
ಹುಬ್ಬಳ್ಳಿ(ಡಿ.26): ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಮಾನಸಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ, ಏನೇನೋ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬ ಹೇಳಿಕೆಗೆ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಹರಿಪ್ರಸಾದಗೆ ತಿರುಗೇಟು ನೀಡಿದರು.
ಹರಿಪ್ರಸಾದ್ ಕಾಂಗ್ರೆಸ್‌ನಲ್ಲಿ ಲೆಕ್ಕಕ್ಕೆ ಇಲ್ಲದ ನಾಯಕ. ಕಾಂಗ್ರೆಸ್‌ನಲ್ಲಿ ಅವರಿಗೆ ಮಾನಸಿಕ ಹಿಂಸೆ ಆಗಿದೆ. ಹಿಂಸೆ ತಾಳದೇ ಈ ರೀತಿ ಮಾತನಾಡುತ್ತಿದ್ದಾರೆ. ಅವರಿಗೆ ಬಹಳ ಬೆಲೆ ಕೊಡಬೇಕಾಗಿಲ್ಲ. ದೇಶಕ್ಕೆ ಯಾರು ಏನು ಅಂತಾ ಗೊತ್ತು ಎಂದರು.
ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು: ಬಿ.ಕೆ.ಹರಿಪ್ರಸಾದ್
ಬಿಜೆಪಿಯವರು ಬ್ರಿಟಿಷರ ಬೂಟು ನೆಕ್ಕಿದವರು ಎಂಬ ಹೇಳಿಕೆಗೆ ಕಿಡಿಕಾರಿದ ಅವರು, ಹರಿಪ್ರಸಾದ ಒಬ್ಬ ಹಿರಿಯ ರಾಜಕಾರಣಿ. ನಾಲಿಗೆ ಮೇಲೆ ಹಿಡಿತ ಇರಿಸಿಕೊಂಡು ಮಾತನಾಡಬೇಕು. ಅವರ ಮಾತು ಅವರಿಗೆ ಗೌರವ ತರುವುದಿಲ್ಲ. ಹೀಗೆ ಮಾತನಾಡಿದರೆ ದೊಡ್ಡವರಾಗುತ್ತಾರೆ, ವ್ಯಕ್ತಿತ್ವ ಬೆಳೆಯುತ್ತದೆ ಎಂದು ಅವರು ಭಾವಿಸಿದ್ದರೆ ತಪ್ಪು. ಇದು ಅವರ ಹೀನ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಕಳ್ಳನ ಕೈಯಲ್ಲಿ ಬಿಜೆಪಿಯವರು ಕೀಲಿ ಕೈಕೊಟ್ಟಿದ್ದಾರೆ ಎಂಬ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ ಒಬ್ಬ ಹಿರಿಯರು. ಪಕ್ಷದ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಗೌರವ ಕೊಡಬೇಕು. ಯುವಕರಿಗೆ ಆದ್ಯತೆ ಕೊಡಬೇಕು ಎಂದು ಮಾಡಿದ್ದಾರೆ. ನೂತನ ರಾಜ್ಯಾಧ್ಯಕ್ಷರು, ಸೇರಿದಂತೆ ಪದಾಧಿಕಾರಿಗಳಿಗೆ ನಾವು ಎಲ್ಲರೂ ಮಾರ್ಗದರ್ಶನ ಮಾಡಬೇಕು. ನಾನು ಎಲ್ಲ ನಾಯಕರ ಪರವಾಗಿ ಕೇಳಿಕೊಳ್ಳುವೆ ಎಂದರು.
ಕಾಂಗ್ರೆಸ್ ಮುಳುಗುವ ಹಡಗು. ಆ ಪಕ್ಷಕ್ಕೆ ವಿ. ಸೋಮಣ್ಣ ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಂಚರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ? ಇನ್ನು ಇಂಡಿಯಾ ಒಕ್ಕೂಟ ವ್ಯವಸ್ಥೆಯಲ್ಲೇ ಸರಿಯಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಅಂತಾ ಚರ್ಚೆ ಆದಾಗ ಮತ್ತಷ್ಟು ಬಿರುಕು ಮೂಡಿದೆ. ಲೋಕಸಭಾ ಚುನಾವಣೆ ಬರುವುದರೊಳಗಾಗಿ ಇಂಡಿಯಾ ಛಿದ್ರವಾಗಿ ಹೋಗುತ್ತದೆ ಎಂದು ಭವಿಷ್ಯ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.