
ಉಡುಪಿ (ಜ.23): ‘ಈ ಹಿಂದೆ ಹಿಟ್ಲರ್ ಸ್ವಲ್ಪ ದಿನ ಮೆರೆದ, ಆಮೇಲೆ ಏನಾಯ್ತು? ಮುಸಲೋನಿಯ ಕಥೆ ಏನಾಯ್ತು? ಫ್ರ್ಯಾಂಕೋ ಏನಾದ? ಸರ್ವಾಧಿಕಾರಿಗಳು ಸ್ವಲ್ಪ ದಿನ ಮೆರೆಯುತ್ತಾರೆ, ಆಮೇಲೆ ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ. ಮೋದಿಯೂ ಹೀಗೆ ಸ್ವಲ್ಪ ದಿನ ಮೆರೆಯುತ್ತಾರೆ. ಆಮೇಲೆ ಜನರೇ ಬುದ್ಧಿ ಕಲಿಸುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮೋದಿಯವರು ದೇಶದ ಪ್ರಧಾನಿಯಾಗಿ ರಾಜ್ಯಕ್ಕೆ ಬೇಕಾದಷ್ಟುಸಲ ಬರಬಹುದು. ಆದರೆ, ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅದು ಅಸಾಧ್ಯ. ಕರ್ನಾಟಕಕ್ಕೆ ಅವರು 100 ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ರಾಜ್ಯದ ಜನಕ್ಕೆ ಬಿಜೆಪಿ ಮೇಲೆ ಭ್ರಮನಿರಸನವಾಗಿದೆ ಎಂದರು.
ಸಿಎಂ ಬೊಮ್ಮಾಯಿ ಮನೆ ಹಾಳಾಗ ಎಂದ ಸಿದ್ದುಗೆ ತಿರುಗೇಟು ನೀಡಿದ ಸಚಿವ ಸೋಮಣ್ಣ
ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಕಿಡಿ ಕಾರಿದ ಸಿದ್ದರಾಮಯ್ಯ, ಅಮಿತ್ ಶಾ ಅವರು ಮೈಸೂರಿಗೆ ಬಂದು ‘ಆಪರೇಷನ್ ಓಲ್ಡ್ ಮೈಸೂರು ಮಾಡುತ್ತೇವೆ’ ಎಂದು ಹೇಳಿದ ಕೂಡಲೇ ಬಿಜೆಪಿಯವರು ಗೆದ್ದು ಬಿಡುತ್ತಾರೆಯೇ? ‘ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಎಷ್ಟುಬಾರಿ ಹೋದರು? ಅಲ್ಲಿ ಏನಾಯ್ತು? ಮಮತಾ ಬ್ಯಾನರ್ಜಿಯನ್ನು ಅಧಿಕಾರಿಂದ ಕೆಳಗಿಳಿಸಲು ಸಾಧ್ಯವಾಯಿತಾ? ಕರ್ನಾಟಕಕ್ಕೆ ಬಂದರೂ ಅಮಿತ್ ಶಾಗೆ ಅದೇ ಗತಿ ಆಗುತ್ತದೆ’ ಎಂದು ಕುಟುಕಿದರು.
ಕರಾವಳಿ ಹಿಂದುತ್ವದ ಲ್ಯಾಬೋರೇಟರಿ: ಬಳಿಕ, ‘ಪ್ರಜಾಧ್ವನಿ’ ಸಮಾವೇಶದಲ್ಲಿ ಮಾತನಾಡಿ, ಕರಾವಳಿಯನ್ನು ಬಿಜೆಪಿ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಇಲ್ಲಿನ ಯುವಕರು ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಪಶುಗಳಾತ್ತಿದ್ದಾರೆ. ಭಯೋತ್ಪಾದನೆ ಆರಂಭವಾದದ್ದೇ ಗೋಡ್ಸೆಯಿಂದ. ಹಿಂದುತ್ವ ಎಂಬ ಶಬ್ದ ಹುಟ್ಟುಹಾಕಿದ್ದೇ ಸಾವರ್ಕರ್. ಬಿಜೆಪಿಯವರ ಹಿಂದುತ್ವವೆಂದರೆ ಅದು ಗೋಡ್ಸೆ, ಸಾವರ್ಕರ್ ಅವರ ಹಿಂದುತ್ವ. ನಾವು ಹಿಂದುಗಳು, ಹಿಂದುತ್ವವಾದಿಗಳಲ್ಲ.
ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ ಜೆಡಿಎಸ್: ಸಿದ್ದರಾಮಯ್ಯ
ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎನ್ನುವುದು ಹಿಂದುತ್ವವಾದಿಗಳ ಅಜೆಂಡಾ. ಅವರು ಸಂವಿಧಾನದ ಮೇಲೆ ಗೌರವ ಇಲ್ಲದವರು, ದೇಶ ವಿರೋಧಿಗಳು. ನಾವು ಅಪ್ಪಟ ಹಿಂದುಗಳು, ಹಿಂದುವಾದಿಗಳು, ಆದರೆ ಹಿಂದುತ್ವವಾದಿ, ಮನುವಾದಿಗಳಲ್ಲ. ಭಯೋತ್ಪಾದನೆಯನ್ನು ನಾವು ಯಾವತ್ತೂ ಖಂಡಿಸುತ್ತೇವೆ. ಆದರೆ, ಹಿಂದುತ್ವದ ಹೆಸರಲ್ಲಿ ಸುಳ್ಳು ಹೇಳಿಕೊಂಡು ಮನುವಾದ ಮಾಡುವವರನ್ನು ಕಂಡರೆ ನಮಗೆ ಆಗುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.