ಕಾಂಗ್ರೆಸ್‌ನಲ್ಲಿನ ಆಂತರಿಕ ಕಿತ್ತಾಟ ಇನ್ನೂ ದೊಡ್ಡ ಮಟ್ಟಕ್ಕೆ ಹೋಗಲಿದೆ: ಶೆಟ್ಟರ್‌

By Kannadaprabha NewsFirst Published Aug 6, 2022, 10:23 PM IST
Highlights

ಬಿಜೆಪಿ ಸಂಘಟನೆ-ಬೆಳವಣಿಗೆಗೆ ಸಮಸ್ಯೆ ಇಲ್ಲ: ಜಗದೀಶ ಶೆಟ್ಟರ್‌

ಹುಬ್ಬಳ್ಳಿ(ಆ.06):  ಸಿದ್ದರಾಮೋತ್ಸವ ವೈಯಕ್ತಿಕ ಜನ್ಮದಿನ ಆಚರಣೆ. ಅದರಿಂದ ಬಿಜೆಪಿ ಸಂಘಟನೆ, ಬೆಳವಣಿಗೆಗೆ ಯಾವುದೆ ತೊಂದರೆ ಇಲ್ಲ, ಬದಲಾಗಿ ಕಾಂಗ್ರೆಸ್‌ ಸಮಸ್ಯೆಗೆ ಸಿಲುಕಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ಸಿಗ್ನಲ್‌ ಕೊಟ್ಟ ನಂತರ ಡಿ.ಕೆ. ಶಿವಕುಮಾರ ಅವರು ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡಿದ್ದಾರೆ. ಅವರಿಬ್ಬರೂ ವೇದಿಕೆಯಲ್ಲಿ ಒಂದಾಗಿದ್ದು ಕೇವಲ ತೋರಿಕೆಗೆ ಮಾತ್ರ, ಆರ್ಟಿಫಿಶಲ್‌ ಎಂಬುದು ಸಾಬೀತಾಗಿದೆ. ಯಾವುದೆ ರೀತಿ ಒಗ್ಗಟ್ಟು ಅಲ್ಲಿಲ್ಲ. ಅಲ್ಲಿನ ಆಂತರಿಕ ಕಿತ್ತಾಟ ಇನ್ನೂ ದೊಡ್ಡ ಮಟ್ಟಕ್ಕೆ ಹೋಗಲಿದೆ ಎಂದರು.

ಬಿಜೆಪಿ ಸಂಕಲ್ಪ ಯಾತ್ರೆ ಸೇರಿ ಸಾಕಷ್ಟು ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಹರಿದುಬಂದ ಉದಾಹರಣೆ ಇದೆ. ಸಿದ್ದರಾಮಯ್ಯ ಬಹಳಷ್ಟು ಖರ್ಚು ಮಾಡಿ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಜನ ಸೇರಿರುವ ಬಗ್ಗೆ ನಾನೂ ಹೇಳಲ್ಲ. ರಾಷ್ಟ್ರಾದ್ಯಂತ ಕಾಂಗ್ರೆಸ್‌ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕಾಂಗ್ರೆಸ್‌ ಮುಕ್ತ ಭಾರತ ಸಾಕಾರವಾಗುತ್ತದೆ. 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಖಾದಿಗೆ ಮಹತ್ವ ಬಂದಿದೆ. ಖಾದಿ ಕುಸಿದುಬಿದ್ದಾಗ ಕಾಂಗ್ರೆಸ್‌ ಯಾವುದೆ ರೀತಿ ಸ್ಪಂದನೆ ಮಾಡಲಿಲ್ಲ. ಈಗ ನಾಟಕ ಕಂಪನಿ ರೀತಿ ಯಾರೇ ಬಂದರೂ ಅಲ್ಲಿಗೆ ಹೋಗಿ ಬರುತ್ತಿದ್ದಾರೆ.

ಬಿಜೆಪಿ ದೇಶಕ್ಕೆ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದೆ: ಕೇಂದ್ರದ ವಿರುದ್ಧ ಮುತಾಲಿಕ್‌ ಕಿಡಿ

ರಾಹುಲ್‌ ಗಾಂಧಿ ಅಲ್ಲಿಗೆ ಬಂದು ಹೋಗಿದ್ದಾರೆ. ಆದರೆ, ಅಲ್ಲಿ ಏನಾಗುತ್ತಿದೆ ಎಂಬುದೆ ಅವರಿಗೆ ಗೊತ್ತಿಲ್ಲ. ರಾಜಕೀಯ ಕಾರಣಕ್ಕೆ ಖಾದಿ ವಿಚಾರ ಎದುರಿಟ್ಟು ಡ್ರಾಮಾ ಮಾಡುತ್ತಿದ್ದಾರೆ. ಜನತೆಗೆ ಇದರ ಅರಿವಿದೆ ಎಂದರು.
ಆರ್ಯಭಟ್‌ ಟೆಕ್‌ ಪಾರ್ಕ್ನಲ್ಲಿ ಬಾಕಿ ಉಳಿದಿದ್ದ ನಿವೇಶನವನ್ನು ಕಂಪನಿಗಳಿಗೆ ಹಂಚಿಕೆ ಮಾಡುವ ಕೆಲಸವನ್ನು ಮಾಡಲಾಗಿದೆ. ಅದರಲ್ಲಿ ಯಾವುದಾದರೂ ಕಂಪನಿಗೆ ಸಿಗದಿದ್ದರೆ, ನಿವೇಶನ ಲಭ್ಯವಿದ್ದರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸುತ್ತೇವೆ ಎಂದರು.

ಪಿಎಫ್‌ಐ, ಎಸ್‌ಡಿಪಿಐ ನಿಷೇಧಕ್ಕೆ ಕೇಂದ್ರ ಸರ್ಕಾರ, ಗೃಹ ಸಚಿವರ ಗಮನಕ್ಕೆ ತರಲಾಗಿದೆ. ದೇಶಾದ್ಯಂತ ಈ ಸಂಘಟನೆಗಳಿವೆ. ಯಾವುದೆ ಸಂದರ್ಭದಲ್ಲಿ ಇವುಗಳ ನಿಷೇಧ ಆಗಬಹುದು ಎಂದರು.

ಕನ್ನಡಪ್ರಭ ವರದಿ ಪ್ರಸ್ತಾಪ

ಪಾಲಿಸ್ಟರ್‌ ಧ್ವಜ ತಯಾರಿಕೆಯಿಂದ ಖಾದಿಗೆ ಧಕ್ಕೆಯಾಗುವ ಪ್ರಶ್ನೆಯೇ ಇಲ್ಲ. ಧ್ವಜ ತಯಾರಿಕೆ ವೇಳೆ ಎಲ್ಲೋ ಒಂದು ಕಡೆ ತಪ್ಪಾದರೆ ಅದನ್ನು ದೊಡ್ಡದಾಗಿ ಬಿಂಬಿಸುವುದು ಸರಿಯಲ್ಲ ಎಂದರು. ಈ ವೇಳೆ ‘ಕನ್ನಡಪ್ರಭ’ ವರದಿ ಪ್ರಸ್ತಾಪಿಸಿ ಪತ್ರಿಕೆಯಲ್ಲಿ ಖಾದಿ ವ್ಯಾಪಾರ ಹೆಚ್ಚಾಗಿರುವುದರ ವರದಿ ನೋಡಿದ್ದೇನೆ. ಖಾದಿ ಉತ್ಪಾದನೆ, ವ್ಯಾಪಾರ ಮೊದಲಿಗಿಂತ ಈಗಲೆ ಹೆಚ್ಚಾಗಿದೆ. ಪಾಲಿಸ್ಟರ್‌ನಿಂದ ಖಾದಿಗೆ ಸಮಸ್ಯೆ ಆಗಲಾರದು. ಅದರ ಮಹತ್ವ ಕಡಿಮೆ ಆಗಲಾರದು ಎಂದು ಶೆಟ್ಟರ್‌ ಹೇಳಿದರು.
 

click me!