ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಮೇಲೆ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಜನರ ಮನಸ್ಸಿನಲ್ಲಿ ದ್ವೇಷವನ್ನು ಬಿತ್ತಿ ರಾಜಕೀಯ ಮಾಡುತ್ತಿರುವ ಬಿಜೆಪಿ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದ: ಸಿದ್ದರಾಮಯ್ಯ
ರಾಯಚೂರು(ಅ.11): ಭಾರತ್ ಜೋಡೋ ಪಾದಯಾತ್ರೆಯಿಂದ ಬಿಜೆಪಿಗರಲ್ಲಿ ನಡುಕ ಶುರುವಾಗಿದ್ದು, ದೇಶದಲ್ಲಿ ರಾಹುಲ್ ಗಾಂಧಿ, ರಾಜ್ಯದಲ್ಲಿ ನಾನು ಎಂದರೆ ಅವರಿಗೆ ಭಯವಾಗುತ್ತಿದೆ ಎಂದು ಮಾಜಿ ಸಿಎಂ ಹಾಗೂ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಸ್ಥಳೀಯ ಯರಮರಸ್ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಿಂದ ಭೀತಿಗೊಂಡಿರುವ ಬಿಜೆಪಿಗರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಮೇಲೆ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಜನರ ಮನಸ್ಸಿನಲ್ಲಿ ದ್ವೇಷವನ್ನು ಬಿತ್ತಿ ರಾಜಕೀಯ ಮಾಡುತ್ತಿರುವ ಬಿಜೆಪಿ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ಸಾಕಷ್ಟುಸಮಸ್ಯೆಗಳಿದ್ದು ಅವುಗಳಿಗೆ ಪರಿಹಾರ ನೀಡದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಅವುಗಳನ್ನು ಮುಚ್ಚಿ ಹಾಕಿಕೊಳ್ಳುವುದಕ್ಕಾಗಿ ಹಿಂದುತ್ವ ವಾದವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ರೈತರು, ಬಡವರು, ಅಲ್ಪಸಂಖ್ಯಾತರು, ಜನಸಾಮಾನ್ಯರು ಭಯದಲ್ಲಿ ಜೀವನ ಸಾಗಿಸುವ ವಾತಾವರಣ ಸೃಷ್ಟಿಸಲಾಗಿದೆ. ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಇದರಿಂದ ಜನರ ಮನಸ್ಸುಗಳು ಒಡೆದುಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲೂ ಉಳಿಯಲ್ಲ; ಕುಮಾರ ಬಂಗಾರಪ್ಪ ಭವಿಷ್ಯ
ಮೀಸಲಾತಿ ಹೆಚ್ಚಳಕ್ಕಾಗಿ ಕಾಂಗ್ರೆಸ್ ನಾಗಮೋಹನ್‌ದಾಸ್ ಸಮಿತಿ ರಚಿಸಿದ್ದು ಇಷ್ಟುದಿನಗಳ ನಂತರ ಬಿಜೆಪಿ ಅನುಷ್ಠಾನಕ್ಕೆ ತಂದಿದೆ. ಕಾಂಗ್ರೆಸ್ ಪಕ್ಷವೇ ಮೀಸಲಾತಿ ಹೆಚ್ಚಳಕ್ಕೆ ಒತ್ತಡಹಾಕಿತ್ತು. ಮೀಸಲಾತಿ ವಿಷಯದಲ್ಲಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿಕೆ ನೀಡುತ್ತಿದ್ದ ಸಚಿವ ಬಿ.ಶ್ರೀರಾಮುಲು ಒಂದು ದಿನವೂ ಅಧಿವೇಶದಲ್ಲಿ ಮಾತನಾಡಲಿಲ್ಲ ಎಂದು ದೂರಿದರು.
ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ವಿಷಯವಾಗಿ ಕೆಲ ಸಮುದಾಯಗಳ ವಿರೋಧವಿದ್ದು, ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರಬರೆದು ವರ್ಷಗಳು ಕಳೆದರೂ ಇದುವರೆಗೆ ತನಿಖೆ ನಡೆಯುತ್ತಿಲ್ಲ. ನಾ ಕಾವುಂಗಾ ಕಾನೆದೂಂಗಾ ಅನ್ನೋ ಮೋದಿಯವರು ತನಿಖೆ ನಡೆಸಲು ಕ್ರಮ ತೆಗೆದುಕೊಳ್ಳಬಹುದಾಗಿತ್ತು ಎಂದು ವ್ಯಂಗ್ಯವಾಗಿ ಟೀಕಿಸಿದರು.
ಶೇ.40ರಷ್ಟು ಕಮಿಷನ್ ಕೊಡಬೇಕು ಅಂತ ಈ ಮೊದಲು ಕೇಳಿರಲಿಲ್ಲ. ನಾನು ಕೇಳಿದ್ದರೆ ಸಿಬಿಐಗೆ ರೆಫರ್ ಮಾಡಿಬಿಡುತ್ತಿದ್ದೆ. ಬಿಜೆಪಿಯವರು ಸಿಬಿಐಯನ್ನ ಚೋರ್ ಬಚಾವ್ ಸಂಸ್ಥೆಯಾಗಿದೆ. ಸಿಬಿಐ ಬಿಜೆಪಿ ಸರ್ಕಾರದ ಕೈಯಲ್ಲಿದೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲ: ಸಿ.ಎಂ.ಇಬ್ರಾಹಿಂ
ಡಿ.ಕೆ. ರವಿ, ಮೇಸ್ತಾ ಪ್ರಕರಣಗಳಲ್ಲಿ ಸುಳ್ಳು ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಡಿ.ಕೆ. ರವಿ, ಮೇಸ್ತಾ ಪ್ರಕರಣದಲ್ಲಿ ಅವರು ಯಾವ ದಾಖಲೆಗಳನ್ನ ನೀಡಿದ್ದಾರೆ. ಕಮಿಷನ್ ಧಂದೆಗೆ ಮಾತ್ರ ದಾಖಲೆಗಳನ್ನು ಕೇಳುತ್ತಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಎಂ.ಬಿ. ಪಾಟೀಲ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಜಿಪಂ ಮಾಜಿ ಸದಸ್ಯ ಬಷಿರುದ್ದೀನ್ ಹಾಗೂ ಮತ್ತಿತರರಿದ್ದರು.