ಹಿಂದುತ್ವವನ್ನು ಪೂಜಿಸಿದರೆ ಆ ತಾಯಿ ಚಾಮುಂಡೇಶ್ವರಿ ಹಾಗೂ ಯಲ್ಲಮ್ಮ ನಿಮ್ಮನ್ನು ಕಾಪಾಡುತ್ತಾರೆ. ಅಕಸ್ಮಾತ್ ನೀವು ಡೋಂಗಿ ಭಕ್ತಿ ತೋರಿಸಿದ್ದರೆ ಆ ದೇವಿಯರು ಜೈಲಿಗೆ ಕಳುಹಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯಗೆ ಕುಟುಕಿದ ಮಾಜಿ ಡಿಸಿಎಂ ಈಶ್ವರಪ್ಪ
ವಿಜಯಪುರ(ಅ.20): ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಕುಂಕುಮ ಕಂಡರೆ, ಕೇಸರಿ ಕಂಡರೆ ಮೈಯಲ್ಲಿ ಭೂತ ಬಂದಂತೆ ಆಡುತ್ತಿದ್ದರು. ಈಗ ಮುಡಾ ಹಗರಣದಲ್ಲಿ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದ್ದು, ದೇವಸ್ಥಾನಗಳಿಗೆ ತೆರಳಿ ಪತ್ನಿ ಹೆಸರಲ್ಲಿ ಅರ್ಚನೆ ಮಾಡಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವ ವ್ಯಕ್ತಿ ಕುಂಕುಮ ಕಂಡರೆ, ಕೇಸರಿ ಕಂಡರೆ ಭೂತ ಬಂದಂತೆ ಆಡುತ್ತಿದ್ದರೋ ಆ ವ್ಯಕ್ತಿ ಈಗ ಅರೆಸ್ಟ್ ಆಗ್ತಿವಿ ಎಂದು ಗೊತ್ತಾದಾಗ ಚಾಮುಂಡೇಶ್ವರಿ ಹಾಗೂ ಸವದತ್ತಿ ಯಲ್ಲಮ್ಮನಿಗೆ ಮೊರೆ ಹೋಗಿ ದ್ದಾರೆ. ಕುಂಕುಮ ಹಚ್ಚಲು ಬಂದರೆ ಬೇಡ ಅನ್ನೋರು, ಕೇಸರಿ ರುಮಾಲು ಹಾಕಲು ಬಂದರೆ ಕಿತ್ತು ಬಿಸಾಕುತ್ತಿದ್ದವರು ತಮ್ಮ ಪತ್ನಿಯ ಹೆಸರಿನಲ್ಲಿ ದೇವರಿಗೆ ಅರ್ಚನೆ ಮಾಡಿಸಿದ್ದಾರೆ. ಹಿಂದುತ್ವವನ್ನು ಪೂಜಿಸಿದರೆ ಆ ತಾಯಿ ಚಾಮುಂಡೇಶ್ವರಿ ಹಾಗೂ ಯಲ್ಲಮ್ಮ ನಿಮ್ಮನ್ನು ಕಾಪಾಡುತ್ತಾರೆ. ಅಕಸ್ಮಾತ್ ನೀವು ಡೋಂಗಿ ಭಕ್ತಿ ತೋರಿಸಿದ್ದರೆ ಆ ದೇವಿಯರು ಜೈಲಿಗೆ ಕಳುಹಿಸುತ್ತಾರೆ ಎಂದು ಕುಟುಕಿದರು.
ಕಾಂಗ್ರೆಸ್ಸಿನಲ್ಲಿಯೇ ಸಿಎಂ ಸ್ಥಾನಕ್ಕೆ ಪೈಪೋಟಿ: ಕೆ.ಎಸ್. ಈಶ್ವರಪ್ಪ
ಹಿಂದುಳಿದವರಿಗೆ, ದಲಿತರಿಗೆ ಅನುಕೂಲ ಮಾಡುತ್ತೇವೆ ಎಂದಿದ್ದ ರಾಜ್ಯ ಸರ್ಕಾರ ಅವರನ್ನು ಮರೆತು ಹೋಗಿದೆ. ಅಲ್ಲದೇ, ಬಿಜೆಪಿ ಅಧಿಕಾರದಲ್ಲಿದ್ದಾಗ ಘೋಷಣೆ ಮಾಡಿದ್ದ ಹಿಂದುಳಿದ ವರ್ಗಗಳ 1077 ವಿವಿಧ ಯೋಜನೆಗಳನ್ನು ನಿಲ್ಲಿಸಿದ್ದು, ಕಳೆದ ತಿಂಗಳು ಆ ಯೋಜನೆಗಳನ್ನು ಕಾಂಗ್ರೆಸ್‌ನವರು ರದ್ದು ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ನೇರವಾಗಿಯೇ ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಹಗರಣಗಳಲ್ಲೇ ತೊಡಗಿದೆ. ಮಳೆಯಿಂದ ಸಾಕಷ್ಟು ಹಾನಿಯಾಗಿದ್ದರೂ ಒಬ್ಬರೂ ಸಚಿವರು, ಶಾಸಕರು ರೈತರ ಜಮೀನಿಗೆ ಕಾಲು ಇಡಲಿಲ್ಲ. ರೈತರಿಗೆ ಸೂಕ್ತ ಪರಿಹಾರ ಕೊಡಲಿಲ್ಲ ಎಂದು ಟೀಕಿಸಿದರು.ಜಾತಿಗಣತಿ ವರದಿ ಸಿದ್ದವಿದ್ದರೂ ಅದನ್ನು ಜಾರಿಗೆ ತರಲು ಇಂದು ನಾಳೆ ಎಂದು ಮೀನಮೇಷ ಎಣಿಸುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಈ ಜಾತಿಗಣತಿ ವರದಿ ಸ್ಥಿತಿ ಇಂದು ಬೇಡ ನಾಳೆ ಬಾ ಎನ್ನುವಂತಾಗಿದೆ. ಜಾತಿಗಣತಿಯಲ್ಲಿ ಸಿದ್ಧರಾಮಯ್ಯನವರ ನಡೆ ಉತ್ತರ ಕುಮಾರನ ಪೌರುಷದಂತಾಗಿದೆ ಎಂದರು.
ಹಿಂದೂ ಸಮಾಜದ ರಕ್ಷಣೆಗೆ ಬ್ರಿಗೇಡ್:
ನಮಗೆ ಬ್ರಿಗೇಡ್ ಮಾಡುವ ಕಲ್ಪನೆಯೇ ಇರಲಿಲ್ಲ. ಈ ಹಿಂದಿನ ಸಭೆಯಲ್ಲಿ ಯತ್ನಾಳ ಅವರು ಹೇಳಿದ್ದಾರೆ. ಹಿಂದೂ ಸಮಾಜಕ್ಕೆ ಆಗುತ್ತಿರುವ ಕಷ್ಟಗಳಿಗೆ ಸರ್ಕಾರಗಳು ರಕ್ಷಣೆ ಕೊಡುತ್ತಿಲ್ಲ. ನಾಗಮಂಗಲದಲ್ಲಿ ಮಸೀದಿಯಿಂದ ತಲವಾರ್ ತಂದು, ಪೆಟ್ರೊಲ್ ಬಾಂಬ್ ಹಾಕಿ ಅಂಗಡಿಗಳನ್ನು ಸುಟ್ಟರು. ಈ ವೇಳೆ ಕಾಂಗ್ರೆಸ್ ಸರ್ಕಾರ ಎ1 ನಿಂದ ಎ33 ವರೆಗೂ ಹಿಂದೂಗಳ ಮೇಲೆ ಕೇಸ್ ಹಾಕಿದರು. ಹುಬ್ಬಳ್ಳಿಯಲ್ಲೂ ಹಿಂದೂಗಳಿಗೆ ಅನ್ಯಾಯ ಆಗಿದೆ. ಹೀಗಾಗಿ ಬ್ರಿಗೇಡ್ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಈಗಾಗಲೇ ಹಲವು ಸಂಘಟನೆಗಳಿದ್ದರೂ ನಾವು ಹೊಸದಾದ ಸಂಘಟನೆ ಮಾಡುತ್ತಿದ್ದೇವೆ. ಅದರಂತೆ ಸಾವಿರ ಸಂಘಟನೆಗಳು ಇದ್ದರೂ ಹಿಂದೂ ಸಮಾಜಕ್ಕೆ ಇನ್ನೂ ಸಂಘಟನೆಗಳು ಬೇಕಿದೆ. ನಾನು ರಾಯಣ್ಣ ಬ್ರಿಗೇಡ್ ಮಾಡುವಾಗ ಯಾರನ್ನೂ ಮಾತನಾಡಿಸಿಲ್ಲ. ಈಗಲೂ ನಾನು ಯಾರನ್ನೂ ಮಾತನಾಡಿಸಲ್ಲ. ಇಚ್ಚೆ ಇದ್ದವರು ನಮ್ಮ ಸಂಘಟನೆಗೆ ಬರುತ್ತಾರೆ. ಹಿಂದುಳಿದ ಹಾಗೂ ದಲಿತರ ರಕ್ಷಣೆಗೆ ನಾವು ಇದ್ದೇವೆ ಎಂಬ ವಿಶ್ವಾಸ ಅವರಿಗೆ ಬರಬೇಕಿದೆ. ಆಗ ಎಲ್ಲರೂ ಬರುತ್ತಾರೆ. ಎಲ್ಲ ವರ್ಗದ ಜನರಿಗೂ ಈ ಸಂಘಟನೆಯಲ್ಲಿ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಘಟನೆ ರಾಜಕೀಯ ಲಾಭಕ್ಕೆ ಅಲ್ಲ:
ಈಶ್ವರಪ್ಪ ರಾಜಕೀಯ ಲಾಭಕ್ಕಾಗಿ ಸಂಘಟನೆ ಮಾಡುತ್ತಿದ್ಧಾರೆ ಎಂದು ಯಾರೋ ಮಾತನಾಡಿದ್ದಾರೆ ಎಂಬುದಕ್ಕೆ ಉತ್ತರ ಕೊಡುವುದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಬಿಜೆಪಿಯ ಹೊಂದಾಣಿಕೆ ರಾಜಕಾರಣ ಶುದ್ಧಿಯಾಗಬೇಕು ಎಂದು ನಾನು ಹೊರಬಂದಿದ್ದೇನೆ. ಕಾಂಗ್ರೆಸ್ ಹೊಂದಾಣಿಕೆಯಿಂದ ವಿಜಯೇಂದ್ರ ಗೆದ್ದಿದ್ದು ಹಾಗೂ ಅದೇ ಹೊಂದಾಣಿಕೆಯಿಂದಲೇ ಬಿಜೆಪಿಯ ಎಷ್ಟೋ ಜನ ಸೋತಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ ಎಂದು ದೂರಿದರು.
ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ಸಚಿವ, ಡಿಸಿಎಂ ಸ್ಥಾನ ಸೇರಿದಂತೆ ನನಗೆ ಎಲ್ಲವನ್ನೂ ಪಕ್ಷ ಕೊಟ್ಟಿದೆ. ನಾನು ಅಲ್ಲೇ ಇದ್ದಿದ್ದರೆ ನನಗೆ ಇನ್ನೂ ಹುದ್ದೆಗಳು ಸಿಗುತ್ತಿದ್ದವು. ಆದರೆ ಅಲ್ಲಿ ನಡೆಯುತ್ತಿರುವ ಹೊಂದಾಣಿಕೆ ನೋಡಿ ಸುಮ್ಮನೆ ಇದ್ದರೆ ಪಕ್ಷಕ್ಕೆ ಅನ್ಯಾಯ ಮಾಡಿದಂತೆ ಎಂದು ಪಕ್ಷದ ಋಣ ತೀರಿಸಲು ಹೊರಬಂದೆ. ಇದೀಗ ಪಾರ್ಟಿಯಲ್ಲಿ ತಮಗೆ ಬೇಕಾದವರನ್ನು ಮಾತ್ರ ಇಟ್ಟುಕೊಂಡು, ಸ್ವಜನ ಪಕ್ಷಪಾತ ಮಾಡಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪಕ್ಷ ಕಟ್ಟಿದ್ದು ಯಾವನಿಗೋ ದುಡ್ಡು ಮಾಡಲು, ಹಣ ತಗೊಂಡು ಟಿಕೆಟ್ ಕೊಡಲು ಕಟ್ಟಿಲ್ಲ. ಯಾವನಾದರೂ ಹಣ ಕೊಟ್ಟರೆ ಟಿಕೆಟ್ ಕೊಡ್ತಿನಿ, ಹಣ ತಗೊಂಡು ಟಿಕೆಟ್ ಕೊಟ್ಟಿದ್ದಾರೆ ಅಂದರೆ ಅವರಿಗೆ ನಾನು ಏನು ತಗೊಂಡು ಹೊಡೆಯುತ್ತೇನೆ ನನಗೆ ಗೊತ್ತಿಲ್ಲ. ರಕ್ತವನ್ನು ಬೆವರಿನಂತೆ ಸುರಿಸಿ ಪಕ್ಷ ಕಟ್ಟಿದವರು ಇಂದು ಸ್ವರ್ಗದಲ್ಲಿದ್ದಾರೆ. ಅವರ ಆತ್ಮಕ್ಕೆ ತೃಪ್ತಿ ಆಗುವಂತೆ ನಾವು ನಡೆದುಕೊಳ್ಳಬೇಕು. ಯಾರಾದರು ಟಿಕೆಟ್‌ಗಾಗಿ ಹಣಕ್ಕೆ ಬೇಡಿಕೆ ಇಟ್ಟರೆ ಅವರನ್ನು ಹೊಡೆದೋಡಿಸಬೇಕು ಎಂದರು.
ಜೋಶಿ ಕುಟುಂಬದ ಮೇಲೆ ಎಫ್‌ಐಆರ್:
ಜೋಶಿ ಅವರ ಕುಟುಂಬದ ಮೇಲೆ ಇಂತಹ ಆಪಾದನೆ ಬಂದಿದೆ ಎಂದರೆ ದುರ್ದೈವ. ಈ ಬಗ್ಗೆ ತಕ್ಷಣ ತನಿಖೆ ಆಗಬೇಕು. ಹಣ ಪಡೆದಿದ್ದರೆ ಇದು ಅನ್ಯಾಯ. ತನಿಖೆಯಿಂದ ಎಲ್ಲವೂ ಹೊರಬರಲಿ. ಬಿಜೆಪಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಬಂದಿದೆಯಾ ಎಂದು ಭಯ ಆಗ್ತಿದೆ. ದೇಶವೇ ಹಿಂದುತ್ವವಾದಿಯಾಗಿದೆ. ಈ ಹಿಂದೆ ಯಾವಳೋ(ಚೈತ್ರಾ ಕುಂದಾಪುರ) ಇಂತಹ ಕೆಲಸ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ಅಲ್ಲೊಂದು ಇಲ್ಲೊಂದು ಇಂತಹ ಕೆಟ್ಟ ಹುಳುಗಳು ಇರುತ್ತವೆ ಎಂದು ಕಿಡಿಕಾರಿದರು.
ಈ ಹಿಂದೆ ಸಂತೋಷ ಆತ್ಮಹತ್ಯೆ ಕೇಸಲ್ಲಿ ಆರೋಪ ಬಂದಾಗ ನಾನು ಅಂದೇ ರಾಜೀನಾಮೆ ಕೊಟ್ಟಿದ್ದೆ. ಅಷ್ಟರಲ್ಲೇ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಸಾವಿರಾರು ಜನರನ್ನು ತಂದು ಪ್ರತಿಭಟನೆ ಮಾಡಿದರು. ಈಗ ಅದೇ ಸಿದ್ದರಾಮಯ್ಯ ಮೇಲೆ ದೂರು ದಾಖಲಾಗಿದೆ. ಸಿದ್ಧರಾಮಯ್ಯ ರಾಜೀನಾಮೆ ಕೊಡಬೇಕಲ್ಲವಾ? ಈಶ್ವರಪ್ಪನಿಗೆ ಒಂದು ನ್ಯಾಯ? ಸಿದ್ದರಾಮಯ್ಯಗೆ ಒಂದು ನ್ಯಾಯವೇ? ಸಿದ್ಧರಾಮಯ್ಯನವರೇ ನೀವು ಏನು ಹೇಳಿದ್ದೀರಿ? ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ, ತಲೆ ಬಾಗುತ್ತೇನೆ ಎಂದಿದ್ದೀರಿ. ನಿಮ್ಮ ಪರ ತೀರ್ಪು ಬಂದರೆ ಸತ್ಯಮೇವ ಜಯತೆ, ವಿರುದ್ಧ ಬಂದರೆ ಭಂಡತನ ತೋರಿಸುತ್ತೀರಿ. ನಿಮಗೆ ನಮ್ಮ ಬೆಂಬಲ ಇದೆ ಎಂದು ಎಲ್ಲರೂ ಮೇಲ್ನೋಟಕ್ಕೆ ಹೇಳುತ್ತಾರೆ. ಆದರೆ, ಸಿದ್ದರಾಮಯ್ಯನವರ ಹಿಂದೆ ಬೆಂಬಲ ಕೊಡುವವರು ಎಷ್ಟು ಜನರಿದ್ದಾರೆ. ಕೈಯಲ್ಲಿ ಚಾಕು ಇದೆಯೋ ಗೊತ್ತಿಲ್ಲ. ರಾಜಕಾರಣ ಮಾಡುವಾಗ ನೇರ ರಾಜಕಾರಣ ಮಾಡಿ. ವ್ಯವಸ್ಥೆ ವಿರುದ್ಧ ಕಷ್ಟವಾದರೂ ಎದೆತಟ್ಟಿ ಎದುರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜು ಬಿರಾದಾರ, ಯಲ್ಲಪ್ಪ ಬಿದರಿ, ರಾಹುಲ ಔರಂಗಾಬಾದ, ಶಿಲ್ಪಾ ಕುದರಗೊಂಡ ಇತರರು ಉಪಸ್ಥಿತರಿದ್ದರು.
ವಿಜಯೇಂದ್ರ ಇನ್ನೂ ಎಳಸು ಅವರಿಂದ ಕಲಿಯಬೇಕಾದ್ದು ಏನೂ ಇಲ್ಲ: ಈಶ್ವರಪ್ಪ ವಾಗ್ದಾಳಿ
ಸಿಎಂಗೆ ಹಿಂದು ಧರ್ಮದ ಮೇಲೆ ಭಕ್ತಿ ಇರಲಿ
ಯಾವ ವ್ಯಕ್ತಿ ಕುಂಕುಮ ಕಂಡರೆ, ಕೇಸರಿ ಕಂಡರೆ ಭೂತ ಬಂದಂತೆ ಆಡುತ್ತಿದ್ದ ಸಿಎಂ ಸಿದ್ಧರಾಮಯ್ಯನವರು ಇಂದು ಅರೆಸ್ಟ್ ಆಗ್ತೀವಿ ಎಂದು ಗೊತ್ತಾದಾಗ ತಾಯಿ ಚಾಮುಂಡೇಶ್ವರಿ ಹಾಗೂ ಸವದತ್ತಿ ಎಲ್ಲಮ್ಮನಿಗೆ ಹೋಗುತ್ತಾರೆ. ಕುಂಕುಮ ಹಚ್ಚಲು ಬಂದರೆ ಬೇಡ ಅನ್ನೋರು, ಕೇಸರಿ ರುಮಾಲು ಹಾಕಲು ಬಂದ್ರೆ ಕಿತ್ತು ಬಿಸಾಕುತ್ತಿದ್ದವರು ಇಂದು ತಮ್ಮ ಪತ್ನಿಯ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಹಿಂದುತ್ವದ ಹೆಸರು ಹೇಳಿಕೊಂಡೆ ಅಧಿಕಾರಕ್ಕೆ ಬಂದವರು ನೀವು, ನಿಮಗೆ ಹಿಂದುತ್ವದ ಬಗ್ಗೆ ಭಕ್ತಿ ಇರಲಿ. ಹಿಂದುತ್ವವನ್ನು ಪೂಜಿಸಿದರೆ ಆ ತಾಯಿ ಚಾಮುಂಡೇಶ್ವರಿ ಹಾಗೂ ಯಲ್ಲಮ್ಮ ನಿಮ್ಮನ್ನು ಕಾಪಾಡುತ್ತಾರೆ. ಅಕಸ್ಮಾತಾಗಿ ನೀವು ಡೋಂಗಿ ಭಕ್ತಿ ತೋರಿಸಿದ್ದರೆ ಆ ತಾಯಂದಿರೆ ಇವರನ್ನು ಜೈಲಿಗೆ ಕಳಿಸ್ತಾರೆ ಎಂದು ಈಶ್ವರಪ್ಪ ಕುಟುಕಿದರು.
ಬ್ರಿಗೇಡ್ ಬಗ್ಗೆ ಚರ್ಚಿಸಲು ಇಂದು ಸಭೆ
ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಶಾಸಕ ಯತ್ನಾಳ ಹಾಗೂ ಈಶ್ವರಪ್ಪ ಇಬ್ಬರಿಗೂ ನಾವು ಕೈಯಲ್ಲಿ ಖಡ್ಗ ಕೊಟ್ಟಿದ್ದೇವೆ. ಇಬ್ಬರೂ ಹಿಂದುತ್ವವಾದಿಗಳು. ಒಬ್ಬರ ಮೈಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ರಕ್ತ, ಇನ್ನೊಬ್ಬರ ಮೈಯಲ್ಲಿ ಸಂಗೊಳ್ಳಿ ರಾಯಣ್ಣನ ರಕ್ತ ಹರಿಯುತ್ತಿದೆ. ಇಬ್ಬರೂ ಸೇರಿ ಹಿಂದುತ್ವ ಉಳಿಸಲು ಪ್ರಯತ್ನ ಮಾಡಲಿ, ನಾವು ಇವರ ಬೆನ್ನಹಿಂದೆ ಇರುತ್ತೇವೆ ಎಂದಿದ್ದಾರೆ. ಆ ಕಾರಣಕ್ಕೆ ನಾವು ಬ್ರಿಗೇಡ್ ಮಾಡಲು ಮುಂದಾಗಿದ್ದೇವೆ. ಅ.18ರಂದು ಜಮಖಂಡಿಯಲ್ಲಿ 32 ಸಮಾಜದ ಸಾಧುಸಂತರು ಸೇರಿದ್ದರು, ಅ.20ರಂದು ನಡೆಯಲಿರುವ ಸಭೆಯಲ್ಲಿ 100 ಜನ ಸಾಧುಸಂತರು ಸೇರಲಿದ್ದಾರೆ. ಈ ಸಮಯದಲ್ಲಿ ಬ್ರಿಗೇಡ್ ಗೆ ಏನು ಹೆಸರು ಇಡಬೇಕು, ಇದರ ಮುಂದಿನ ಕಾರ್ಯಚಟುವಟಿಕೆ ಏನು ಎಂದು ಸಾಧು ಸಂತರ ನೇತೃತ್ವದಲ್ಲಿ ಹಾಗೂ ಸುಮಾರು 2500 ಕಾರ್ಯಕರ್ತರ ಜೊತೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.