ಬರ ಪರಿಹಾರದ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಆವರಿಸಿರುವ ತೀವ್ರ ಬರದ ಸಮಗ್ರ ಅಧ್ಯಯನ ನಡೆಸಿಲ್ಲ. ಸಚಿವರು, ಜಿಲ್ಲಾ ಉಸ್ತುವಾರಿಗಳು ಹಾಗೂ ಶಾಸಕರು ರೈತರ ಸಮಸ್ಯೆಗಳನ್ನು ಅರಿತುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ: ಕೆ.ಎಸ್.ಈಶ್ವರಪ್ಪ
ರಾಯಚೂರು(ಡಿ.21): ಗ್ಯಾರಂಟಿ ಯೋಜನೆಗಳ ಜಾರಿ, ತೀವ್ರ ಬರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕಾಂಗ್ರೆಸ್ ರಾಜಕೀಯ ಮಾಡುವುದನ್ನು ಬಿಟ್ಟು ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬರ ಪರಿಹಾರದ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಆವರಿಸಿರುವ ತೀವ್ರ ಬರದ ಸಮಗ್ರ ಅಧ್ಯಯನ ನಡೆಸಿಲ್ಲ. ಸಚಿವರು, ಜಿಲ್ಲಾ ಉಸ್ತುವಾರಿಗಳು ಹಾಗೂ ಶಾಸಕರು ರೈತರ ಸಮಸ್ಯೆಗಳನ್ನು ಅರಿತುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬರ ನಿರ್ವಹಣೆಗೆ ಅಗತ್ಯವಾದ ಅನುದಾನ ಜಿಲ್ಲಾಡಳಿತಗಳ ಬಳಿ ಇಲ್ಲದಂತಾಗಿದೆ. ಇರುವ ಅಲ್ಪ ಮೊತ್ತದಿಂದ ಕುಡಿಯುವ ನೀರು, ರೈತರಿಗೆ ಕಾಮಗಾರಿ, ಜಾನುವಾರುಗಳಿಗೆ ಮೇವು ಸಂಗ್ರಹ ಸಾಧ್ಯವಾಗಲಿದ್ದು, ಬರ ಪರಿಹಾರಕ್ಕೆ ಹಣವೇ ಇಲ್ಲದಂತಾಗಿದೆ ಎಂದರು.
undefined
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ: ಸಚಿವ ಬೋಸರಾಜು
ಆಡಳಿತಕ್ಕೆ ಬಂದು ಆರು ತಿಂಗಳು ಗತಿಸುತ್ತಿದ್ದರು ಶಾಸಕರಿಗೆ ಸರಿಯಾದ ರೀತಿಯಲ್ಲಿ ಅನುದಾನ ಹಂಚಿಕೆ ಮಾಡಿಲ್ಲ, ಶಾಸಕರ ವಿವೇಚನಾ ನಿಧಿಗೆ 2 ಕೋಟಿ ರು. ನೀಡಬೇಕು ಆದರೆ ಕೇವಲ 50 ಲಕ್ಷ ರು. ನೀಡಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳಿಗೆ ಅನುದಾನ ಹೊಂದಿಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭವು ಸಹ ತಲುಪುತ್ತಿಲ್ಲ, ಬರೀ ಘೋಷಣೆಗಳನ್ನು ಮಾಡಿದರೆ ಸಾಲದು ಅದನ್ನು ಜಾರಿಗೊಳಬೇಕು, ಜನಸಾಮಾನ್ಯರ ನಿರೀಕ್ಷೆಗಳಿಗೆ ತಕ್ಕಂತೆ ಸರ್ಕಾರವು ಆಡಳಿತ ನಡೆಸಬೇಕು ಎಂದು ಒತ್ತಾಯಿಸಿದರು.
ಕೊರೋನಾ ಮತ್ತೆ ಆರಂಭಗೊಂಡಿದ್ದು ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು, ಬರ ನಿರ್ವಹಣೆ ಹೇಗ ಮಾಡಬೇಕು ಮತ್ತು ಕೇಂದ್ರದಿಂದ ಆರ್ಥಿಕ ನೆರವಿನ ಅಗತ್ಯ ಸೇರಿ ಇತರೆ ಅಂಶಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಕೂಡಲೇ ಸರ್ವ ಪಕ್ಷಗಳ ಸಭೆಯನ್ನು ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದರು.
ಜಾತಿ ಜನಗಣತಿ ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣಿಭೂತರಾಗಿದ್ದಾರೆ. ಹಿಂದೆ ಅವರೇ ಸಿಎಂ ಆಗಿದ್ದಾಗಲು ವರದಿಯನ್ನು ಅಂಗೀಕರಿಸಲು ಹಿಂದೇಟು ಹಾಕಿದ್ದರು. ಇದೀಗ ಜಾತಿ ಗಣತಿಗೆ ವೀರಶೈವರು, ಲಿಂಗಾಯತರು ಹಾಗೂ ಒಕ್ಕಲಿಗರು ವಿರೋಧ ವ್ಯಕ್ತಪಡಿಸುತಿದ್ದಾರೆ. ಕಾಂಗ್ರೆಸ್ ಮಾಡಿದ ಕಿತಾಪತಿಯಿಂದಾಗಿಯೇ ಸ್ವಾಮೀಗಳನ್ನು ಜಾತಿಯಡಿ ಕಾಣುವ ದುಸ್ಥಿತಿ ನಿರ್ಮಾಣಗೊಂಡಿದೆ. ಜಾತಿ ಗಣತಿ ವಿಷಯವಾಗಿ ಎಲ್ಲ ಜಾತಿಗಳ ಸ್ವಾಮಿಗಳು ಇಂದು ಎದ್ದು ಕುಂತಿದ್ದಾರೆ. ಸರ್ಕಾರದ ಶಾಸಕರು ರಾಜೀನಾಮೆ ಕೊಟ್ಟು ಹೊರಗಡೆ ಬಂದು ಹೋರಾಟ ನಡೆಸಲಿ. ಕಾಂತರಾಜ್ ವರದಿ ಸೋರಿಕೆಯಾಗಿದೆಯೋ ಇಲ್ಲವೋ ಎಂಬುವುದನ್ನು ಸರ್ಕಾರವೇ ಸ್ಪಷ್ಟಡಿಸಬೇಕು. ಸಿದ್ದರಾಮಯ್ಯ ಸಿಎಂ ಆಗಿರುವ ತನಕ ಕಾಂತರಾಜ್ ವರದಿ ಜಾರಿಗೆ ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಬಸನಗವಡ ಪಾಟೀಲ್ ಯತ್ನಾಳ ಸೇರಿ 4-5 ಜನರಲ್ಲಿ ಅಸಮಧಾನವಿದ್ದು, ಅವರು ಸ್ವ-ಪಕ್ಷದ ವಿರುದ್ಧವೇ ಮಾತನಾಡುತ್ತಿರುವುದರಿಂದ ಗೊಂದಲ ಸೃಷ್ಠಿಯಾಗುತಿದೆ. ಈ ಕುರಿತು ಕೇಂದ್ರದ ನಾಯಕರು ಸಮಸ್ಯೆಗಳನ್ನು ಆಲಿಸಿದ್ದು ಅದನ್ನು ಸರಿಪಡಿಸಲಿದ್ದಾರೆ. ಸಂಸತ್ ಮೇಲೆ ಹೊಗೆ ಬಾಂಬ್ ದಾಳಿಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಕೈಗೊಂಡಿದ್ದು ಘಟನೆ ಹಿಂದೇ ಯಾರೇ ಇದ್ದರು ಅವರಿಗೆ ಕಾನೂನು ರೀತ್ಯ ಕ್ರಮವಾಗಲಿದೆ. ಪಾಸ್ ನೀಡಿದ ಮಾತ್ರಕ್ಕೆ ಸಂಸದ ಪ್ರತಾಪ ಸಿಂಹ ಅವರನ್ನು ಅಪರಾಧಿ ಎನ್ನಲಾಗುವುದಿಲ್ಲ. ಜನರು ಪಾಸ್ ಕೇಳಿದ್ದಾರೆ ಅವರು ನೀಡಿದ್ದಾರೆ ಅಷ್ಟೇ ಹೊರತು ಇಂತಹ ಘಟನೆ ಸಂಭವಿಸುತ್ತದೆ ಎನ್ನುವುದು ಊಹಿಸಲಾಗುವುದಿಲ್ಲ. ಭದ್ರತಾ ಲೋಪವಾಗಿದ್ದು ಘಟನೆಯನ್ನು ಪಾಠವಾಗಿ ಸ್ವೀಕರಿಸಿ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.