
ರೋಣ (ಮಾ.01): ದುರಾಡಳಿತ ನಡೆಸಿದ ಬಿಜೆಪಿ ಸರ್ಕಾರದಿಂದ ಎಲ್ಲಾ ಇಲಾಖೆಯಲ್ಲೂ ಸದ್ಯ ವಿಪರೀತ ಲಂಚ ತಾಂಡವವಾಡುತ್ತಿದ್ದು, ವಿಧಾನಸೌಧ ಗೋಡೆಯೂ ಲಂಚ ಎಂದು ಪಿಸುಗುಟ್ಟುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರಜಾಧ್ವ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಎಂಎಲ್‌ಎಗಳು ಪ್ರತಿ ಇಲಾಖೆಗೂ ಇಂತಿಷ್ಟುಲಂಚ ನಿಗದಿ ಮಾಡಿದ್ದಾರೆ. ಇದರಿಂದ ಪಾರದರ್ಶಕ ಆಡಳಿತ ಎಲ್ಲಿಂದ ಬರುತ್ತದೆ.
ಲಂಚದ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅನೇಕ ಬಾರಿ ಹೇಳಿದ್ದಾರೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರತಿಯೊಂದು ಕಾಮಗಾರಿಗೂ ಶಾಸಕರು, ಸಚಿವರು ಶೇ. 40ರಷ್ಟು ಕಮಿಶನ್ ತಗೆದುಕೊಳ್ಳುತ್ತಾರೆ ಎಂದು ಮೋದಿಯವರಿಗೆ ಬಹಿರಂಗ ಪತ್ರ ಬರೆದು ಒಂದುವರೆ ವರ್ಷವಾಗಿದೆ. ಇಂತಹ ಪರಿಸ್ಥಿತಿ ನಾ ಎಂದೂ ನೋಡಿಲ್ಲ. ರಾಜ್ಯದ ಜನತೆ ಬಿಜೆಪಿ ದುರಾಡಳಿತವನ್ನು ಮರೆಯೊದಿಲ್ಲ, ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ರಾಜ್ಯ ಸರಕಾರಕ್ಕೆ ಕಿವಿ, ಕಣ್ಣು, ಹೃದಯ ಏನೂ ಇಲ್ಲ: ಡಿ.ಕೆ.ಶಿವಕುಮಾರ್
ಸಿಂಗ್ ಸಾಲ ಮನ್ನಾ: ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ದೇಶದಲ್ಲಿ . 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ನಾನು ಸಿಎಂ ಇದ್ದಾಗ ರಾಜ್ಯದಲ್ಲಿ . 8200 ಕೋಟಿ ಸಾಲ ಮನ್ನಾ ಮಾಡಿದೆ. ರೈತರ ಸಾಲಮನ್ನಾ ಕುರಿತು ಯಡಿಯೂರಪ್ಪ ಸಿಎಂ ಇದ್ದಾಗ ನಮ್ಮಲ್ಲಿ ನೋಟ್ ಪ್ರಿಂಟ್ ಮಾಡಲ್ಲ ಅಂತ ಹೇಳಿದರು. ಮೋದಿಯವರು ಯಡಿಯೂರಪ್ಪನವರನ್ನು ರೈತರ ಮುಖ್ಯಮಂತ್ರಿ ಅನ್ನುತ್ತಿರುವುದು ವಿಪರ್ಯಾಸ ಸಂಗತಿ ಎಂದರು.
ವಚನ ಭ್ರಷ್ಟ ಪ್ರಧಾನಿ- ಆರೋಪ: ಈಗ ವಾರಕ್ಕೊಮ್ಮೆ ಮೋದಿಯವರು ರಾಜ್ಯಕ್ಕೆ ಬರುತ್ತಿದ್ದಾರೆ ಯಾಕೆ ಗೊತ್ತಾ..? ಕೋವಿಡ್ ಬಂದಾಗ ಬರಲಿಲ್ಲ, ನೆರೆ ಹಾವಳಿಯಾದಾಗ ಬರಲಿಲ್ಲ, ಮನೆ ಕಳೆದುಕೊಂಡು ಬೆಳೆ ಹಾನಿಯಾದಾಗ ರಾಜ್ಯಕ್ಕೆ ಬರದ ಪ್ರಧಾನಿ ಮೋದಿಯವರು, ಅಮಿತ್ ಶಾ, ಜೆ.ಪಿ. ನಡ್ಡಾ ವಾರಕ್ಕೊಮ್ಮೆ ಭೇಟಿ ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿ. ನರೇಂದ್ರ ಮೋದಿಯವರೇ, ಜನರನ್ನು ಬದುಕಿಸುವ ಯಾವುದಾದರೂ ಒಂದು ಕಾರ್ಯವನ್ನು ಮಾಡಿದ್ದೀರಾ? ಕೊಟ್ಟಮಾತನ್ನು ಈಡೇರಿಸದ ವಚನ ಭ್ರಷ್ಟಪ್ರಧಾನಮಂತ್ರಿ ಮೋದಿಯವರಾಗಿದ್ದಾರೆ ಎಂದು ಹರಿಹಾಯ್ದರು.
ಅಲ್ಪ ಸಂಖ್ಯಾತರ ಏಳ್ಗೆಗೆ: ಟಿಪ್ಪು ಸುಲ್ತಾನ್ ಜಯಂತಿ ಮಾಡಿದವರು ನಾವೇ. ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಆಚರಣೆ, ಕೆಂಪೇಗೌಡ ಜಯಂತಿ, ವಾಲ್ಮೀಕಿ, ಸೇವಾಲಾಲ ಜಯಂತಿ ಮಾಡಿದವರೂ ನಾವು. ಆದರೆ ಬಿಜೆಪಿಯರು ನಾವು ಪ್ರತಿಮೆ ನಿರ್ಮಿಸಿದ್ದಕ್ಕೆ ಹೂವಿನ ಹಾರ ಹಾಕಲು ಹೋಗುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಹುಟ್ಟೂರಲ್ಲಿ 250 ಕೋಟಿ ಅನುದಾನ ನೀಡಿ ಸೈನಿಕ ಶಾಲೆ ತೆರೆದಿದ್ದೇ ಕಾಂಗ್ರೆಸ್ ಸರ್ಕಾರ. ಆದರೆ ಬಿಜೆಪಿಯವರು ಏನು ಮಾಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಅಲ್ಪ ಸಂಖ್ಯಾತರ ಏಳ್ಗೆಗೆಗೆ 5000 ಕೋಟಿ ವ್ಯಯಿಸಲಾಗುವುದು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ಸಿದ್ದರಾಮಯ್ಯ
ಪ್ರತಿ ಮನೆಗೆ 200 ಯೂನಿಚ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ಪ್ರತಿ ತಿಂಗಳು 2000 ಪ್ರೋತ್ಸಾಹಧನ, ಬಿಪಿಎಲ್ ಕಾರ್ಡದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಈ ಕುರಿತು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದೇವೆ. ಮಾತು ಕೊಟ್ಟಂತೆ ನಡೆದುಕೊಳ್ಳುತ್ತೇವೆ. ಮಾತಿಗೆ ತಪ್ಪಿದಲ್ಲಿ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.