
ಮೈಸೂರು (ಅ.23): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರಲು ಮತ್ತು ಅವರನ್ನು ರಾಜಕೀಯವಾಗಿ ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ನಡೆದಿರುವ ಬಹುಚರ್ಚಿತ 'ಸ್ಟಿಂಗ್ ಆಪರೇಷನ್' ಹಿಂದೆ ಕಾಂಗ್ರೆಸ್ ಪಕ್ಷದವರೇ ಭಾಗಿಯಾಗಿದ್ದಾರೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಯತೀಂದ್ರ, 'ತಂದೆಯವರ ಹೆಸರನ್ನು ಹಾಳುಮಾಡಲೆಂದೇ ಈ ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಕಳೆದ 40 ವರ್ಷಗಳಿಂದ ಅವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸ್ವಚ್ಛ ರಾಜಕಾರಣ ಮಾಡಿದ್ದಾರೆ. ಆದರೆ ಅವರ ತೇಜೋವಧೆ ಮಾಡಿ, ಅವರ ರಾಜಕೀಯ ವರ್ಚಸ್ಸನ್ನು ಧೂಳೀಪಟ ಮಾಡಲು ಯತ್ನಿಸಲಾಗುತ್ತಿದೆ. ಚುನಾವಣಾ ಟಿಕೆಟ್ ಪಡೆಯಲು ತಂದೆಯವರನ್ನು ಬ್ಲ್ಯಾಕ್‌ಮೇಲ್ ಮಾಡುವ ಕೀಳು ಮಟ್ಟದ ತಂತ್ರ ಇದಾಗಿದೆ. ಅತ್ಯಂತ ನೋವಿನ ವಿಷಯವೆಂದರೆ, ಈ ಕುತಂತ್ರದ ಹಿಂದೆ ನಮ್ಮ ಪಕ್ಷದವರೇ (ಕಾಂಗ್ರೆಸ್) ಇರುವುದು. ಇದರಿಂದ ತಂದೆಯವರು ತೀವ್ರ ಮನನೊಂದಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ತನಿಖೆ ಕುರಿತು ಪ್ರತಿಕ್ರಿಯಿಸಿದ ಅವರು, 'ಈಗಾಗಲೇ ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ತಂದೆಯವರಿಗೂ ಸಂಪೂರ್ಣ ಮಾಹಿತಿ ಬಂದಿದೆ. ಈ ಷಡ್ಯಂತ್ರದಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರೂ, ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ಬಂಧಿಸುವಂತೆ ತಂದೆಯವರೇ ಸ್ಪಷ್ಟವಾಗಿ ಹೇಳಿದ್ದಾರೆ' ಎಂದು ತಿಳಿಸಿದರು.
'ಸತ್ಯ ನಮ್ಮ ಕಡೆ ಇದೆ. ಯಾವ ಸತ್ಯವೂ ಹೆಚ್ಚು ಕಾಲ ಅಡಗಿರುವುದಿಲ್ಲ, ಅಂತಿಮವಾಗಿ ಹೊರಬಂದೇ ಬರುತ್ತದೆ. ಪ್ರಸ್ತುತ ನಡೆಯುತ್ತಿರುವ ಪೊಲೀಸ್ ತನಿಖೆಯ ಮೇಲೆ ನಮಗೆ ನಂಬಿಕೆ ಇದೆ. ಒಂದು ವೇಳೆ ಈ ತನಿಖೆ ಸರಿಯಾದ ದಾರಿಯಲ್ಲಿ ಸಾಗದಿದ್ದರೆ, ಉನ್ನತ ಮಟ್ಟದ ತನಿಖೆ ನಡೆಸುವಂತೆ ಖಂಡಿತವಾಗಿಯೂ ಒತ್ತಾಯಿಸುತ್ತೇವೆ' ಎಂದು ಡಾ. ಯತೀಂದ್ರ ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.