Hubballi: ನಾಯಕರನ್ನೇ ಚಾಲೆಂಜ್‌ ಮಾಡಿದರೆ ಪಕ್ಷಕ್ಕಿಲ್ಲ ಉಳಿಗಾಲ: ವೀರಪ್ಪ ಮೊಯ್ಲಿ

By Girish Goudar  |  First Published Mar 17, 2022, 4:08 AM IST

*   ನಾಯಕತ್ವ ಪ್ರಶ್ನಿಸುವುದು ಸರಿಯಲ್ಲ
*  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ಸಂಪೂರ್ಣ ನಿಷ್ಕ್ರೀಯ
*  ರಾಜ್ಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ 


ಹುಬ್ಬಳ್ಳಿ(ಮಾ.17): ‘ನಮ್ಮ ನಾಯಕರನ್ನೇ ನಾವು ಚಾಲೆಂಜ್‌’ ಮಾಡಿದರೆ ನಮ್ಮ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ(Veerappa Moily) ಹೇಳಿದರು. ಪಂಚರಾಜ್ಯ ಚುನಾವಣೆಯಲ್ಲಿ(Election) ಸೋತ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರ(AICC President) ಬದಲಾವಣೆ ಕುರಿತಂತೆ ಎದ್ದಿರುವ ಮಾಧ್ಯಮದವರ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರನ್ನು ಚಾಲೆಂಜ್‌ ಮಾಡಲು ಹೋಗಬಾರದು ಎಂದರು.

ಪಕ್ಷದ ರಾಷ್ಟ್ರೀಯ ನಾಯಕರ ಬದಲಾಯಿಸಬೇಕೆಂದು ಕಪಿಲ್‌ ಸಿಬಲ್‌ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಅದು ಅವರ ವೈಯಕ್ತಿಕ ವಿಚಾರ ಎಂದ ಅವರು, ಜಿ-23ಗೆ ನಾನೂ ಸಹಿ ಹಾಕಿದ್ದೇನೆ. ಕಾಂಗ್ರೆಸ್‌(Congress) ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕೆಂದು ಸಹಿ ಹಾಕಿದ್ದೆ. ಹಾಗಂತ ಪಕ್ಷದ ಬುಡಕ್ಕೆ ಕೈ ಹಾಕುವುದು ಸರಿಯಲ್ಲ. ನಾಯಕತ್ವವನ್ನೇ(Leadership) ಪ್ರಶ್ನಿಸುವುದು ಸರಿಯಲ್ಲ ಎಂದು ನುಡಿದರು.
ನಾನು ಜಿ-23 ನಿರ್ಧಾರಕ್ಕೆ ವಿರೋಧಿಸಿದ್ದೇನೆ. ನಾನೀಗ ಜಿ-23 ಜತೆಗಿಲ್ಲ. ಸೋನಿಯಾ ಗಾಂಧಿ(Sonia Gandhi) ಕೈ ಬಲಪಡಿಸುವುದು ನಮ್ಮ ಮುಂದಿರುವ ಗುರಿ ಎಂದ ಅವರು, ಪಂಚರಾಜ್ಯಗಳ ಸೋಲಿನ ಪರಾಮರ್ಶೆ ನಡೆದಿದೆ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾಯಕರ ಬದಲಾವಣೆ ಅಸಾಧ್ಯ ಎಂದರು.

Tap to resize

Latest Videos

ಬರೀ ಟ್ವೀಟ್‌ ಮಾಡಿದ್ರೆ ಪಕ್ಷ ಉದ್ಧಾರವಾಗಲ್ಲ: ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ

ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಹಿಂದೆ ಚುನಾವಣೆಯನ್ನು ಗೆದ್ದಿಲ್ಲವೇ ಎಂದು ಪ್ರಶ್ನಿಸಿದ ಅವರು, ಗೆದ್ದರೂ ಪ್ರಧಾನಿ ಆಗುವ ಗೋಜಿಗೆ ಅವರು ಹೋಗಲಿಲ್ಲ. ಅದು ಅವರ ತ್ಯಾಗವನ್ನು ಸಾಬೀತುಪಡಿಸುತ್ತದೆ ಎಂದರು. ಕಾಂಗ್ರೆಸ್‌ ರಾಷ್ಟ್ರೀಯ ನಾಯಕತ್ವ ಕೊರತೆಯಿಂದ ಬಿಜೆಪಿ(BJP) ಪ್ರಬಲವಾಗಿದೆ ಎಂಬ ಮಾತನ್ನು ನಾನು ಒಪ್ಪಲ್ಲ ಎಂದು ನುಡಿದರು.

ಕೆಪಿಸಿಸಿ ಕಿವಿ ಹಿಂಡ್ತೇನೆ:

ರಾಜ್ಯದಲ್ಲಿನ(Karnataka) ಜನರ ಸಮಸ್ಯೆಗಳಿಗೆ ರಾಜ್ಯದ ಬಿಜೆಪಿ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ರಾಜ್ಯದ ಕಾಂಗ್ರೆಸ್‌ ನಾಯಕರು ಕೂಡ ವೈಯಕ್ತಿಕ ದೋಷಾರೋಪಣೆಗೆ ಇಳಿಯದೇ ಜನರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವ ಕೆಲಸವಾಗಬೇಕು ಎಂದ ಅವರು, ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ಕಿವಿ ಹಿಂಡುವ ಕೆಲಸವನ್ನೂ ಮಾಡುತ್ತೇನೆ ಎಂದರು.

ಹಾಗಂತ ಕೆಪಿಸಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಅಂತೇನೂ ಇಲ್ಲ. ಈಗ ರಾಜ್ಯ ಕಾಂಗ್ರೆಸ್‌ ಸ್ಪಂದಿಸುತ್ತಿದೆ. ಆದರೆ ಇದು ಇನ್ನಷ್ಟುಜಾಸ್ತಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ನಾನು ಕೂಡ ರಾಜ್ಯದ ಜನತೆಯ ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಏಪ್ರಿಲ್‌ನಿಂದ ಪ್ರವಾಸ ಆರಂಭಿಸುತ್ತೇನೆ ಎಂದು ನುಡಿದರು.

ಮಹದಾಯಿ; ಮೇಕೆದಾಟು

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ಸಂಪೂರ್ಣ ನಿಷ್ಕ್ರೀಯವಾಗಿದೆ. ರಾಜ್ಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಇವರು ಆಡಿದ್ದೇ ಆಟವಾದಂತಾಗಿದೆ. ಮಹದಾಯಿ ವಿಷಯವಾಗಿ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದ್ದೆ. ಆದರೆ ಅಷ್ಟರಲ್ಲೇ ತಮ್ಮ ಸರ್ಕಾರ ಹೋಯಿತು. ಆನಂತರ ದೇವೇಗೌಡರ(HD Devegowda) ಸರ್ಕಾರ ಬಂತು. ಅವರು ಮುಂದುವರಿಸಲಿಲ್ಲ. ಇದೀಗ ಮಾತುಕತೆಯ ಹಂತವೆಲ್ಲ ದಾಟಿದೆ. ಇದೀಗ ನ್ಯಾಯಾಧಿಕರಣ ತೀರ್ಪಿನ ಅನ್ವಯ 13.5 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ವಿಚಾರವಾಗಿ ಕ್ರಮ ಕೈಗೊಳ್ಳಬೇಕು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆಯನ್ನೇ ಮಾಡುತ್ತಿಲ್ಲ. ಇನ್ನಾದರೂ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದರು.

Karnataka Politics : ನಾನು ಎಚ್‌ಡಿಕೆ ಮನೆಗೆ ಹೋಗಿ ತಪ್ಪೆಸಗಿದೆ : ಮೊಯ್ಲಿ

ರಾಜ್ಯ ಹಾಗೂ ಕೇಂದ್ರದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿದೆ. ಆದರೆ ಕೇಂದ್ರ ಸರ್ಕಾರ ಬರೀ ಭಾಷಣದ ಮೂಲಕ ಹೊಟ್ಟೆ ತುಂಬಿಸುವ ಪ್ರಯತ್ನ ಮಾಡುತ್ತಿದೆ. ಮೇಕೆದಾಟು ಯೋಜನೆ ಕುರಿತು ಕೂಡ ಅನಗತ್ಯ ವಿಳಂಬವಾಗಿದೆ ಎಂದು ನುಡಿದ ಅವರು, ಅತ್ತ ಎಪಿಎಂಸಿ, ಜಿಪಂ, ತಾಪಂ ಚುನಾವಣೆಯನ್ನೂ ನಡೆಸುತ್ತಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ. ಸಾಂವಿಧಾನಿಕವಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆಗಳನ್ನೇ ನಾಶಮಾಡಲಾಗುತ್ತಿದೆ ಎಂದರು.

ಇನ್ನೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ(HDMC) ಚುನಾವಣೆ ಏಳು ತಿಂಗಳು ಕಳೆದರೂ ಮೇಯರ್‌-ಉಪಮೇಯರ್‌ ಚುನಾವಣೆ ನಡೆಸಿಲ್ಲ. ಹೀಗಾಗಿ ಚುನಾವಣೆ ನಡೆದರೂ ಅಧಿಕೃತವಾಗಿ ಸದಸ್ಯರಾದಂತಾಗಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಡಿ.ಆರ್‌. ಪಾಟೀಲ, ವಸಂತ ಲದ್ವಾ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.
 

click me!