ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಅಸಮಾಧಾನ ಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಂದು ಸಂಜೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಬೆಂಗಳೂರು (ಏ.14): ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಅಸಮಾಧಾನ ಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರೋದು ಪಕ್ಕಾ ಆಗಿದೆ. ಈ ಬಗ್ಗೆ ಮಾತುಕತೆ ನಡೆಸಲು ಡಿಕೆ ಶಿವಕುಮಾರ್ ಜೊತೆಗೆ ಲಕ್ಷ್ಮಣ್ ಸವದಿ ಸಿದ್ದರಾಮಯ್ಯ ಮನೆಗೆ ಆಗಮಸಿ ಚರ್ಚೆ ನಡೆದಿದ್ದು, ಸಂಜೆ ಸವದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಇವರ ಜೊತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಕೂಡ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದು, ಮಹತ್ವದ ಚರ್ಚೆ ನಡೆದಿದೆ.
ಇಂದು ಬೆಳಗ್ಗೆ ಬೆಳಗಾವಿಯಿಂದ ಬೆಂಗಳೂರಿಗೆ ಬಂದ ಲಕ್ಷ್ಮಣ್ ಸವದಿ ಮೊದಲು ಡಿಕೆ ಶಿವಕುಮಾರ್ ಮತ್ತು ರಣದೀಪ್ ಸುರ್ಜೆವಾಲಾ ಅವರ ಜೊತೆಗೆ ರಹಸ್ಯ ಸ್ಥಳದಲ್ಲಿ ಮಾತುಕತೆ ನಡೆಸಿದರು. ಬಳಿಕ ಮೂವರು ಕೂಡ ಸಿದ್ದರಾಮಯ್ಯ ಮನೆಗೆ ಆಗಮಿಸಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಲಕ್ಷ್ಮಣ್ ಸವದಿ ಜೊತೆಗೆ ಇತರ ನಾಯಕರಿಗೂ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರವಾಗಿ ಮಹತ್ವದ ಮಾತುಕತೆ ನಡೆದಿದೆ. ಅನಿಲ್ ಬೆನಕೆ, ಪ್ರಭಾಕರ್ ಕೋರೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಇತರ ನಾಯಕರ ಬಗ್ಗೆ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ. ಯಾರನ್ನು ಸೇರಿಸಿಕೊಳ್ಳಬೇಕು? ಯಾರಿಗೆ ನೋ ಎಂಟ್ರಿ ಎಂಬ ಬಗ್ಗೆ ಕೂಡ ಸಮಾಲೋಚನೆ ನಡೆದಿದೆ.
ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ಅಂತ್ಯವಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ನಮ್ಮ ಕುಟುಂಬಕ್ಕೆ ಅವರು ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಶರತ್ತುಗಳು ಇಲ್ಲದೆ ಸೇರುತ್ತಿದ್ದಾರೆ. ಲಕ್ಷ್ಮಣ ಸವದಿ ಅವರ ಜತೆಗೆ ಇನ್ನು ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಎಲ್ಲರನ್ನೂ ನಾವು ಒಮ್ಮತದಿಂದ ಪಕ್ಷಕ್ಕೆ ಸ್ವಾಗತಿಸುತ್ತೇವೆ.
ಇನ್ನು ಸವದಿ ಈ ಬಗ್ಗೆ ಮಾತನಾಡಿ ಅಥಣಿ ಕ್ಷೇತ್ರದಿಂದಲೇ ನಾನು ಸ್ಫರ್ಧಿಸುತ್ತೇನೆ. ನನ್ನ ಹೊರತಾಗಿ ಬೇರೇ ಯಾರಿಗೂ ಟಿಕೆಟ್ ಕೇಳಿಲ್ಲ. ನಿರಾವರಿ ಯೋಜನೆಗೆ ಅನುದಾನ ಕೇಳಿದ್ದೇನೆ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಸೇರುತ್ತಿದ್ದೇನೆ. ನನ್ನ ಷರತ್ತಿಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಒಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಸವದಿ ಕಾಂಗ್ರೆಸ್ ಸೇರ್ಪಡೆಯನ್ನು ಖಚಿತ ಪಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಸಂಜೆ 4.30 ಗಂಟೆಗೆ ಸವದಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಅವರಿಗೆ ಕಾಂಗ್ರೆಸ್ ಅಥಣಿ ಟಿಕೆಟ್ ಫಿಕ್ಸ್ ಆಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆದಿರುವ ಮಹೇಶ್ ಕುಮಟಳ್ಳಿ ವಿರುದ್ಧವೇ ತೊಡೆ ತಟ್ಟಲಿದ್ದಾರೆ.
ಮುಖಂಡರ ಜತೆ ಮಾತುಕತೆಗೆ ಬೆಂಗಳೂರಿಗೆ ಬಂದ ಲಕ್ಷ್ಮಣ್ ಸವದಿ, ರಹಸ್ಯ ಸ್ಥಳದಲ್ಲಿ ಡಿಕೆಶಿ
ಸತೀಶ್ ಜಾರಕಿಹೊಳಿ ಅನುಪಸ್ಥಿತಿಯಲ್ಲಿ ಈ ಮಹತ್ವದ ಮಾತುಕತೆ ನಡೆದಿದೆ. ಸತೀಶ್ ಜಾರಕಿಹೊಳಿ ಕಿತ್ತೂರು ಕರ್ನಾಟಕ ಉಸ್ತುವಾರಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಜೊತೆಗೆ ಬೆಳಗಾವಿಯ ಹಿರಿಯ ಕಾಂಗ್ರೆಸ್ ನಾಯಕ ಕೂಡ ಆಗಿದ್ದು, ಇವರು ಸವದಿ ಕಾಂಗ್ರೆಸ್ ಸೇರ್ಪಡೆಗೆ ಪೂರ್ಣ ಪ್ರಮಾಣದ ಸಹಮತ ವ್ಯಕ್ತಪಡಿಸಿಲ್ಲ. ಅವರು ತಿರ್ಮಾನ ಮಾಡ್ತಿದ್ದಾರೆ. ಮಾಡಲಿ ಬಿಡಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.