ಬಯಲುಸೀಮೆ ಮೇಲಿರಲಿ ಸರ್ಕಾರದ ಕಳಕಳಿ: ಮಾಜಿ ಸಚಿವ ಕೆ.ಸುಧಾಕರ್‌

By Kannadaprabha NewsFirst Published Jun 2, 2023, 12:13 PM IST
Highlights

ರಾಜ್ಯದಲ್ಲಿ ಅಪಾರ ಜನ ಬೆಂಬಲದೊಂದಿಗೆ ಅಚ್ಚರಿ ಎಂಬಂತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಸುಭದ್ರ ಸರ್ಕಾರದ ನಿರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಜನರ ಆಶೋತ್ತರಗಳಿಗೆ ಪೂರಕವಾಗಿ ಸರ್ಕಾರ ಕೆಲಸ ಮಾಡಲಿದೆ ಎಂಬ ಆಶಾದಾಯಕ ನಿರೀಕ್ಷೆಯನ್ನು ನಾನು ಕೂಡ ಇಟ್ಟುಕೊಂಡಿದ್ದೇನೆ: ಮಾಜಿ ಸಚಿವ ಕೆ.ಸುಧಾಕರ್‌ 

ಬೆಂಗಳೂರು(ಜೂ.02):  ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿ ಯೋಜನೆಗಳನ್ನು ಜನಮನಕ್ಕೇನೋ ಮುಟ್ಟಿಸಿದೆ. ಕಾಂಗ್ರೆಸ್‌ನ ಯಶಸ್ಸಿನಲ್ಲಿ ಈ ಯೋಜನೆಗಳ ಭರವಸೆ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದು ಕೂಡ ಸತ್ಯ. ಈಗ ಈ ಯೋಜನೆಗಳ ಜೊತೆಗೆ ಒಂದೊಂದೇ ಷರತ್ತುಗಳು ಹೊರಬರುತ್ತಿರುವುದು ಮಾತ್ರ ವಿಷಾದನೀಯ.

ರಾಜ್ಯದಲ್ಲಿ ಅಪಾರ ಜನ ಬೆಂಬಲದೊಂದಿಗೆ ಅಚ್ಚರಿ ಎಂಬಂತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಸುಭದ್ರ ಸರ್ಕಾರದ ನಿರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಜನರ ಆಶೋತ್ತರಗಳಿಗೆ ಪೂರಕವಾಗಿ ಸರ್ಕಾರ ಕೆಲಸ ಮಾಡಲಿದೆ ಎಂಬ ಆಶಾದಾಯಕ ನಿರೀಕ್ಷೆಯನ್ನು ನಾನು ಕೂಡ ಇಟ್ಟುಕೊಂಡಿದ್ದೇನೆ.

ಚುನಾವಣಾ ಭರವಸೆ ಈಡೇರಿಸಲು ಸರ್ಕಾರ ಬದ್ಧ: ಶಾಸಕ ಪ್ರದೀಪ್‌ ಈಶ್ವರ್‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಅಭ್ಯರ್ಥಿಯ ಜೊತೆಗೆ ಪಕ್ಷದ ಮೇಲೆ ನಂಬಿಕೆ ಇಟ್ಟು ತಮ್ಮ ಹಕ್ಕು ಚಲಾಯಿಸುತ್ತಾರೆ. ಆ ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ, ನಿರೀಕ್ಷೆಯಂತೆ ಕೆಲಸ ಮಾಡುವುದು ಈಗ ಕಾಂಗ್ರೆಸ್‌ ಪಕ್ಷ, ಹಿರಿಯ ನಾಯಕರು ಹಾಗೂ ಶಾಸಕರ ಆದ್ಯ ಕರ್ತವ್ಯ. ಕಾಂಗ್ರೆಸ್‌ ಪಕ್ಷಕ್ಕೆ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನಗಳು ಬಂದಿರಬಹುದು, ಆದರೆ 2018ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಶೇಕಡಾವಾರು ಮತ ಗಳಿಕೆ ಪ್ರಮಾಣ ಗಣನೀಯ ಏರಿಕೆ ಕಂಡಿದೆ.

2018ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ 6% ಮತಗಳಿಸಿದ್ದರೆ ಈ ಬಾರಿ 20% ಪಡೆಯುವ ಮೂಲಕ 14% ಮತಗಳಿಕೆ ಹೆಚ್ಚಿಸಿಕೊಂಡಿದೆ. ಕೋಲಾರ ಜಿಲ್ಲೆಯಲ್ಲಿ 2013ರಲ್ಲಿ 12% ನಷ್ಟಿದ್ದ ಬಿಜೆಪಿ ಮತಗಳಿಗೆ ಪ್ರಮಾಣ ಈಗ 15% ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ 5% ಹೆಚ್ಚಳವಾಗಿದ್ದು, 25%ನಿಂದ 29%ಗೆ ಏರಿಕೆಯಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿ ಯೋಜನೆಗಳನ್ನು ಜನಮನಕ್ಕೇನೋ ಮುಟ್ಟಿಸಿದೆ. ಕಾಂಗ್ರೆಸ್‌ನ ಯಶಸ್ಸಿನಲ್ಲಿ ಈ ಯೋಜನೆಗಳ ಭರವಸೆ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದು ಕೂಡ ಸತ್ಯ. ಈಗ ಈ ಯೋಜನೆಗಳ ಜೊತೆಗೆ ಒಂದೊಂದೇ ಷರತ್ತುಗಳು ಹೊರಬರುತ್ತಿರುವುದು ಮಾತ್ರ ವಿಷಾದನೀಯ. ಕಾಂಗ್ರೆಸ್‌ನ ಭರವಸೆಗಳು ಕೇವಲ ಈ ಗ್ಯಾರಂಟಿಗಳಿಗೆ ಮಾತ್ರ ಸೀಮಿತವಲ್ಲ. ಇನ್ನಷ್ಟುಯೋಜನೆಗಳ ಭರವಸೆಯನ್ನು ಕಾಂಗ್ರೆಸ್‌ ನೀಡಿದ್ದು, ಅದನ್ನು ಕೂಡ ಮತದಾರರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅಲ್ಲದೆ, ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಕೈಬಿಡದೆ ಅದರ ಲಾಭವನ್ನು ಜನರಿಗೆ ತಲುಪಿಸುವ ಗುರುತರ ಹೊಣೆ ಹೊಸ ಸರ್ಕಾರದ ಮೇಲಿದೆ.

ಬಯಲುಸೀಮೆಯ ನಿರೀಕ್ಷೆ ಮರೆಯಬೇಡಿ

ಬಯಲುಸೀಮೆಯ ಪ್ರಮುಖ ಭಾಗಗಳಾದ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಿರೀಕ್ಷೆ ಅತ್ಯಧಿಕವಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್‌ ಹೆಚ್ಚು ಜನಮನ್ನಣೆ ಗಳಿಸಿರುವುದರಿಂದ ಇಲ್ಲಿನ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಿ ಜನಜೀವನದ ಗುಣಮಟ್ಟವನ್ನು ಸುಧಾರಿಸಲಿದೆ ಎನ್ನುವ ನಂಬಿಕೆಯನ್ನು ನಮ್ಮ ಬಯಲುಸೀಮೆಯ ಜನರು ಸರ್ಕಾರದ ಮೇಲೆ ಇರಿಸಿದ್ದಾರೆ. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ 2021-22ನೇ ವರದಿಯ ಪ್ರಕಾರ, ಬೆಂಗಳೂರಿನ ತಲಾ ಆದಾಯ 5.41 ಲಕ್ಷ ರು. ಅದೇ ಚಿಕ್ಕಬಳ್ಳಾಪುರದಲ್ಲಿ 1.32 ಲಕ್ಷ ರು. ಹಾಗೂ ಕೋಲಾರದಲ್ಲಿ 1.42 ಲಕ್ಷ ರು. ಇದೆ. ಸಮೀಪದಲ್ಲೇ ಇರುವ ಬೆಂಗಳೂರಿಗೆ ಹೋಲಿಸಿದರೆ ಇವೆರಡೂ ಜಿಲ್ಲೆಗಳ ತಲಾ ಆದಾಯ ತೀರಾ ಕಡಿಮೆ. ಹಿಂದಿನ ಬಿಜೆಪಿ ಸರ್ಕಾರ ಬೆಂಗಳೂರಿಗೆ ಪರ್ಯಾಯವಾಗಿ ಸುತ್ತಮುತ್ತಲಿನ ನಗರಗಳನ್ನು ಬೆಳೆಸುವ ಹಾಗೂ ಬೇರೆ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆ ಸ್ಥಾಪಿಸಲು ಒತ್ತು ನೀಡಿ ತಲಾ ಆದಾಯ ಹೆಚ್ಚಿಸುವ ಪ್ರಯತ್ನ ಮಾಡಿದೆ. ಇದನ್ನು ಇಂದಿನ ಸರ್ಕಾರ ಮುಂದುವರಿಸಿ ತಲಾ ಆದಾಯವನ್ನು ಏರಿಸುವ ಮೂಲಕ ಜನರ ಜೀವನ ಗುಣಮಟ್ಟ ಸುಧಾರಿಸಬಹುದು.

ಬಯಲುಸೀಮೆಯಲ್ಲಿ ಕೃಷಿಯೇ ಜನರ ಪ್ರಮುಖ ಆರ್ಥಿಕ ಆಧಾರ. ಮಳೆ ಅಭಾವದಿಂದಾಗಿ ಶಾಶ್ವತ ನೀರಿಗಾಗಿ ಎತ್ತಿನಹೊಳೆ ಯೋಜನೆ ರೂಪಿಸಿದ್ದು, ಇದಕ್ಕೆ ವೇಗ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿತ್ತು. ಈ ಯೋಜನೆಯನ್ನು ಎರಡೇ ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದು, ನುಡಿದಂತೆ ನಡೆದರೆ ಸಾಕು ಎನ್ನುವ ನಿರೀಕ್ಷೆ ಜನರಲ್ಲಿದೆ. ಹಾಗೆಯೇ ಎಚ್‌.ಎನ್‌.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ಯೋಜನೆಯಿಂದ ಈ ಭಾಗದ ಕೆರೆಗಳು ತುಂಬಿವೆ. ಈ ಯೋಜನೆಗಳನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಇನ್ನಷ್ಟುಕೆರೆಗಳನ್ನು ತುಂಬಿಸುವ ಹಾಗೂ ಅಂತರ್ಜಲ ಮರುಪೂರಣ ಮಾಡುವ ಅಗತ್ಯವಿದೆ. ಇದೇ ಯೋಜನೆಯಲ್ಲಿ ತೃತೀಯ ಹಂತದ ಸಂಸ್ಕರಣಾ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಕೂಡ ಸರ್ಕಾರಕ್ಕಿದೆ. ಮಾವು ಮಾರಾಟ ಹಾಗೂ ರಫ್ತಿನಲ್ಲಿ ಕೋಲಾರ ಮುಂಚೂಣಿಯಲ್ಲಿದೆ. ಅದೇ ರೀತಿ ಈ ಭಾಗದಲ್ಲಿ ಟೊಮೆಟೊ ಬೆಳೆ ಕೂಡ ಪ್ರಾಧಾನ್ಯತೆ ಹೊಂದಿದೆ. ಇವೆರಡಕ್ಕೂ ಸೂಕ್ತವಾದ ಸಂಸ್ಕರಣಾ ಘಟಕ ಹಾಗೂ ಶೀತಲ ಘಟಕವನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಿರುವುದು ತುರ್ತಾಗಿ ಆಗಬೇಕಿರುವ ಕೆಲಸ.

ಹೂವು, ರೇಷ್ಮೆ ಬೆಳೆಗಾರರ ಕೈಹಿಡಿಯಿರಿ

ಈ ಭಾಗದಲ್ಲಿ ಹೂವು ಹಾಗೂ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೂ ಬೆಳೆಗಾರರ ಪ್ರಗತಿಗಾಗಿ ಚಿಕ್ಕಬಳ್ಳಾಪುರದಲ್ಲಿ ಅಂತಾರಾಷ್ಟ್ರೀಯ ಹೂ ಮಾರುಕಟ್ಟೆನಿರ್ಮಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ನೀಡಿದೆ. ಇದನ್ನು ಸಾಕಾರಗೊಳಿಸುವುದು ಈಗಿನ ಸರ್ಕಾರದ ಆದ್ಯತೆಯಾಗಬೇಕು. ಜೊತೆಗೆ, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದಂತೆ ರೇಷ್ಮೆ ಸ್ಥಿರತೆ ನಿಧಿಗೆ 2 ಸಾವಿರ ಕೋಟಿ ರು., ರೀಲರ್‌ಗಳಿಗೆ 3 ಲಕ್ಷ ರು. ಬಡ್ಡಿರಹಿತ ಸಾಲದ ಕಾರ್ಯಕ್ರಮವನ್ನು ಕೂಡ ಶೀಘ್ರ ಜಾರಿ ಮಾಡಬೇಕಿದೆ.

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಪಶು ಭಾಗ್ಯ ಯೋಜನೆಯಡಿ ಉತ್ತಮ ತಳಿಯ ಹಸು/ಎಮ್ಮೆಗಳ ಖರೀದಿಗೆ 3 ಲಕ್ಷ ರು. ವರೆಗೆ ಶೂನ್ಯ ಬಡ್ಡಿದರದ ಸಾಲ, ಹಾಲಿನ ಸಬ್ಸಿಡಿ 5ರಿಂದ 7 ರು. ಹೆಚ್ಚಳ, ಮಹಿಳೆಯರಿಗೆ ಹಸು/ಎಮ್ಮೆ ಖರೀದಿಗೆ ಬಡ್ಡಿರಹಿತ ಸಾಲ, ಜಾನುವಾರು ಸಾಕಾಣಿಕೆದಾರರಿಂದ ಕೆ.ಜಿ.ಗೆ 3 ರು.ನಂತೆ ಸಗಣಿ ಗೊಬ್ಬರ ಖರೀದಿ ಮೊದಲಾದ ಯೋಜನೆಗಳು ಕೂಡ ಬಯಲುಸೀಮೆ ಭಾಗದಲ್ಲಿ ಕೂಡಲೇ ಜಾರಿಗೆ ತಂದರೆ ಅಧಿಕಾರ ಕಲ್ಪಿಸಿದ್ದಕ್ಕೆ ಮತದಾರರಿಗೆ ನ್ಯಾಯ ನೀಡಿದಂತಾಗುತ್ತದೆ. ರಾಜ್ಯದ ಗಡಿಭಾಗಗಳ ಅಭಿವೃದ್ಧಿಗೆ, ಗಡಿ ಕೈಗಾರಿಕಾ ಅಭಿವೃದ್ಧಿ ನಿಗಮ ಆರಂಭಿಸಿ, 5 ಸಾವಿರ ಕೋಟಿ ರು. ನೀಡುವ ಪ್ರಸ್ತಾಪವಿದ್ದರೂ, ಅದರಲ್ಲಿ ಬಾಗೇಪಲ್ಲಿ, ಕೆಜಿಎಫ್‌ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಉಲ್ಲೇಖವಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಸರ್ಕಾರ ಗಮನ ನೀಡಬೇಕಿದೆ. ಮೈಸೂರು ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರು. ಹೂಡಿಕೆ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ 2 ಸಾವಿರ ಕೋಟಿ ರು. ಮೀಸಲಿಟ್ಟು, ಯೋಜನೆಗಳ ಸಮರ್ಪಕ ಜಾರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕಿದೆ.

ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ: ಮಾಜಿ ಸಚಿವ ಸುಧಾಕರ್‌

ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ, ಹಿಂದಿನ ಬಿಜೆಪಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಒಂದು ಮೆಡಿಕಲ… ಕಾಲೇಜು ನಿರ್ಮಿಸಲು ಕ್ರಮ ವಹಿಸಿತ್ತು. ಆ ಬದ್ಧತೆಯಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಅತಿ ಶೀಘ್ರದಲ್ಲಿ ಮೆಡಿಕಲ… ಕಾಲೇಜು ಆರಂಭಿಸಲು ಸಾಧ್ಯವಾಗಿತ್ತು. ರಾಮನಗರದಲ್ಲಿ ಕೂಡ ಮೆಡಿಕಲ… ಕಾಲೇಜು ಆರಂಭಕ್ಕೆ ಹಿಂದಿನ ಬಿಜೆಪಿ ಸರ್ಕಾರದಿಂದ ಚಾಲನೆ ದೊರೆತಿದೆ. ಇನ್ನು ಕೋಲಾರ ಜಿಲ್ಲೆಯಲ್ಲೂ ಮೆಡಿಕಲ… ಕಾಲೇಜು ಆರಂಭಿಸಲು ಈಗಿನ ಸರ್ಕಾರ ಕ್ರಮ ವಹಿಸಬೇಕಿದೆ.

ಮತ್ತೊಂದು ಸುಳ್ಳಾಗದಿರಲಿ

2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮುನ್ನ 173 ಭರವಸೆಗಳನ್ನು ನೀಡಿದ್ದು, ಕೇವಲ 67 ಮಾತ್ರ ಈಡೇರಿಸಲಾಗಿತ್ತು. ಅಂದರೆ ಕೊಟ್ಟ ಮಾತುಗಳಲ್ಲಿ ಶೇ.38ರಷ್ಟು ಮಾತ್ರ ಸಾಕಾರಗೊಂಡಿತ್ತು. ಕೇವಲ ಆದೇಶ ಹಾಗೂ ಅಪೂರ್ಣಗೊಂಡಿದ್ದು 35 ರಷ್ಟಿತ್ತು. ಈ ಬಾರಿ ಗ್ಯಾರಂಟಿಗಳ ಜೊತೆಗೆ ಹಲವಷ್ಟುಭರವಸೆಗಳನ್ನು ನೀಡಿ ಕಾಂಗ್ರೆಸ್‌ ಆಡಳಿತದ ಚುಕ್ಕಾಣಿ ಹಿಡಿದಿದೆ. ಜನರಿಗೆ ಕೊಟ್ಟಮಾತಿನಂತೆಯೇ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರಾಮಾಣಿಕತೆಯನ್ನು ಸರ್ಕಾರ ಪ್ರದರ್ಶನ ಮಾಡಲಿ. ಮತದಾರರ ನಂಬಿಕೆಗೆ ಘಾಸಿಯಾಗದಂತೆ ಎಚ್ಚರ ವಹಿಸಲಿ ಹಾಗೂ ಬಹುಮತಕ್ಕೆ ನ್ಯಾಯ ನೀಡಲಿ ಎಂದು ಆಶಿಸುತ್ತೇನೆ.

click me!