ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ‘ಜಿಎಸ್‌ಟಿ ದ್ರೋಹ’: ಸಿದ್ದು|ಸಾಲ ಪಡೆಯುವಂತೆ ರಾಜ್ಯಗಳಿಗೆ ಸೂಚನೆ ಅಕ್ಷಮ್ಯ| ಸ್ವರ್ಗ ಸೃಷ್ಟಿಮಾಡುತ್ತೇವೆ ಎಂದು ಬಿಜೆಪಿ ಹೇಳಿತ್ತು, ಇದನ್ನು ನಂಬಿ ಮತ ಹಾಕಿದವರಿಗೆ ದ್ರೋಹ| ಕೊರೋನಾದಿಂದ ಗುಣವಾಗಿ ಎಂದಿನಂತೆ ಅಖಾಡಕ್ಕೆ|
ಬೆಂಗಳೂರು(ಆ.30): ಜಿಎಸ್‌ಟಿ ಪರಿಹಾರ ನೀಡುವ ಬದಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸಾಲ ಪಡೆಯುವಂತೆ ಹೇಳುವ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದೆ. ರಾಜ್ಯ ಸರ್ಕಾರಕ್ಕೆ ‘ಧಮ್’ ಇದ್ದರೆ ಕೇಂದ್ರವೇ ಸಾಲ ಪಡೆದು ಜಿಎಸ್‌ಟಿ ಪರಿಹಾರ ನೀಡುವಂತೆ ಕೇಂದ್ರವನ್ನು ಒತ್ತಾಯಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೋನಾದಿಂದ ಎಲ್ಲ ರಾಜ್ಯಗಳು ಆರ್ಥಿಕವಾಗಿ ಸೊರಗಿ ನೌಕರರಿಗೆ ಸಂಬಳ ನೀಡಲೂ ಆಗುತ್ತಿಲ್ಲ. ಹೀಗಿದ್ದರೂ ನ್ಯಾಯಯುತವಾಗಿ ಕೇಂದ್ರ ನೀಡಬೇಕಾದ ಪರಿಹಾರ ಹಣ ನೀಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸ್ವರ್ಗ ಸೃಷ್ಟಿಮಾಡುತ್ತೇವೆ ಎಂದಿದ್ದನ್ನು ನಂಬಿದ ರಾಜ್ಯದ ಜನತೆ 25 ಸಂಸದರನ್ನು ಗೆಲ್ಲಿಸಿಕೊಟ್ಟರು. ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆಗೆ ದ್ರೋಹ ಮಾಡುತ್ತಿದ್ದೀರಿ ಎಂದು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಎಸ್‌ಟಿ ಕೌನ್ಸಿಲ್ ಒಪ್ಪಂದದ ಪ್ರಕಾರ, ಜಿಎಸ್‌ಟಿ ಜಾರಿಯಿಂದ ರಾಜ್ಯಕ್ಕೆ ಶೇ.14 ರಷ್ಟು ಜಿಎಸ್‌ಟಿ ಖೋತಾ ಆಗಲಿದೆ. ಅದನ್ನು ಮುಂದಿನ ಐದು ವರ್ಷ ತುಂಬಿಕೊಡಲಾಗುವುದು ಎಂದು ಒಪ್ಪಂದ ಮಾಡಿಕೊಂಡಿತ್ತು. ಇದೀಗ ಪರಿಹಾರ ನೀಡದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 3 ಲಕ್ಷ ಕೋಟಿ ರು. ನಷ್ಟಉಂಟಾಗಿದ್ದು ಇದು ದೇವರ ಆಟ. ಸೆಸ್‌ನಿಂದ 65 ಸಾವಿರ ಕೋಟಿ ರು. ಬರುತ್ತದೆ. ಉಳಿದ 2.65 ಲಕ್ಷ ಕೋಟಿ ರು. ನಷ್ಟಆಗುತ್ತಿರುವುದನ್ನು ನಾವು ತುಂಬಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ರಾಜ್ಯಗಳೇ ಭಾರತೀಯ ರಿಸವ್‌ರ್ ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳಲಿ ಎಂದಿದ್ದಾರೆ. ಇದರ ಬದಲಿಗೆ ಕೇಂದ್ರವೇ ಏಕೆ ಸಾಲ ಪಡೆದು ಪರಿಹಾರ ನೀಡಬಾರದು?’ ಎಂದು ಪ್ರಶ್ನಿಸಿದರು.
15ನೇ ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ಜಿಡಿಪಿ ನೆಲಕಚ್ಚಿದ್ದು, ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ಸಾಲ ಅನಿಯಂತ್ರಿತವಾಗಿ ಜಾಸ್ತಿ ಆಗಿ ಅಭಿವೃದ್ಧಿ 10 ವರ್ಷಗಳ ಹಿಂದಕ್ಕೆ ಹೋಗಿದೆ. ರಾಜ್ಯದ ಹಿತದೃಷ್ಟಿಯಿಂದ ಸರ್ಕಾರ ಜಿಎಸ್‌ಟಿ ಪರಿಹಾರಕ್ಕಾಗಿ ನಿಯೋಗ ತೆರಳಿ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.
GST ನಷ್ಟ ಭರ್ತಿಗೆ ಸಾಲ ಪಡೆಯಿರಿ: ರಾಜ್ಯಕ್ಕೆ ಕೇಂದ್ರದ ಉಚಿತ ಸಲಹೆ
ಕೊರೋನಾದಿಂದ ಗುಣವಾಗಿ ಎಂದಿನಂತೆ ಅಖಾಡಕ್ಕೆ
ಕೊರೋನಾ ಸೋಂಕಿನಿಂದ ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ. ಇಂದಿನಿಂದ ಎಂದಿನಂತೆ ಚಟುವಟಿಕೆಯಲ್ಲಿ ಭಾಗವಹಿಸಲಿದ್ದು ಮುಂದಿನ ವಾರ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದೇನೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ‘ಕೊರೋನಾ ವಾಸಿಯಾಗದ ಕಾಯಿಲೆ ಏನೂ ಅಲ್ಲ. ಆದರೆ, ಮುಂಜಾಗ್ರತೆ ವಹಿಸುವುದು ಅವಶ್ಯಕ. ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಎಂದು ಅವರು ಸಲಹೆ ನೀಡಿದರು.
ಬೆಳಗಾವಿ ಕನ್ನಡಿಗರ ಮೇಲಿನ ಕೇಸು ಹಿಂತೆಗೆತಕ್ಕೆ ಸಿದ್ದು ಆಗ್ರಹ
ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುವ ಮೂಲಕ ವಿವಾದವನ್ನು ದೊಡ್ಡದು ಮಾಡಿದೆ. ಈ ಕೂಡಲೇ ಹೋರಾಟದಲ್ಲಿ ಭಾಗವಹಿಸಿದ್ದ ಕನ್ನಡಿಗರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ಗಲಾಟೆ ಕೇಸ್ ವಾಪಸ್: ಸಚಿವ ಈಶ್ವರಪ್ಪ
ಪೀರನವಾಡಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುವ ಮೂಲಕ ವಿವಾದವನ್ನು ದೊಡ್ಡದು ಮಾಡಿದೆ ಎಂದು ಟೀಕಿಸಿದ ಸಿದ್ದರಾಮಯ್ಯ, ಈ ಕೂಡಲೇ ಹೋರಾಟದಲ್ಲಿ ಭಾಗವಹಿಸಿದ್ದ ಕನ್ನಡಿಗರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ನಿರ್ಧಾರ ತೆಗೆದುಕೊಂಡಿದ್ದರೆ ಇಂದು ಸಂಗೊಳ್ಳಿ ರಾಯಣ್ಣ ವರ್ಸಸ್ ಶಿವಾಜಿ, ಕನ್ನಡಿಗರು ವರ್ಸಸ್ ಮರಾಠಿಗರು ಎಂಬ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ. ಶಿವಾಜಿಯಂತೆ ರಾಯಣ್ಣ ಕೂಡ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಅಂತಹ ಮಹಾನ್ ವ್ಯಕ್ತಿಗಳ ನಡುವೆ ಸಂಘರ್ಷ ಉಂಟಾಗಲು ಸರ್ಕಾರವೇ ಅವಕಾಶ ಮಾಡಿಕೊಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಯಣ್ಣ ಪ್ರತಿಮೆ ನಿರ್ಮಾಣ ಹೋರಾಟವನ್ನು ಟೀಕಿಸಿರುವ ಸಿ.ಟಿ. ರವಿ ಹೇಳಿಕಗೆ ಪ್ರತಿಕ್ರಿಯಿಸಿದ ಅವರು, ‘ಹೋರಾಟವನ್ನು ಸಿ.ಟಿ. ರವಿ ಅವಹೇಳನ ಮಾಡಿದ್ದಾರೆ. ಆ ಭಾಗದ ಜನರು ರಾಯಣ್ಣ ಪ್ರತಿಮೆ ನಿರ್ಮಾಣಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ರಾಜಕೀಯ ಬಣ್ಣ ಕೊಡುವ ಅಗತ್ಯವಿಲ್ಲ. ಅವರು ಬಹಳ ಹಿಂದಿನಿಂದಲೂ ಪ್ರತಿಮೆ ನಿರ್ಮಾಣಕ್ಕೆ ಹೋರಾಡುತ್ತಾ ಬಂದಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಜವಾಬ್ದಾರಿಯಿಂದ ಮಾತನಾಡಬೇಕು’ ಎಂದು ಎಚ್ಚರಿಕೆ ನೀಡಿದರು.