ಬಸವಪ್ರಭು ಸ್ವಾಮೀಜಿಯೇ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲಿ, ಬೇಡ ಎಂದವರು ಯಾರು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.
ಶಿವಮೊಗ್ಗ (ಜ.01): ಬಸವಪ್ರಭು ಸ್ವಾಮೀಜಿಯೇ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲಿ, ಬೇಡ ಎಂದವರು ಯಾರು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಬಸವಪ್ರಭು ಸ್ವಾಮೀಜಿಯವರೇ ತೆಗೆದುಕೊಂಡು ಹೋಗಿ ಸಿಎಂ ಸ್ಥಾನದಲ್ಲಿ ಕೂರಿಸಲಿ. ಯಾರು ಬೇಡ ಅಂತಾರೆ. ಆದರೆ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಯಾರೋ ಸ್ವಾಮೀಜಿ ಹೇಳಿದರೆ ಆಗಲ್ಲ. ರಾಜ್ಯದ ಜನರು ಅದನ್ನು ತೀರ್ಮಾನ ಮಾಡಬೇಕು.
ಬಿಜೆಪಿ- ಕೆಜೆಪಿ ಒಡೆಯದಿದ್ದರೆ ಈ ಜನ್ಮದಲ್ಲಿ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ. ಸಿದ್ದರಾಮಯ್ಯ ಯಡಿಯೂರಪ್ಪ ಅವರ ಫೋಟೋ ಮನೆಯಲ್ಲಿಟ್ಟು ಪೂಜೆ ಮಾಡಬೇಕು ಎಂದು ಕುಟುಕಿದರು. ಅಮಿತ್ ಶಾ ದೆಹಲಿಯಲ್ಲೇ ಕುಳಿತು ಎಲ್ಲವನ್ನೂ ಗಮನಿಸ್ತಾ ಇದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಅಮಿತ್ ಶಾ ಎಷ್ಟು ಕ್ರಮವನ್ನು ಕೈಗೊಂಡರು. ಇದೇ ಸಿದ್ದರಾಮಯ್ಯ ಇದ್ದಂತಹ ಸಂದರ್ಭದಲ್ಲಿ ಏಕೆ ಮಾಡ್ಲಿಲ್ಲ? ಡಿ.ಕೆ.ಶಿವಕುಮಾರ್ ಆಗ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದರು? ಕೇಂದ್ರ ಗೃಹ ಸಚಿವರು ದಿಟ್ಟಹೆಜ್ಜೆ ಇಟ್ಟು ಮುನ್ನುಗುತ್ತಿದ್ದಾರೆ.
ವಿಪಕ್ಷಗಳ ಒಪ್ಪಿಗೆ ಮೇರೆಗೆ ಬೆಳಗಾವಿ ಅಧಿವೇಶನ ಮೊಟಕು: ಕೆ.ಎಸ್.ಈಶ್ವರಪ್ಪ
ನಾವು ಶಾಂತಿ ಕಾಪಾಡಬೇಕು ಎಂಬ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ಶಾಂತಿ ಕದಡುವ ಭಯೋತ್ಪಾದಕರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿದೆ. ಅಮಿತ್ ಶಾ ಮಾಡುತ್ತಿರುವ ಕೆಲಸ ಬೆಂಬಲಿಸಿ, ನೀವು ರಾಷ್ಟ್ರ ಭಕ್ತರಾಗುತ್ತೀರಿ. ಇಲ್ಲವಾದ್ರೇ ಭಯೋತ್ಪಾದಕರ ರಕ್ತ ನಿಮ್ಮ ಮೈಯಲ್ಲಿ ಹರಿಯುತ್ತಿದೆ ಎಂದು ರಾಜ್ಯದ ಜನ ತೀರ್ಮಾನ ಮಾಡ್ತಾರೆ. ಇವಾಗ ಅಲ್ಪ ಸ್ವಲ್ಪ ಸೀಟ್ ಬಂದಿದೆ. ಮುಂದಿನ ಚುನಾವಣೆಯಲ್ಲಿ ಭಯೋತ್ಪಾದಕರ ಜೊತೆ ಜನ ನಿಮ್ಮನ್ನು ಹೊರಗೆ ಕಳಿಸ್ತಾರೆ ಎಂದು ಎಚ್ಚರಿಕೆ ನೀಡಿದರು.
‘ಈಗಷ್ಟೇ ಮದುವೆಯಾಗಿದೆ, ಮಕ್ಕಳಾಗಿಲ್ಲ ಅಂದ್ರೆ ಹೇಗೆ?’: ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ನೀಡುವ ವಿಚಾರವಾಗಿ ಬಿಜೆಪಿ ಸರ್ಕಾರ ಮೊದಲ ಹಜ್ಜೆ ಇಟ್ಟಿದೆ. ಈಗಷ್ಟೇ ಮದುವೆಯಾಗಿದೆ, ಮಕ್ಕಳಾಗಿಲ್ಲ ಅಂದ್ರೆ ಹೇಗೆ? ಹೀಗೆಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಶಾಸಕ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ಡಿ ಮತ್ತು 2ಸಿ ಮೀಸಲಾತಿ ನೀಡುವುದು ಕೇವಲ ಘೋಷಣೆ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮೀಸಲಾತಿ ನೀಡಬೇಕು ಎಂಬ ಮೊದಲ ಹೆಜ್ಜೆಯನ್ನು ಬಿಜೆಪಿ ಇಟ್ಟಿದೆ. ಇದಕ್ಕೆ ಸಮಯಬೇಕು ಎಂದರು. ಪಂಚಮಸಾಲಿ, ಒಕ್ಕಲಿಗರ ಮೀಸಲಾತಿ ಘೋಷಣೆಯಾಗಿದೆ.
ಆ ಬಗ್ಗೆ ವಿಸ್ತೃತ ಚರ್ಚೆ ನಡೆದು, ಸ್ಪಷ್ಟತೆ ಸಿಗಲಿದೆ. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಪ್ರಸ್ತಾವನೆ ಕೇಂದ್ರಕ್ಕೆ ರವಾನೆಯಾಗುತ್ತದೆ. ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಲಿದೆ ಎಂದು ಹೇಳಿದರು. ಪಂಚಮಸಾಲಿ, ಒಕ್ಕಲಿಗರ ಮೀಸಲಾತಿ ಘೋಷಣೆ ಇದು ಮೊದಲ ಹಜ್ಜೆ. ಇದನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಆದರೆ, ಎಚ್.ಡಿ. ಕುಮಾರಸ್ವಾಮಿ ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ. 2ಎ ವರ್ಗದವರಿಗೆ ಅನ್ಯಾಯ ಆಗಬಾರದು ಎಂದು ಪ್ರತ್ಯೇಕ ಪ್ರವರ್ಗ ರಚಿಸಲಾಗಿದೆ. ಮೀಸಲಾತಿ ಕೊಡುವಲ್ಲಿ ಪ್ರತಿಪಕ್ಷಗಳು ಸಹಕರಿಸಬೇಕು. ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ, ಸಿದ್ಧರಾಮಯ್ಯ ನಮಗೆ ಸಲಹೆ ನೀಡಬೇಕು. ಛೂ ಮಂತ್ರ ಮಾಡಿ ಮೀಸಲಾತಿ ಕೊಡಲು ಸಾಧ್ಯವಿಲ್ಲ. ಮೊದಲ ಹೆಜ್ಜೆ ಇಟ್ಟಿದ್ದೇವೆ, ಎಲ್ಲವೂ ಆಗುತ್ತದೆ ಎಂದು ತಿಳಿಸಿದರು.
ವರಿಷ್ಠರು ಒಪ್ಪಿದರೆ ಜಾರಕಿಹೊಳಿ, ಈಶ್ವರಪ್ಪಗೆ ಶೀಘ್ರ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ
ಹಿಂದುಗಳಿಗೆ ಹೊಸ ವರ್ಷ ಎಂದರೆ ಅದು ಯುಗಾದಿ. ಇದು ಕ್ರಿಶ್ಚಿಯನ್ನರ ಹಬ್ಬ, ವಿದೇಶಿಯರ ಹಬ್ಬ ಅವರು ಮಾಡಿಕೊಳ್ಳಲಿ. ನಾವು ಅದಕ್ಕೆ ಬೆಂಬಲ ಕೊಡಲ್ಲ. ನಾವಂತೂ ಅಡ್ಡಿ ಮಾಡಲ್ಲ, ಆಚರಿಸುವುದೂ ಇಲ್ಲ. ಹೊಸ ವರ್ಷವೂ, ಸಂಭ್ರಮಾಚರಣೆಯೂ ಬೇರೆ. ಸಂಕ್ರಾಂತಿ, ಯುಗಾದಿ ಹಬ್ಬಗಳನ್ನು ನಾವು ವ್ಯವಸ್ಥಿತವಾಗಿ ಮಾಡುತ್ತೇವೆ
- ಕೆ.ಎಸ್.ಈಶ್ವರಪ್ಪ, ಶಾಸಕ