ಪೊಲೀಸ್ ಇದೆ ಎಂದು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ, ನಾವು ಬಳೆ ತೊಟ್ಟಿಲ್ಲ, ನಾನೂ ಕಪ್ಪು ಬಾವುಟ ಹಿಡಿದೇ ರಾಜಕೀಯಕ್ಕೆ ಬಂದವನು, ಬಿಜೆಪಿಯವರು ಮಹಾ ಪುಕ್ಕಲರು: ಸಿದ್ದರಾಮಯ್ಯ
ಶೃಂಗೇರಿ/ಚಿಕ್ಕಮಗಳೂರು(ಆ.20): ಕೊಡಗು ಹಾಗೂ ಚಿಕ್ಕಮಗಳೂರಲ್ಲಿ ತಮ್ಮ ವಿರುದ್ಧ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾತ್ಮ ಗಾಂಧಿ ಅವರನ್ನೇ ಕೊಂದವರು ನನ್ನನ್ನು ಬಿಡ್ತಾರಾ? ಆದರೆ, ಸರ್ಕಾರ, ಪೋಲೀಸ್ ಬಲ ಇದೆ ಎಂದು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಾವ್ಯಾರೂ ಕೈಗೆ ಬಳೆ ತೊಟ್ಟುಕೊಂಡಿಲ್ಲ. ಇಂಥದ್ದನ್ನು ನಾನು ಎಷ್ಟೋ ಕಂಡಿದ್ದೇನೆ. ನಾನೂ ಕಪ್ಪು ಬಾವುಟ ಹಿಡಿದೇ ರಾಜಕೀಯಕ್ಕೆ ಬಂದಿದ್ದು, ಬಿಜೆಪಿಯವರು ಮಹಾ ಪುಕ್ಕಲರು ಎಂದು ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿಯವರು ಪಾಪದ ಹುಡುಗರನ್ನು ಮುಂದೆ ಬಿಟ್ಟು ನನ್ನ ವಿರುದ್ಧ ಕಪ್ಪು ಬಾವುಟ ಹಿಡಿಸಿ ಧಿಕ್ಕಾರ ಕೂಗಿಸುತ್ತಿದ್ದಾರೆ. ನಮಗೂ ಕಾರ್ಯಕರ್ತರಿದ್ದಾರೆ, ರಾಜಕೀಯ ಗೊತ್ತಿದೆ. ಮಡಿಕೇರಿಯಲ್ಲಿ ಆ.26ರಂದು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುತ್ತಿಗೆ ಸಹಿತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿರುವುದು ತಪ್ಪು: ಕೇಂದ್ರ ಸಚಿವ ಜೋಶಿ
ಇದೇ ವೇಳೆ, ಕೊಡಗಿನಲ್ಲಿ ನನ್ನ ವಿರುದ್ಧ ಸರ್ಕಾರವೇ ಪ್ರತಿಭಟನೆ ಮಾಡಲು ಕುಮ್ಮಕ್ಕು ನೀಡಿದೆ. ಭದ್ರತೆ ನೀಡುವುದು ಪೊಲೀಸರ ಜವಾಬ್ದಾರಿ, ಮೂರ್ನಾಲ್ಕು ಕಡೆ ಪ್ರತಿಭಟನೆ ನಡೆಯುವುದು ಗೊತ್ತಿದ್ದರೂ ಪೊಲೀಸರು ಸುಮ್ಮನಿದ್ದರು. ಅದೇ ಮುಖ್ಯಮಂತ್ರಿ ಬಂದಿದ್ದರೆ ಪೊಲೀಸರು ಹೀಗೇ ಮಾಡ್ತಿದ್ರಾ? ಎಂದು ಕಿಡಿಕಾರಿದರು.
ಮೈ ಉರಿ:
ನಾನು ಸಾವರ್ಕರ್ ಬಗ್ಗೆ ಮಾತನಾಡಿದ್ದೇನೆ. ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಾಗ,ಇನ್ನು ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟು ಬಿಡುಗಡೆಗೊಂಡಿದ್ದರು. ವಿ.ಡಿ. ಸಾವರ್ಕರ್‌ನನ್ನು ಈಗ ವೀರ ಸಾವರ್ಕರ್ ಎಂದು ಕರೆಯುತ್ತಿದ್ದಾರೆ. ಸತ್ಯ ಹೇಳಿದ್ದಕ್ಕೆ ಬಿಜೆಪಿಯವರಿಗೆ ಮೈಯೆಲ್ಲ ಉರಿ ಹತ್ತಿಕೊಂಡಿದೆ ಎಂದು ಮತ್ತೆ ಟೀಕಿಸಿದರು.
ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಹದಗೆಟ್ಟ ಕಾನೂನು ಸುವ್ಯವಸ್ಥೆ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ. 4 ವರ್ಷಗಳಲ್ಲಿ ಬಿಜೆಯವರು ಏನು ಮಾಡಿದ್ದಾರೆ? ಕೇವಲ ದೆಹಲಿ ಪ್ರವಾಸ, ಆಡಳಿತ ವೈಪಲ್ಯಗಳೇ ಬಿಜೆಪಿ ಸರ್ಕಾರದ ಸಾಧನೆಗಳು. ಯೂಡಿಯೂರಪ್ಪ 2 ವರ್ಷ, ಬಸವರಾಜ್ ಬೊಮ್ಮಾಯಿ 1 ವರ್ಷ, ಕುಮಾರಸ್ವಾಮಿ 1 ವರ್ಷ 2 ತಿಂಗಳು ಆಡಳಿತ ನಡೆಸಿದರು. ಅವರು ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಾರೆ. ಪಟ್ಟಿಕೊಡಿ ಎಂದರೆ ಕೊಡುವುದಿಲ್ಲ. 2015ರ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯ ಭರವಸೆಗಳೇ ಇನ್ನೂ ಈಡೇರಿಲ್ಲ ಎಂದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕಾಪಾಡಿ ಉತ್ತಮ ಆಡಳಿತ ನೀಡಬೇಕು. ಸುಮ್ಮನೆ ಜನರ ಕೆಲಸ ಮಾಡಬೇಕು. ಇಲ್ಲದಿದ್ದರೆ ತೊಲಗಬೇಕು. ಜೂನ್‌ನಿಂದ ರಾಜ್ಯದಲ್ಲಿ ಅತಿವೃಷ್ಟಿ ಉಂಟಾಗಿ ಸಾಕಷ್ಟು ಹಾನಿಯಾಗಿದೆ. ಈವರೆಗೂ ಒಂದು ರು. ಪರಿಹಾರ ಕೂಡ ನೀಡಿಲ್ಲ. ಅಡಕೆ, ಕಾಫಿ, ಮೆಣಸು ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಪರಿಹಾರ ನೀಡಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲವಾಗಿದೆ. ಜನರು ರಾಜ್ಯದಲ್ಲಿ ಮೊತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದರು.