ಆರೆಸ್ಸೆಸ್‌ ಹೆಡಗೇವಾರ್‌ ಭಾಷಣ ಶಾಲಾ ಮಕ್ಕಳಿಗೆ ಯಾಕ್‌ ಬೇಕ್ರಿ?: ಸಿದ್ದರಾಮಯ್ಯ

By Kannadaprabha NewsFirst Published Jun 5, 2022, 6:41 AM IST
Highlights

*  ಕಾಂಗ್ರೆಸ್‌ಗೆ ಸಾಮಾಜಿಕ ನ್ಯಾಯದ ಬದ್ಧತೆಯಿದೆ
*  ಅಧಿಕಾರ, ದೇಶದ ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇರಬಾರದು
*  ಸರ್ವರಿಗೂ ಹಂಚಿಕೆ ಆಗಬೇಕೆಂಬ ವಿಚಾರ ಅಂಬೇಡ್ಕರ್‌ ಹೇಳಿದ್ದರು
 

ಹೊಸದುರ್ಗ(ಜೂ.05):  ‘ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಸ್ವಾತಂತ್ರ್ಯ ಹೋರಾಟಗಾರನಾ? ಅಥವಾ ಹುತಾತ್ಮನಾ? ಆತನ ಭಾಷಣ ಮಕ್ಕಳಿಗೆ ಏಕೆ ಬೇಕ್ರೀ?’ ಹೀಗೆಂದು ಪ್ರಶ್ನಿಸಿದವರು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಠ್ಯದಲ್ಲಿ ಹೆಡಗೇವಾರ್‌ಪಾಠ ಉಳಿಸಿಕೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಗೆ ತೀವ್ರ ಕಿಡಿಕಾರಿದರು. 

ಪಠ್ಯದಲ್ಲಿ ಹೆಡಗೇವಾರ್‌ ಪಾಠ ಸೇರ್ಪಡೆಗೆ ನಮ್ಮ ವಿರೋಧವಿದೆ. ಹೆಡಗೇವಾರ್‌ ಆರೆಸ್ಸೆಸ್‌ ಬಗ್ಗೆ ಮಾತನಾಡಿದ್ದಾರೆ. ಬಸವ, ಬುದ್ಧ, ಅಂಬೇಡ್ಕರ್‌, ಗಾಂಧಿ, ನೆಹರು, ಪಟೇಲ್‌ ತ್ಯಾಗ ಮಾಡಿದ್ದಾರೆ. ಹೆಡಗೇವಾರ್‌ ಏನು ಮಾಡಿದ್ದಾರೆ? ಆರೆಸ್ಸೆಸ್‌ ಸಂಸ್ಥಾಪಕರು ಎಂಬ ಕಾರಣಕ್ಕೆ ಪಠ್ಯ ಆಗಬೇಕೆ? ಕುವೆಂಪು ರಚಿತ ನಾಡಗೀತೆಯನ್ನು ತಿರುಚುವುದು, ಭಗತ್‌ ಸಿಂಗ್‌, ನಾರಾಯಣಗುರು ಪಾಠ ತೆಗೆಯುವುದು, ಇವೆಲ್ಲ ಏನು ತೋರಿಸುತ್ತದೆ? ನೀವು ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೀರಿ ಎಂದರು.

Latest Videos

ಕಾಂಗ್ರೆಸ್‌ನಿಂದ ಹೊರನಡೆದ ಮತ್ತೊಬ್ಬ ನಾಯಕ: ಆಮ್‌ ಆದ್ಮಿಯಾಗ್ತಾರ ಬ್ರಿಜೇಶ್‌ ಕಾಳಪ್ಪ?

ಕಾಂಗ್ರೆಸ್‌ಗೆ ಸಾಮಾಜಿಕ ನ್ಯಾಯದ ಬದ್ಧತೆಯಿದೆ. ಎಲ್ಲಾ ಜನಾಂಗದ ಏಳಿಗೆ ಬಯಸುತ್ತದೆ. ಬಸವಾದಿ ಶರಣರು, ಬುದ್ಧ, ಸಂತ, ಸೂಫಿಗಳು ಸಮ ಸಮಾಜ ಬಯಸಿದ್ದರು. ಅಧಿಕಾರ, ದೇಶದ ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇರಬಾರದು. ಸರ್ವರಿಗೂ ಹಂಚಿಕೆ ಆಗಬೇಕೆಂಬ ವಿಚಾರ ಅಂಬೇಡ್ಕರ್‌ ಹೇಳಿದ್ದರು. ಕೆಲ ಪಕ್ಷದವರು ಸಂವಿಧಾನಕ್ಕೆ ಮಾರಕವಾಗಿದ್ದಾರೆ. ಯಾರು ಸಂವಿಧಾನದ ಆಶಯಗಳಿಗೆ ವಿರುದ್ಧವಿದ್ದಾರೋ ಅವರು ರಾಷ್ಟ್ರಪ್ರೇಮಿಗಳಲ್ಲ. ದೇಶದ್ರೋಹಿಗಳು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ದ ಹರಿಹಾಯ್ದರು.
 

click me!