
ದೇವದುರ್ಗ (ರಾಯಚೂರು) (ಜ.13): ಬಿಜೆಪಿಗರು ಮೀಸಲಾತಿಯನ್ನು ಅಪ್ರಸ್ತುತ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು. ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಿಣಿ ಸೇತುವೆ ಸಮೀಪದಲ್ಲಿರುವ ಕಲಬುರಗಿ ವಿಭಾಗದ ಕಾಗಿನೆಲೆ ಕನಕಗುರು ಪೀಠದಲ್ಲಿ ಗುರುವಾರ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವದ ಮೊದಲ ದಿನ ನಡೆದ ಹಾಲುಮತ ಕಲಾ ಪ್ರಕಾರಗಳು ಮತ್ತು ಕಲಾವಿದರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದುವರೆದ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ನೀಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೀಸಲಾತಿ ವಿರೋಧಿಗಳಾಗಿದ್ದಾರೆ. ಸಮಾಜದಲ್ಲಿ ಯಾರು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ್ದಾರೋ ಅವರಿಗೆ ಮೀಸಲಾತಿ ನೀಡಬೇಕು. ಆರ್ಥಿಕವಾಗಿ ಹಿಂದೂಳಿದವರಿಗೂ ಮೀಸಲಾತಿ ನೀಡಬೇಕು ಎಂದು ಎಲ್ಲೂ ಹೇಳಿಲ್ಲ. ಅವರು ಮೀಸಲಾತಿ ಕೊಡು ಎಂದು ಕೇಳಿಲ್ಲ. ಆದರೂ ಸಹ ಮೋದಿ ಮೀಸಲಾತಿ ಕೊಟ್ಟಿದ್ದಾರೆ. ಇದೀಗ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬಹುಸಂಖ್ಯಾತರು ಆದ ಹಿಂದುಳಿದವರು, ದಲಿತರಿಗೆ ಧ್ವನಿಯೇ ಇಲ್ಲದಂತ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಲೀಡರ್ ಆಗುವ ಭ್ರಮೆ ಬಿಡಲಿ: ಕೆ.ಎಸ್.ಈಶ್ವರಪ್ಪ ಲೇವಡಿ
1992ರಲ್ಲಿ ಕೇಂದ್ರ ಸರ್ಕಾರ ಮೀಸಲಾತಿ ಶೇ.50ರಲ್ಲಿ ಶೇ.49.5 ಮಾಡಿತ್ತು. ಬಹುಸಂಖ್ಯಾತರದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಅನುಕೂಲವಾಗಿತ್ತು. ಅದರೆ, ಪ್ರಧಾನಿ ನರೇಂದ್ರ ಮೋದಿ ಅವರು ಯಾರೂ ಕೇಳದಿದ್ದರೂ ಸಹ ಮುಂದುವರೆದ ಸಮುದಾಯಕ್ಕೆ ಶೇ.10 ಮೀಸಲಾತಿ ಕೊಟ್ಟು ಮೀಸಲಾತಿ ವಿರೋಧಿಗಳಾಗಿದ್ದಾರೆ ಎಂದು ದೂರಿದರು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್ಸಿಗೆ ಶೇ.15 ರಿಂದ ಶೇ.17 ಹಾಗೂ ಎಸ್ಟಿಗೆ ಶೇ.3ರಿಂದ ಶೇ.7ಕ್ಕೆ ಮಾಡಿ ಮೀಸಲಾತಿ ಪ್ರಮಾಣವನ್ನು ಶೇ.65.5 ಕ್ಕೆ ಏರಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆ ಪ್ರಸ್ತಾವನೆಯನ್ನು ಮೂಲೆಗುಂಪು ಮಾಡಿ ಹೆಚ್ಚುವರಿ ಮೀಸಲು ಕಲ್ಪಿಸಲಾಗಿದೆ ಎಂದು ಸುಳ್ಳು ಹೇಳುವ ಮೂಲಕ ಸಮಾಜಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೂ ಕೂಡ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕುರುಬರಿಗೆ ಎಸ್ಟಿ ಮೀಸಲಾತಿ ಕೊಡಿಸಲು ಸಾಧ್ಯವಾಗಿಲ್ಲ. ಹೋರಾಟದ ಹೆಸರಿನಲ್ಲಿ ಟೋಂಗಿತನವನ್ನು ಪ್ರದರ್ಶಿಸಿ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ಧಮ್ ಇಲ್ಲ. ತಾಕತಿದ್ದರೆ ಕುರುಬರಿಗೆ ಎಸ್ಟಿ ಮೀಸಲು ಒದಗಿಸಲಿ ನಾನು ಸಹ ಸಂತೋಷ ಪಡುವುದಾಗಿ ಎಂದು ತಿಳಿಸಿದರು.
ಸಿದ್ದುಗೆ ಕ್ಷೇತ್ರ ಬಿಟ್ಟುಕೊಡಲು ಯಾವುದೇ ಷರತ್ತು ವಿಧಿಸಿಲ್ಲ: ಶಾಸಕ ಶ್ರೀನಿವಾಸಗೌಡ
ಸಮಾರಂಭದ ಸಾನ್ನಿಧ್ಯವನ್ನು ಕಾಗಿನೆಲೆ ಪೀಠದ ನಿರಂಜನಪುರಿ ಸ್ವಾಮೀಜಿ, ಹೊಸದುರ್ಗ ಪೀಠದ ಈಶ್ವರನಂದಪುರಿ ಸ್ವಾಮೀಜಿ, ಕನಕ ಗುರು ಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ಅವರು ವಹಿಸಿದರು. ಎಂಎಲ್ಸಿ ಎಚ್.ವಿಶ್ವನಾಥ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕರಾದ ಸತೀಶ್ ಜಾರಕಿಹೊಳೆ, ಎಚ್.ಎಂ ರೇವಣ್ಣ, ಬಸನಗೌಡ ದದ್ದಲ, ಬಸವನಗೌಡ ತುರುವಿಹಾಳ, ಮಾಜಿ ಸಂಸದ ಬಿ.ವಿ.ನಾಯಕ, ರಾಜಾ ವೆಂಕಟಪ್ಪ ನಾಯಕ, ಹಂಪಯ್ಯ ನಾಯಕ, ಹನುಮಂತಪ್ಪ ಆಲ್ಕೋಟ್, ರಾಮಚಂದ್ರಪ್ಪ, ಬಸವಂತಪ್ಪ, ಅಮೃತ್ ರಾವ್ ಚಿಕ್ಕೋಡೆ, ರಾಜಶೇಖರ ನಾಯಕ, ಶಿವಣ್ಣ ತಾತಾ, ಕೆ.ಕರಿಯಪ್ಪ ಸಿಂಧನೂರು, ಹಾಲಪ್ಪ ಲಿಂಗದಹಳ್ಳಿ, ಮಂತೇಶ ಕೌಲಗಿ ವಕೀಲರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.