರೆಸ್‌ನಿಂದಷ್ಟೇ ಸಾಧ್ಯ: ಚಲುವರಾಯಸ್ವಾಮಿ

By Govindaraj SFirst Published Aug 14, 2022, 1:25 AM IST
Highlights

ರಾಜ್ಯದ ಅಭಿವೃದ್ಧಿಯೊಂದಿಗೆ ಸ್ಥಿರ ಸರ್ಕಾರ ನೀಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹಲವಾರು ಜನಪರ ಯೋಜನೆಗಳನ್ನು ಕೊಟ್ಟಿರುವ ಕಾಂಗ್ರೆಸ್‌ ಪಕ್ಷವನ್ನು ಜನರು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಮನವಿ ಮಾಡಿದರು.

ಮಳವಳ್ಳಿ (ಆ.14): ರಾಜ್ಯದ ಅಭಿವೃದ್ಧಿಯೊಂದಿಗೆ ಸ್ಥಿರ ಸರ್ಕಾರ ನೀಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹಲವಾರು ಜನಪರ ಯೋಜನೆಗಳನ್ನು ಕೊಟ್ಟಿರುವ ಕಾಂಗ್ರೆಸ್‌ ಪಕ್ಷವನ್ನು ಜನರು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಮನವಿ ಮಾಡಿದರು. ಸ್ವಾತಂತ್ರ್ಯದ ಅಮೃತಮಹೋತ್ಸವ ನಿಮಿತ್ತ ಕಾಂಗ್ರೆಸ್‌ನಿಂದ ಕಿರುಗಾವಲುನಿಂದ ಮಳವಳ್ಳಿವರೆಗೆ ನಡೆದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಟ್ಟಣದ ಅನಂತರಾವ್‌ ವೃತ್ತದಲ್ಲಿ ಮಾತನಾಡಿ, ನಾವು ಭಾವನಾತ್ಮಕವಾಗಿ ಎಚ್ಚರಿಕೆಯಿಂದ ಇರಬೇಕಿದೆ. 

ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಕೊಟ್ಟಮಾತ್ರಕ್ಕೆ ಜನರು ಮತ ಕೊಡುವುದಿಲ್ಲ ಎನ್ನುವುದು ಸ್ವಷ್ಟವಾಗಿದೆ, 160 ಭರವಸೆಗಳಲ್ಲಿ ಎರಡು-ಮೂರು ಯೋಜನೆಗಳನ್ನು ಬಿಟ್ಟು ಉಳಿದೆಲ್ಲಾ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದರೂ ಜನರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ನಾಲ್ಕೂಕವರೆ ವರ್ಷದಲ್ಲಿ ಮುಖ್ಯಮಂತ್ರಿಗಳನ್ನು ಬದಲಾವಣೆ ಕಂಡಿದ್ದೇವೆ ವಿನಃ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಸ್ವಾತಂತ್ರ್ಯವನ್ನು ತಂದುಕೊಡಲು ಕಾಂಗ್ರೆಸ್‌ ಪಕ್ಷ ಪ್ರಮುಖ ಪಾತ್ರ ವಹಿಸಿರುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕಾಂಗ್ರೆಸ್‌ ಕರೆಯ ಮೇರೆಗೆ ರಾಜ್ಯಾದ್ಯಂತ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಯಾರನ್ನೋ ಮೆಚ್ಚಿಸಲು ಎಚ್‌ಡಿಕೆ ಕಣ್ಣೀರು ಹಾಕೋ ನಾಟಕವಾಡಿಲ್ಲ: ಪುಟ್ಟರಾಜು

ಆ.15ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ದೇಶಕ್ಕೆ ತ್ಯಾಗ ಬಲಿದಾನದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟಕಾಂಗ್ರೆಸ್‌ ಪಕ್ಷಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಅಧಿಕಾರ ಹೊಂದಿದೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಮಂಡ್ಯ ಜಿಲ್ಲೆಗೂ ಆಗಮಿಸುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿಜಾನ್‌, ಮಾಜಿ ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ಕೆ.ಬಿ. ಮಧು ಮಾದೇಗೌಡ. ಚಂಧ್ರಶೇರ್ಖ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಪುಟ್ಟಬಸವಯ್ಯ, ಜಿಲ್ಲಾಧ್ಯಕ್ಷ ಸುರೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದೇವರಾಜು, ಸುಂದರ್‌ರಾಜು, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌ ಇತರರಿದ್ದರು.

ಶಾಸಕರಿಂದ ಢೋಂಗಿ ರಾಜಕಾರಣ: ನಾಲ್ಕೂವರೆ ವರ್ಷದಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೆ ತರದವರು ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾನು ತಂದ ಯೋಜನೆಗಳಿಗೆ ಗುದ್ದಲಿ ಹಿಡಿಯುತ್ತಿದ್ದಾರೆ, ಹಲವು ಯೋಜನೆಗಳು ಸತ್ತು ಬಿದ್ದಿವೆ ಎಂದು ಹಾಲಿ ಶಾಸಕರ ವಿರುದ್ಧ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹರಿಹಾಯ್ದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನಕ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು, ನಾನು ತಂದ ಭವನವನ್ನು ತಾನು ತಂದೆ ಎಂದು ನಾಮಫಲಕ ಹಾಕಿಸಿಕೊಂಡಿರುವುದು ನಾಚೀಗೇಡಿನ ಸಂಗತಿಯಾಗಿದೆ ಎಂದರು. ಜಿಲ್ಲೆಯಲ್ಲಿ ಅಧಿಕಾರ ಪಡೆದ ಜೆಡಿಎಸ್‌ ಜಿಲ್ಲೆಗೆ ಕೊಟ್ಟಕೊಡುಗೆ ಏನು ಎನ್ನುವುದನ್ನು ಶ್ವೇತಪತ್ರ ಹೊರಡಿಸಲಿ, ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ಮಾರಲು ಹೊರಟರೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಬಹಿರಂಗವಾಗಿ ಬಿಜೆಪಿಯನ್ನು ಬೈಯ್ಯುವುದು, ಒಳಗೆ ಬೆಂಬಲ ನೀಡುವುದನ್ನು ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ವಿರುದ್ಧ ಹರಿಹಾಯ್ದರು.

ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ ಸರ್ಕಾರ : ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಕ್ಷಣಗಣನೆ

ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು, ಕಾಂಗ್ರೆಸ್‌ ಕುಟುಂಬದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದರು. ಕಿರುಗಾವಲುನಿಂದ ಮಳವಳ್ಳಿಗೆ ಆಗಮಿಸುವ ಪಾದಯಾತ್ರೆಯ ವೇಳೆ ಶಾಂತಿ ಕಾಲೇಜಿನ ವಿದ್ಯಾರ್ಥಿಗಳು ಜಯಘೋಷದೊಂದಿಗೆ ಸ್ವಾತಂತ್ರ್ಯ ನಡಿಗೆಗೆ ಸಾಥ್‌ ನೀಡಿ ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು.

click me!