ಗೃಹ ಸಚಿ​ವರು ರಾಜೀನಾಮೆ ನೀಡ​ದಿ​ದ್ದರೆ ಹಗ​ರಣ ಬಯ​ಲಿ​ಗೆ: ಕಿಮ್ಮನೆ ರತ್ನಾ​ಕರ್‌

By Govindaraj SFirst Published Jan 12, 2023, 11:59 PM IST
Highlights

ಸ್ಯಾಂಟ್ರೋ ರವಿ ಪ್ರಕರಣ ಮತ್ತು ಪಿಎಸ್‌ಐ ನೇಮಕಾತಿ ಹಗರಣದ ಒಂದನೇ ಆರೋಪಿ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಫೆಬ್ರವರಿಯಲ್ಲಿ ಆರಗ ಜ್ಞಾನೇಂದ್ರನ ಎಲ್ಲ ಹಗರಣಗಳನ್ನು ಬಿಡುಗಡೆ ಮಾಡಿ ತೀರ್ಥಹಳ್ಳಿಯಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಗಡುವು ನೀಡಿದರು. 

ಶಿವಮೊಗ್ಗ (ಜ.12): ಸ್ಯಾಂಟ್ರೋ ರವಿ ಪ್ರಕರಣ ಮತ್ತು ಪಿಎಸ್‌ಐ ನೇಮಕಾತಿ ಹಗರಣದ ಒಂದನೇ ಆರೋಪಿ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಫೆಬ್ರವರಿಯಲ್ಲಿ ಆರಗ ಜ್ಞಾನೇಂದ್ರನ ಎಲ್ಲ ಹಗರಣಗಳನ್ನು ಬಿಡುಗಡೆ ಮಾಡಿ ತೀರ್ಥಹಳ್ಳಿಯಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಗಡುವು ನೀಡಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ಸ್ಯಾಂಟ್ರೋ ರವಿ ಪಾತ್ರ ಇರುವುದನ್ನು ಸ್ವತಃ ತಾನೇ ಒಪ್ಪಿಕೊಂಡಿದ್ದಾನೆ. 

ಆರಗ ಜ್ಞಾನೆಂದ್ರ ಮತ್ತವರ ಮಗನ ಜೊತೆ ದುಡ್ಡಿನೊಂದಿಗೆ ಇರುವ ಫೋಟೋಗಳು ಬಯಲಾಗಿವೆ. ಸ್ಯಾಂಟ್ರೋ ರವಿಯೇ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಆರಗ ಜ್ಞಾನೇಂದ್ರರ ಆಪ್ತ ಸಹಾಯಕ ಬಸವರಾಜ ಅವರ ಹೆಸರೂ ಇದೆ. ಇಷ್ಟುಸಾಕಲ್ಲವೇ ಸ್ಯಾಂಟ್ರೊ ರವಿ ಮತ್ತು ಗೃಹ ಸಚಿವರ ನಡುವಿನ ಸಂಬಂಧಕ್ಕೆ ಎಂದು ಪ್ರಶ್ನೆ ಮಾಡಿದರು. ಪಿಎಸ್‌ಐ ನೇಮಕಾತಿ ಹಗರಣದಲ್ಲೂ ಆರಗ ಜ್ಞಾನೇಂದ್ರ ಆರೋಪಿ. ಈ ಎಲ್ಲ ಪ್ರಕರಣಗಳನ್ನು ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಲಿ. ಆರಗ ಜ್ಞಾನೇಂದ್ರ ಈ ಕೂಡಲೇ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲ್ಲವೇ, ಮುಖ್ಯಮಂತ್ರಿ ಅವರೇ ಜ್ಞಾನೇಂದ್ರರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಚಾರಿ ನಿಯಮಗಳ ಜಾಗೃತಿಗೆ ಟ್ರಾಫಿಕ್‌ ಪಾರ್ಕ್: ಸಿ.ಬಿ.ರಿಷ್ಯಂತ್‌

ಪಿಡಬ್ಲ್ಯುಡಿ ಕಾಮಗಾರಿಯಲ್ಲಿ ಶೇ.50 ಪಾಲಿದಾರಿಕೆ: ತೀರ್ಥಹಳ್ಳಿ -ಹೊಸನಗರಗಳಲ್ಲಿನ ಪಿಡಬ್ಲ್ಯುಡಿ ಕಾಮಗಾರಿಗಳೆಲ್ಲವನ್ನು ಗೃಹ ಸಚಿವರು ಅವರ ಸಂಬಂಧಿ ಸಿ.ವಿ.ಚಂದ್ರಶೇಖರ್‌ ಅವರಿಗೆ ನೀಡಿದ್ದಾರೆ. ಅವರದು ಶೇ.50ರಷ್ಟುಪಾಲುದಾರಿಕೆಯೂ ಇದೆ. ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯಾಗಿ ದಾಖಲೆ ಮಾಡಿಸಿ, ಲೇಔಟ್‌ಗಳನ್ನು ಮಾಡುತ್ತಿದ್ದಾರೆ. ಮಗನೇ ಇದಕ್ಕೆ ಬಂಡವಾಳ ಹೂಡಿದ್ದಾನೆ. ಮಗನ ಲೇಔಟ್‌ಗೆ ಸರ್ಕಾರಿ ದುಡ್ಡಿನಲ್ಲಿ ಕಾಂಕ್ರೀಟ್‌ ರಸ್ತೆಯಾಗುತ್ತದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರೇ ಬಿಜೆಪಿಗೆ ಆಕ್ಸಿಜನ್‌: ಬಿಜೆಪಿ ಒಂದು ಕೆಟ್ಟಸಿದ್ಧಾಂತ. ದೇಶದ ಜನರನ್ನು ಮಂಗ ಮಾಡುತ್ತಿದೆ. ಅಲ್ಪಸಂಖ್ಯಾತರೇ ಬಿಜೆಪಿಗೆ ಆಕ್ಸಿಜನ್‌. ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಬಿಜೆಪಿ ಮಾಡಿದ ಯಾವುದಾದರೂ ಭಾಷಣವಿದೆಯಾ? ತೀರ್ಥಹಳ್ಳಿಯಲ್ಲಿ ನಂದಿತಾ ಪ್ರಕರಣವನ್ನು ಮುಂದಿಟ್ಟುಕೊಂಡು ಕೋಮುಗಲಭೆ ಸೃಷ್ಟಿಸಲಾಯಿತು. ಜನರಿಗೆ ಇಂದಿರಾ ಆವಾಸ್‌ ಯೋಜನೆಯ ಬಿಲ್‌, ಬಿಪಿಎಲ್‌ ಕಾರ್ಡ್‌, ಅಕ್ಕಿ, ಬೇಳೆ, ಎಣ್ಣೆ ಕೊಡಲಾಗುತ್ತಿಲ್ಲ. ಬಿಜೆಪಿ ಸರ್ಕಾರಕ್ಕೆ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರು ನೇಣು ಹಾಕಿಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ತು ಸದಸ್ಯ ಆರ್‌.ಪ್ರಸನ್ನಕುಮಾರ್‌, ಮಾಜಿ ಸೂಡಾ ಅಧ್ಯಕ್ಷ ಎನ್‌.ರಮೇಶ್‌, ಮಹಾನಗರ ಪಾಲಿಕೆ ಸದಸ್ಯ ರಮೇಶ್‌ ಹೆಗ್ಡೆ, ಕಾಂಗ್ರೆಸ್‌ ಮಾಧ್ಯಮ ಸಂಯೋಜಕ ಚಂದ್ರಭೂಪಾಲ, ಮುಖಂಡರಾದ ವಿಜಯಕುಮಾರ್‌, ಕಲಗೋಡು ರತ್ನಾಕರ್‌, ಜಿ.ಡಿ. ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

ಮಾಧ್ಯಮಗಳ ವಿರುದ್ಧ ಕಿಮ್ಮನೆ ರತ್ನಾ​ಕರ್‌ ಗರಂ: ತೀರ್ಥಹಳ್ಳಿಯಲ್ಲಿ ನಡೆದ ಇಡಿ ದಾಳಿ ಬಿಜೆಪಿ ರಾಜಕೀಯಪ್ರೇರಿತ. ಶಾರೀಕ್‌ ಕುಟುಂಬದ ಒಡೆತನದ ಕಟ್ಟಡ ಆಸ್ತಿಗೆ ಸಂಬಂಧಿಸಿದಂತೆ ಇಡಿ ಪರಿಶೀಲನೆ ನಡೆಸಿದೆ. ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ತಮ್ಮ ಮನೆಯನ್ನಾಗಲಿ, ಕಚೇರಿಯನ್ನಾಗಲಿ ಇಡಿ ಪರಿಶೀಲನೆ ನಡೆಸಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಸ್ಪಷ್ಟಪಡಿಸಿದರು. ಶಾರೀಕ್‌ ಕುಟುಂಬದ ಒಡೆತನದ ಕಟ್ಟಡದಲ್ಲಿ ಕಾಂಗ್ರೆಸ್‌ ಕಚೇರಿ ಇದೆ. ಅದು ಕಾನೂನು ಪ್ರಕಾರ ಅಗ್ರಿಮೆಂಟ್‌ ಆಗಿದ್ದು, ಪ್ರತಿ ತಿಂಗಳು ಬಾಡಿಗೆ ಕೊಡಲಾಗುತ್ತಿದೆ. ಇಡಿ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ. 

ಬಿಬಿಎಂಪಿಯ ಕನ್ನಡತಿ ವೈದ್ಯೆಯ ಮೇಲೆ ಮಲೆಯಾಳಿ ಯುವತಿಯ ಹಲ್ಲೆ: ಕನ್ನಡಕ್ಕೆ ಅಪಮಾನ

ಆದರೆ, ಕೆಲ ನ್ಯೂಸ್‌ ಚಾನಲ್‌ಗಳು ನೈಜ ಮಾಹಿತಿಯನ್ನು ತಿಳಿದುಕೊಳ್ಳದೇ ತನ್ನ ತೇಜೋವಧೆಯಂತಹ ಸುದ್ದಿಗಳನ್ನು ಪ್ರಸಾರ ಮಾಡಿವೆ. ನನ್ನನ್ನು ಶಾರೀಕ್‌ ಜೊತೆ ಹೋಲಿಕೆ ಮಾಡಿ ಸುದ್ದಿ ಮಾಡಲಾಗಿದೆ. ಎಂತಹ ದುಃಸ್ಥಿತಿಗೆ ಬಂದು ತಲುಪಿದೆ ಈ ದೇಶ. ಬಿಜೆಪಿಯವರು ಇದನ್ನೇ ಇಟ್ಟುಕೊಂಡು ನನ್ನ ತೇಜೋವಧೆ ಮಾಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು. ತಾಕತ್ತಿದ್ದರೆ ಆರಗ ಜ್ಞಾನೇಂದ್ರ ಮತ್ತು ಅವನ ಅಣ್ಣ ಅಮಿತ್‌ ಶಾನೇ ಸಿಬಿಐ ತನಿಖೆಗೆ ಒಳಪಡಿಸಲಿ. ಅದನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

click me!