ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾವೇಶದಲ್ಲಿ ಸಿದ್ದು ಮತ್ತು ಡಿಕೆಶಿ ರಾಹುಲ್ ಗಾಂಧಿ ನಿರ್ದೇಶನದಂತೆ ಆಲಂಗಿಸಿರುವ ವಿಚಾರವಾಗಿ ಸಚಿವ ಬಿ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಆ.6): ಬಲವಂತದ ಆಲಿಂಗನ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಬಿ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾವೇಶದಲ್ಲಿ ಸಿದ್ದು ಮತ್ತು ಡಿಕೆಶಿ ರಾಹುಲ್ ಗಾಂಧಿ ನಿರ್ದೇಶನದಂತೆ ಆಲಂಗಿಸಿರುವ ವಿಚಾರ ಕುರಿತು ಅವರು ಮಾತನಾಡಿದರು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಆಲಿಂಗನ ಸಹಜವಾದುದಲ್ಲ. ಇದು ಈಗಾಗಲೇ ಬಹಿರಂಗ ಕೂಡಾ ಆಗಿದೆ.ಯಾರದ್ದೋ ಬಲವಂತದ ಆಲಿಂಗನ ತುಂಬಾ ದಿನ ಉಳಿಯುವುದಿಲ್ಲ.ಬಲವಂತದ ಆಲಿಂಗನ ಬೇಗ ಡೈವೋರ್ಸ್ ಆಗುತ್ತದೆ.ಸಿದ್ದರಾಮಯ್ಯ ಮತ್ತು ಡಿಕೆಶಿ ಡೈವೋರ್ಸ್ ಯಾವಾಗ ಆಗುತ್ತದೆ ಕಾದು ನೋಡಬೇಕು ಎಂದು ಹೇಳಿದರು. ಬೆಂಗಳೂರು ಬಿಬಿಎಂಪಿ ಕ್ಷೇತ್ರ ವಿಂಗಡಣೆಗೆ ಕಾಂಗ್ರೆಸ್ ತಗಾದೆ ತೆಗೆದಿರುವ ಬಗ್ಗೆ ಪ್ರಶ್ನಿಸಿರುವ ಸುನಿಲ್ ಕುಮಾರ್, ಕಾಂಗ್ರೆಸ್ ಪಕ್ಷ ಎಷ್ಟು ಪಾರದರ್ಶಕವಾಗಿ ಮೀಸಲಾತಿಯನ್ನು ಜಾರಿಗೆಗೊಳಿಸಿದೆ? ನಾವು ಪಾರದರ್ಶಕವಾಗಿ ಮೀಸಲಾತಿಯನ್ನು ಜಾರಿಗೆಗೊಳಿಸಿದ್ದೇವೆ.ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿದ್ದೇವೆ. ಜಮೀರ್ ಅಹಮ್ಮದ್ ಅವರಿಗೆ ಆಕ್ಷೇಪ ಇದ್ದರೂ ಸಲ್ಲಿಸಲಿ ಎಂದರು.
ರಂಗಾಯಣಕ್ಕೆ ಅನುದಾನ: ಆಗಸ್ಟ್ 13 ರಿಂದ ರಾಜ್ಯದ ಎಲ್ಲಾ 5 ರಂಗಾಯಣಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಒಂದೊಂದು ಗಂಟೆಗಳ ನಾಟಕವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದರು. ರಂಗಾಯಣಕ್ಕೆ ಅನುದಾನ ನೀಡದೆ ಇರುವ ಕುರಿತು ಮಾತನಾಡಿದ ಸುನಿಲ್ , ಕೋವಿಡ್ ಸಂದರ್ಭದಲ್ಲಿ ರಂಗಾಯಣಗಳಿಗೆ ಅನುದಾನದ ಕೊರತೆಯಾಗಿತ್ತು. ಈ ಬಾರಿ ಹೆಚ್ಚಿನ ಅನುದಾನ ನೀಡುವಂತೆ ಆರ್ಥಕ ಇಲಾಖೆಗೆ ಕೋರಲಾಗಿದ್ದು, ಒಪ್ಪಿಗೆ ಸಿಕ್ಕಿದೆ ಎಂದರು.
ಪ್ರವೀಣ್ ಹಂತಕರು ಎರಡು ದಿನಗಳಲ್ಲಿ ಬಂಧನ: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಕೊಲೆಗೆ ಸಂಬಂದಿಸಿದಂತೆ ಮಾತನಾಡಿ, ಕೊಲೆ ಮಾಡಿದವರು ಕೇರಳದವರಲ್ಲ, ಸ್ಥಳೀಯರೆಂದು ಗೃಹಮಂತ್ರಿಗಳು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಪೋಲಿಸ್ ಇಲಾಖೆಗೆ ಮುಕ್ತವಾದ ಅವಕಾಶ ನೀಡಿದ್ದೇವೆ. 3 - 4 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಬಂಧನ ಆಗಬೇಕಿದೆ. ಒಂದೆರೆಡು ದಿನಗಳಲ್ಲಿ ಬಂಧನವಾಗಿತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಸಿದ್ದರಾಮೋತ್ಸವದ ಬಳಿಕ ಮಠಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ ಚುನಾವಣೆಗೆ ಸಜ್ಜಾದರಾ?
ಅಮೃತ ಮಹೋತ್ಸವ ಧ್ವಜಾರೋಹಣ: ಉಡುಪಿ ಜಿಲ್ಲೆಯಲ್ಲಿ 4 ಲಕ್ಷ, ದ.ಕ ಜಿಲ್ಲೆಯಲ್ಲಿ 6 ಲಕ್ಷ ಮನೆಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಲು ನಿರ್ಧರಿಸಲಾಗಿದೆ. ಆ. 9 ರಿಂದ ರಾಷ್ಟ್ರ ಧ್ವಜ ವಿತರಿಸಲಾಗುತ್ತದೆ. ಆ.13 ರಿಂದ 15 ರವರೆಗೆ ಜಿಲ್ಲೆಯ 4 ಲಕ್ಷ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸಲಿದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ ಸೈಟ್ ನಲ್ಲಿ ಹರ್ ಘರ್ ತಿರಂಗಾ ಎಂಬುದನ್ನು ಹಿಂದಿಯಲ್ಲಿ ಬರೆದಿರುವುದಕ್ಕೆ ಸ್ಪಷ್ಟಿಕರಣ ನೀಡಿದ ಸಚಿವರು ಇಡೀ ದೇಶಾದ್ಯಂತ ಇದೇ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮ ಆದ್ದರಿಂದ ಇ ಆಡಳಿತ ವಿಭಾಗದವರು ಅದೇ ರೀತಿ ಬರೆದಿದ್ದಾರೆ. ಇದನ್ನು ಗೊಂದಲ ಮಾಡುವಂತದೇನಿಲ್ಲ ಎಂದರು.