ಬೊಮ್ಮಾಯಿ ಮಂಡಿಸಿದ್ದು ಸಾಲದ ಬಜೆಟ್‌: ಇದು ಡಬಲ್‌ ಎಂಜಿನ್‌ ಸರ್ಕಾರವಲ್ಲ, ಡಬ್ಬಾ ಸರ್ಕಾರ: ಸಿದ್ದು

Kannadaprabha News   | Asianet News
Published : Mar 08, 2022, 06:32 AM IST
ಬೊಮ್ಮಾಯಿ ಮಂಡಿಸಿದ್ದು ಸಾಲದ ಬಜೆಟ್‌: ಇದು ಡಬಲ್‌ ಎಂಜಿನ್‌ ಸರ್ಕಾರವಲ್ಲ, ಡಬ್ಬಾ ಸರ್ಕಾರ: ಸಿದ್ದು

ಸಾರಾಂಶ

*   ರಾಜ್ಯದ ಸಾಲ ದುಪ್ಪಟ್ಟಾಗಿದೆ, ರಾಜಸ್ವ ಕೊರತೆಯಾಗಿದೆ *   ಇಂತಹ ಕೊರತೆ ಬಜೆಟ್‌ಗೆ ಜನಪರ ಬಜೆಟ್‌ ಎನ್ನಬೇಕೆ? *   ಕೇಂದ್ರ ಸರ್ಕಾರ ನಮ್ಮ ತೆರಿಗೆ ಪಾಲು ನೀಡಲಿ ಸಾಕು, ಅವರ ಯೋಜನೆಗಳೇ ನಮಗೆ ಬೇಕಾಗಿಲ್ಲ  

ಬೆಂಗಳೂರು(ಮಾ.08):  ಕಳೆದ 3 ವರ್ಷದಲ್ಲಿ ಒಟ್ಟು ಸಾಲ(Loan) ದುಪ್ಪಟ್ಟಾಗಿರುವುದರಿಂದ ರಾಜ್ಯ ಸಾಲದ ಸುಳಿಗೆ ಸಿಲುಕಿದೆ. ಇದರಿಂದ ಸತತವಾಗಿ ರಾಜಸ್ವ ಉಳಿತಾಯ ಬಜೆಟ್‌ ಮಂಡಿಸುತ್ತಿದ್ದ ಕರ್ನಾಟಕ(Karnataka) ರಾಜ್ಯ ಕಳೆದ ಮೂರು ವರ್ಷದಿಂದ ರಾಜಸ್ವ ಕೊರತೆ ಬಜೆಟ್‌ ಮಂಡಿಸುವಷ್ಟುಆರ್ಥಿಕವಾಗಿ ದಿವಾಳಿ ಆಗಿದೆ. ಸಾಲದ ಹೊರೆ ಹೊತ್ತ ಇಂತಹ ಕೊರತೆ ಬಜೆಟ್‌ ಅನ್ನು ಅಭಿವೃದ್ಧಿ ಪರ, ಜನಪರ ಬಜೆಟ್‌ ಎಂದು ಕರೆಯಬೇಕೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದ್ದಾರೆ.

ಕೇಂದ್ರಕ್ಕೆ ರಾಜ್ಯದಿಂದ ಪ್ರತಿ ವರ್ಷ 3 ಲಕ್ಷ ಕೋಟಿ ರು. ತೆರಿಗೆ(Tax) ಪಾವತಿಯಾಗುತ್ತಿದೆ. ಆದರೆ, ಈ ಪೈಕಿ ಅವರು ರಾಜ್ಯಕ್ಕೆ ನೀಡುತ್ತಿರುವುದು 45,000 ಕೋಟಿ ರು. ಮಾತ್ರ. ನಿಯಮಗಳ ಪ್ರಕಾರ ಶೇ.42ರಷ್ಟು ನೀಡಿದರೂ 1.26 ಲಕ್ಷ ಕೋಟಿ ರು. ನೀಡಬೇಕು. ನಮ್ಮ ತೆರಿಗೆ ಪಾಲು ನಮಗೆ ನೀಡಲಿ ಸಾಕು. ಕೇಂದ್ರದ ಯಾವ ಯೋಜನೆಗಳೂ ನಮಗೆ ಬೇಡ. ಎಲ್ಲವನ್ನೂ ನಾವೇ ಮಾಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.

ದೇಶ, ರಾಜ್ಯವನ್ನು ಆರ್ಥಿಕ ದಿವಾಳಿಯಾಗಿಸಿದ ಬಿಜೆಪಿ ಸರ್ಕಾರ, Siddaramaiah ಟೀಕೆ

ಸೋಮವಾರ ಬಜೆಟ್‌(Budget) ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಅದರಿಂದ ರಾಜ್ಯಕ್ಕೆ ಆಗುತ್ತಿರುವ ನಷ್ಟವನ್ನು ಅಂಕಿ-ಅಂಶಗಳ ಸಹಿತ ಬಿಚ್ಚಿಟ್ಟರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿವೆ. ಇದು ಡಬಲ್‌ ಎಂಜಿನ್‌ ಸರ್ಕಾರವಲ್ಲ, ಡಬ್ಬಾ ಸರ್ಕಾರಗಳು ಎಂದು ಕಿಡಿಕಾರಿದರು.

ಕೇಂದ್ರದ ಅನುದಾನ, ತೆರಿಗೆ ಪಾಲು ಕಡಿತ, ನೋಟು ಅಮಾನ್ಯೀಕರಣದಿಂದ ರಾಜ್ಯಕ್ಕೆ 2.96 ಲಕ್ಷ ಕೋಟಿ ರು. ನಷ್ಟಉಂಟಾಗಿದೆ. ಜತೆಗೆ ಸ್ವಾತಂತ್ರ್ಯ ಬಂದಾಗಿನಿಂದ 2018ರವರೆಗೆ ರಾಜ್ಯದ ಒಟ್ಟು ಸಾಲ 2.42 ಲಕ್ಷ ಕೋಟಿ ರು. ಮಾತ್ರ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತಮ್ಮ ಬಜೆಟ್‌ನಲ್ಲಿ ತಿಳಿಸಿರುವಂತೆ ಮುಂದಿನ ಮಾಚ್‌ರ್‍ ವೇಳೆಗೆ ರಾಜ್ಯದ ಒಟ್ಟು ಸಾಲ 5.18 ಲಕ್ಷ ಕೋಟಿ ರು.ಗಳಿಗೆ ತಲುಪಲಿದೆ. ಕಳೆದ 3 ವರ್ಷದಲ್ಲೇ ಬರೋಬ್ಬರಿ 2.64 ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ಇದರ ಬಡ್ಡಿಗಾಗಿಯೇ ವಾರ್ಷಿಕ 27 ಸಾವಿರ ಕೋಟಿ ರು. ಪಾವತಿ ಮಾಡಬೇಕಾಗುತ್ತದೆ. ಹೀಗಾದರೆ ಅಭಿವೃದ್ಧಿ ಆಗುವುದೆಲ್ಲಿ ಎಂದು ಪ್ರಶ್ನಿಸಿದರು.

ಸಾಲ ಹೆಚ್ಚಾಗಲು ಕೊರೊನಾ ಕಾರಣ ಎಂದು ಸರ್ಕಾರ ಹೇಳುತ್ತೆ. ಆದರೆ ಕೊರೋನಾ ನಿರ್ವಹಣೆಗೆ ಖರ್ಚು ಮಾಡಿರುವುದು 8 ಸಾವಿರ ಕೋಟಿ ರು. ಮಾತ್ರ. ಕೇಂದ್ರವು ಸೂಕ್ತ ಪರಿಹಾರ, ಅನುದಾನ ನೀಡದೆ ಸಾಲ ಹೆಚ್ಚಳ ಮಾಡಲು ಅವಕಾಶ ನೀಡಿದೆ. ಜತೆಗೆ ರಾಜ್ಯದ ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ವಿಫಲವಾಗಿದೆ. ಇದರ ಪರಿಣಾಮ ಸಾಲ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದರು.

ಕೇಂದ್ರದಿಂದ ತೀವ್ರ ಅನ್ಯಾಯ:

ಕೇಂದ್ರದಿಂದ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಭರಿಸಬೇಕಾಗಿರುವ ಪಾಲಿನಲ್ಲಿ ತೀವ್ರ ಅನ್ಯಾಯ ಮಾಡುತ್ತಿದೆ. ಕೇಂದ್ರದ ಯೋಜನೆಗಳಿಗೆ 2012-13ರಲ್ಲಿ ರಾಜ್ಯದ ಪಾಲು 27% ಮತ್ತು ಕೇಂದ್ರದ ಪಾಲು 73% ಇತ್ತು. ಇದೀಗ ರಾಜ್ಯದ ಪಾಲು 49.85%, ಕೇಂದ್ರದ ಪಾಲು 50.15% ಆಗಿದೆ. ನಮ್ಮ ಹಣದಲ್ಲಿ ಯೋಜನೆ ಮಾಡಿಕೊಳ್ಳಲು ಕೇಂದ್ರದ ಹೆಸರೇಕೆ? ಎಂದು ಪ್ರಶ್ನಿಸಿದರು. ಮುಂದೆ ನಾವು ಅಧಿಕಾರಕ್ಕೆ ಬಂದಾಗ ಇದನ್ನು ಪ್ರಶ್ನಿಸುತ್ತೇವೆ ಎಂದರು.

ಕೇಂದ್ರದ ತೆರಿಗೆ ಪಾಲಿನ ಜತೆಗೆ 15ನೇ ಹಣಕಾಸು ಆಯೋಗದಲ್ಲೂ ಕರ್ನಾಟಕಕ್ಕೆ ಆದಷ್ಟುಅನ್ಯಾಯ ಯಾವ ರಾಜ್ಯಕ್ಕೂ ಆಗಿಲ್ಲ. ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ 5,495 ಕೋಟಿ ರು. ಪರಿಹಾರ ನೀಡುವಂತೆ ಶಿಫಾರಸು ಮಾಡಿದ್ದರೂ, ನಮ್ಮಿಂದಲೇ ಆಯ್ಕೆಯಾದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಇದನ್ನು ತಿರಸ್ಕರಿಸಿದರು. ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಬಿಜೆಪಿ(BJP) ಸಂಸದರು ಪ್ರಶ್ನಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಎಸ್‌ಟಿ ಪರಿಹಾರ 3 ವರ್ಷ ವಿಸ್ತರಿಸಿ:

ಜಿಎಸ್‌ಟಿ(GST) ಬರುವ ಮೊದಲು ರಾಜ್ಯದ ತೆರಿಗೆ ಸಂಗ್ರಹದ ಬೆಳವಣಿಗೆ ದರ 13-14% ಇತ್ತು. ಈ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಿ ಕೊಡಬೇಕಿತ್ತು. ಆದರೆ ಈ ವರ್ಷದ ಜೂನ್‌ಗೆ ಜಿಎಸ್‌ಟಿ ನಷ್ಟಪರಿಹಾರ ನಿಲ್ಲುತ್ತದೆ. ಹೀಗಾಗಿ ಕನಿಷ್ಠ 3 ವರ್ಷ ವಿಸ್ತರಿಸಲು ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.

Karnataka Politics: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಬಿಜೆಪಿ ಸರ್ಕಾರ ಕಿತ್ತೊಗೆಯಲು ಹೋರಾಟ: ಸಿದ್ದು

ಇದೇ ವೇಳೆ 2018ರಲ್ಲಿ ಬಿಜೆಪಿ ನೀಡಿದ್ದ ಶೇ.90ರಷ್ಟು ಭರವಸೆ ಈಡೇರಿಸಿಲ್ಲ. ಯಾವ ಅಭಿವೃದ್ಧಿ ನಿಗಮಗಳಿಗೂ ಬಜೆಟ್‌ನಲ್ಲಿ ಅನುದಾನ ನೀಡಿಲ್ಲ. ವೀರಶೈವ ಲಿಂಗಾಯತ, ಆರ್ಯ ವೈಶ್ಯ, ಒಕ್ಕಲಿಗ, ಮಡಿವಾಳ ಮಾಚಿದೇವ, ಸವಿತಾ ಸಮಾಜ, ಕಾಡೊಗೊಲ್ಲ, ಮರಾಠ, ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಒಂದು ರುಪಾಯಿ ಸಹ ಅನುದಾನ ನೀಡಿಲ್ಲ ಎಂದು ಟೀಕಿಸಿದರು.

ಒಟ್ಟಾಗಿ ಧೂಳೀಪಟ ಮಾಡುತ್ತೇವೆ!

ಕಾಂಗ್ರೆಸ್‌ನಲ್ಲಿ(Congress) ನಾವೆಲ್ಲಾ ಒಟ್ಟಾಗಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮನ್ನು ಧೂಳೀಪಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಬಿಜೆಪಿ ಸದಸ್ಯರಿಗೆ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಮಾತಿನ ವೇಳೆ ಸಚಿವ ಆರ್‌.ಅಶೋಕ್‌, ನಾವು ನಿಮ್ಮ ಮಾತನ್ನು ಗಂಭೀರವಾಗಿ ಕೇಳುತ್ತೇವೆ. ಆದರೆ ನಿಮ್ಮವರೇ ಕೇಳಲ್ಲ ಎಂದು ಕಾಲೆಳೆದರು. ಈ ವೇಳೆ ಸಿದ್ದರಾಮಯ್ಯ, ನಾವೆಲ್ಲಾ ಒಟ್ಟಾಗಿದ್ದೇವೆ. ಮುಂದೆ ನಿಮ್ಮನ್ನು ಧೂಳೀಪಟ ಮಾಡುತ್ತೇವೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ