ಮೇಕೆದಾಟು ಯೋಜನೆಗೆ ಕೇಂದ್ರದಿಂದಲೇ 'ವಿವಾದ' ಪದ ಬಳಕೆ, ಕುಮಾರಸ್ವಾಮಿ ಆಕ್ರೋಶ

Published : Mar 06, 2022, 06:23 PM IST
ಮೇಕೆದಾಟು ಯೋಜನೆಗೆ ಕೇಂದ್ರದಿಂದಲೇ 'ವಿವಾದ' ಪದ ಬಳಕೆ, ಕುಮಾರಸ್ವಾಮಿ ಆಕ್ರೋಶ

ಸಾರಾಂಶ

* ಮೇಕೆದಾಟು ಯೋಜನೆ, ಕೇಂದ್ರದಿಂದಲೇ 'ವಿವಾದ' ಪದ ಬಳಕೆ * ʼವಿವಾದʼ ಎನ್ನುವ ಮೂಲಕ ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ಬಿಕ್ಕಟ್ಟಿನ ಲೇಪನ * ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು (ಮಾ.6): ಮೇಕೆದಾಟು ಯೋಜನೆ(Mekedatu Project) ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇವೆ.

ಈ ಬಗ್ಗೆ ಟ್ವೀಟ್ ಮಾಡಿರುವ  ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ(HD Kumaraswamy),  ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೇಕೆದಾಟು ಯೋಜನೆ ಬಗ್ಗೆ ಕೇಂದ್ರವೇ ಎರಡು ರಾಜ್ಯಗಳ ನಡುವಿನ 'ವಿವಾದ' ಎನ್ನುವ ಪದವನ್ನು ಬಳಕೆ ಮಾಡಿದೆ ಎಂದು ಅರೋಪಿಸಿದ್ದಾರೆ.

Mekedatu Padayatre: ಕಾಂಗ್ರೆಸ್‌ಗೆ ಲಾಭವಾಗುತ್ತಾ ಮೇಕೆದಾಟು ಪಾದಯಾತ್ರೆ.? ಒಳಸುಳಿಗಳು

ಮೇಕೆದಾಟು ಯೋಜನೆ 'ವಿವಾದ'ವನ್ನು ಕರ್ನಾಟಕ-ತಮಿಳುನಾಡು ಪರಸ್ಪರ ಚರ್ಚೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್‌ ಹೇಳಿದ್ದಾರೆ. ಅವರೇ ʼವಿವಾದʼ ಎನ್ನುವ ಮೂಲಕ ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ʼಬಿಕ್ಕಟ್ಟಿನ ಲೇಪನʼ ಹಚ್ಚಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

'ಎರಡೂ ರಾಜ್ಯಗಳು ಕುಳಿತು ಚರ್ಚೆ ಮಾಡಿಕೊಂಡು ಒಮ್ಮತಕ್ಕೆ ಬರಬೇಕು ಎಂದು ಕೇಂದ್ರ ಸಚಿವರೇ ಹೇಳುವ ಮೂಲಕ, ʼಮೇಕೆದಾಟು ಯೋಜನೆಗೆ ಒಕ್ಕೂಟ‌ ವ್ಯವಸ್ಥೆಯ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅನುಮತಿ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರಕಾರ ನುಣುಚಿಕೊಳ್ಳುತ್ತಿದೆʼ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದಿದ್ದಾರೆ.

ಮುಂಗಡ ಪತ್ರದಲ್ಲಿ ಯೋಜನೆಗೆ 1,000 ಕೋಟಿ ರೂ. ಕೊಟ್ಟೆವು ಎಂದು ಬಿಜೆಪಿ ಹಾಗೂ ನಮ್ಮ ಪಾದಯಾತ್ರೆಯಿಂದಲೇ ಹಣ ಘೋಷಿಸಲಾಯಿತು ಎಂದು ಕಾಂಗ್ರೆಸ್‌ ಕುಣಿಯುತ್ತಿವೆ. ಒಂದೇ ನಾಣ್ಯದ ಎರಡು ಮುಖಗಳಾದ ಎರಡೂ ರಾಷ್ಟ್ರೀಯ ಪಕ್ಷಗಳು, ಈಗ ಮೇಕೆದಾಟು ಇಟ್ಟುಕೊಟ್ಟುಕೊಂಡು ʼಚುನಾವಣಾ ಆಟʼ ಶುರು ಮಾಡಿವೆ. ವಾಸ್ತವ ಏನು ಎಂಬುದನ್ನು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೇಂದ್ರದ ಕಾನೂನು ಸುಳಿಯಲ್ಲಿ ಸಿಕ್ಕಿರುವ ಹಾಗೂ ಕೇಂದ್ರದ ಜಲ ಆಯೋಗ (CWC)ದಲ್ಲಿ ಕೊಳೆಯುತ್ತಿರುವ ಮೇಕೆದಾಟು ಯೋಜನೆಯು ಪಾದಯಾತ್ರೆಯಿಂದ ಬರುವುದಿಲ್ಲ. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿಯೇ ತಂದುಕೊಳ್ಳಬೇಕು ಎಂದಿದ್ದೆ ಎಂದು ಹೇಳಿದ್ದಾರೆ.

ಈಗ ಕೇಂದ್ರ ಸಚಿವರಾದ ಶೇಖಾವತ್‌ ಅವರು; "ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಕರ್ನಾಟಕ ಉಂಟು, ತಮಿಳುನಾಡು ಉಂಟು. ನೀವು ನೀವೇ ಮಾತನಾಡಿಕೊಳ್ಳಿ" ಎಂದು ಕೈ ಎತ್ತಿಬಿಟ್ಟಿದ್ದಾರೆ. ಹಾಗಾದರೆ, ಯೋಜನೆಗೆ ಒಪ್ಪಿಗೆ ನೀಡುವಲ್ಲಿ ಕೇಂದ್ರ ಸರಕಾರದ ಪಾತ್ರವೇ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. 

ನಮ್ಮ ಪಾಲಿನ ನೀರನ್ನು ದಕ್ಕಿಸಿಕೊಳ್ಳುವುದು ಮತ್ತು ನಮ್ಮ ಜನರಿಗೆ ಕುಡಿಯುವ ನೀರು ಕೊಡುವ ಮೇಕೆದಾಟು ಯೋಜನೆ ಅನುಷ್ಠಾನ ಮಾಡುವುದು ಕರ್ನಾಟಕದ ಹಕ್ಕು. ಆದರೆ, ಕೇಂದ್ರ ಸಚಿವರು ʼನೀವೇ ಬಗೆಹರಿಸಿಕೊಳ್ಳಿʼ ಎಂದು ಹೇಳಿದ ಒಳಮರ್ಮವೇನು? ಕಾವೇರಿ ಬಗ್ಗೆ ಬಿಜೆಪಿ ʼಹೊಸ ವರಸೆʼ ಶುರು ಮಾಡಿತೇ ಎನ್ನುವ ಸಂಶಯ ನನ್ನದು. ಈ ಬಗ್ಗೆ 1,000 ಕೋಟಿ ಹಣ ಘೋಷಣೆ ಮಾಡಿದೊಡನೆ ಪಾದಯಾತ್ರೆಯಿಂದಲೇ ಆಯಿತು ಎಂದು ʼಹಿಗ್ಗಿ ಹೀರೆಕಾಯಿʼ ಆಗಿದ್ದ ಕಾಂಗ್ರೆಸ್‌ ನಿಲುವೇನು? ಅವರೀಗ ತಮ್ಮ ಮಿತ್ರಪಕ್ಷ ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡು ಸರಕಾರದ ಜತೆ ಮಾತುಕತೆ ನಡೆಸಿ ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಾರಾ? ಎಂದು ಕಿಡಿ ಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ