ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿಯಾಗಿದ್ದು, ನೂರು ಬಾರಿ ಸುಳ್ಳು ಹೇಳಿ ಅದನ್ನೇ ಸತ್ಯ ಮಾಡಲು ಹೊರಡುತ್ತಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.
ಹುಬ್ಬಳ್ಳಿ (ಜ.19): ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿಯಾಗಿದ್ದು, ನೂರು ಬಾರಿ ಸುಳ್ಳು ಹೇಳಿ ಅದನ್ನೇ ಸತ್ಯ ಮಾಡಲು ಹೊರಡುತ್ತಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ತಾಂಡಾ ಜನಾಂಗಕ್ಕೆ ಹಕ್ಕುಪತ್ರ ವಿತರಣೆ ಮಾಡಲು ಆಗಮಿಸುತ್ತಿದ್ದಾರೆ. ಈ ಮೂಲಕ ನಾವೇ ತಾಂಡಾಗಳನ್ನು ರೆವೆನ್ಯೂ ಗ್ರಾಮಗಳನ್ನಾಗಿ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳಲು ಹೊರಟ್ಟಿದ್ದಾರೆ.
ಆದರೆ ನಿಜವಾಗಿಯೂ ನೋಡಿದಾಗ ಅಡುಗೆ ಮಾಡಿದವರು ನಾವು, ಇದೀಗ ಬಿಜೆಪಿಯವರು ಊಟ ಮಾಡಲು ಆಗಮಿಸಿದ್ದಾರೆ. 1992 ರಲ್ಲಿ ಮಲ್ಲಿಕಾರ್ಜುನ ಖರ್ಗೇ ಅವರು ತಾಂಡಾಗಳನ್ನು ರೆವೆನ್ಯೂ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನ ಮಾಡಿದ್ದಾರೆ. ಅಷ್ಟೇ ಉಳ್ಳುವವನೇ ಭೂಮಿಯ ಒಡೆಯ ಕಾನೂನಿನಂತೆ ವಾಸಿಸುವವನೇ ಮನೆಯ ಒಡೆಯ ಎಂಬ ಐತಿಹಾಸಿಕ ಕಾನೂನನ್ನು ಕಾಂಗ್ರೆಸ್ ಜಾರಿ ಮಾಡಿದೆ. ಆದರೆ ಇದೀಗ ಬಿಜೆಪಿ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಲು ಹೊರಟಿದೆ. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಬಾಯಲ್ಲಿ ಸುಳ್ಳು ಹೇಳಿಸಲು ಮುಂದಾಗುತ್ತಿದೆ ಎಂದು ಆರೋಪಿಸಿದರು.
ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವೆ: ಸಿದ್ದರಾಮಯ್ಯ ಪುನರುಚ್ಚಾರ
ನನ್ನ ಅಧಿಕಾರದ ಅವಧಿಯಲ್ಲಿ ಲಂಬಾಣಿ ಜನರ ಗುರು ಸೇವಾಲಾಲ ಅವರ ಜಯಂತಿಯನ್ನು ಸರ್ಕಾರಿ ಆಚರಣೆ ದಿನವಾಗಿ ಮಾಡಿದ್ದೇನೆ. ಲಂಬಾಣಿ ಅಭಿವೃದ್ಧಿ ನಿಗಮಕ್ಕೆ ನಾನು 450 ಕೋಟಿ ರೂಪಾಯಿ ನೀಡಿದ್ದೇನೆ. ಇದೀಗ ಬಿಜೆಪಿಯವರು ಲಂಬಾಣಿ ಜನರ ಕಾಳಜಿ ಮಾಡುವ ನೆಪದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಈಗಲೂ ಕೂಡಾ ನಾವೇ ತಾಂಡಾ ಜನರ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮಾಡಬೇಕಿದೆ ಎಂದು ಕಟುಕಿದರು. ಮೋದಿ ಕಂಡರೆ ಕಾಂಗ್ರೆಸ್‌ನವರಿಗೆ ಭಯವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನಗೆ ಮೋದಿ ಕಂಡರೆ ಭಯವಿಲ್ಲ, ದೇಶದ ಪ್ರಧಾನಿಗಳು ಎಂಬ ಗೌರವವಿದೆ.
ಬಿಪಿಎಲ್‌ಗೆ 10 ಕೇಜಿ ಉಚಿತ ಅಕ್ಕಿ: ಕಾಂಗ್ರೆಸ್ ಪಕ್ಷದ 3ನೇ ಭರವಸೆ
ಆದರೆ ನಿಜವಾಗಿಯೂ ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ. ಯಾಕೆಂದರೆ ನಾನು ಆರ್.ಎಸ್.ಎಸ್ ಕುರಿತು ಟೀಕೆ ಮಾಡಿ ಸತ್ಯವನ್ನು ಬಹಿರಂಗಗೊಳಿಸುತ್ತೇನೆ. ಹಾಗಾಗಿ ನನ್ನ ಕಂಡರೆ ಬಿಜೆಪಿಗೆ ಭಯ ಎಂದು ಸಿದ್ದರಾಮಯ್ಯ ಗುಡುಕಿದರು. ಇನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ್ರೆ ಅಲ್ಲಿ ಬಿಜೆಪಿ ಗೆಲುವು ಸಾಧಿಸುತ್ತೆ ಎನ್ನುವುದು ಸುಳ್ಳು, ಅವರು ಕೇರಳ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಭಾಷಣ ಮಾಡಿದ್ದಾರೆ. ಆದರೆ ಅಲ್ಲಿ ಬಿಜೆಪಿ ಸೋಲು ಕಂಡಿದೆ. ಹೀಗಾಗಿ ಅವರು ಭಾಷಣ ಮಾಡಿದರೇ ಗೆಲುವು ಸಾಧ್ಯನಾ ಎಂದು ಪ್ರಶ್ನೆ ಮಾಡಿದರು.