
ಬೆಂಗಳೂರು, (ಜ.18): ಒಂದೆಡೆ ಬಿಜೆಪಿ ನಾಯಕರು ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಸಿಡಿ ಬಾಂಬ್ ಸಿಡಿಸಿದ್ರೆ, ಇತ್ತ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಿಎಸ್‌ವೈಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹೌದು.. ನಿನ್ನೆ (ಭಾನುವಾರ) ಬೆಳಗಾವಿಯಲ್ಲಿ ನಡೆದ ಬಿಜೆಪಿ ಜನಸೆವಕ ಸಮಾವೇಶದಲ್ಲಿ ಬಿಎಸ್ ಯಡಿಯೂರಪ್ಪನವರು ಜೆಡಿಎಸ್ ಲೆಕ್ಕಕ್ಕಿಲ್ಲ ಎಂದು ಹೇಳಿದ್ದರು.
ಇನ್ನು ಈ ಬಗ್ಗೆ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ಯಡಿಯೂರಪ್ಪನವರೇ ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ. ನನ್ನ ತಂಟೆಗೆ ಬಂದರೆ ಹುಷಾರ್ ಎಂದು ಸಿಎಂ ಬಿಎಸ್‌ವೈಗೆ ಎಚ್ಚರಿಕೆ ಕೊಟ್ಟರು.
ಬೆಳಗಾವಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಾನು ವೈಯಕ್ತಿಕ ಸಿಡಿಗಳನ್ನ ಇಟ್ಕೊಂಡು ರಾಜಕಾರಣ ಮಾಡೋದಿಲ್ಲ. ನಾನು ರಾಜಕೀಯವಾಗಿ ಬಳಸಿಕೊಳ್ಳುವ ದಾಖಲೆಗಳೇ ಬೇರೆ. ಯಡಿಯೂರಪ್ಪ ಕಳ್ಳರು ಮತ್ತು ದರೋಡೆಕೋರರನ್ನ ಸೇರಿಸಿಕೊಂಡಿದ್ದಾರೋ ಗೊತ್ತಿಲ್ಲ. ಇದೂವರೆಗೂ ನಾನು ಮೌನವಾಗಿದ್ದೆ ಎಂದ ಕುಮಾರಸ್ವಾಮಿ ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು
ಜೆಡಿಎಸ್ ಮುಗಿಸಲು ಯಡಿಯೂರಪ್ಪಗೆ ಇನ್ನೊಂದು ಜನ್ಮ ಹುಟ್ಟಿ ಬಂದರೂ ಆಗಲ್ಲ. ಅವರು ಇದೂವರೆಗೂ ನನ್ನ ಪಕ್ಷದ ತಂಟೆಗೆ ಬಂದಿಲ್ಲ. ಹಾಗಾಗಿ ಯಡಿಯೂರಪ್ಪ ಸುರಕ್ಷಿತವಾಗಿದ್ದಾರೆ ಎಂದರು.
ಏಪ್ರಿಲ್ ಬಳಿಕ ಯಡಿಯೂರಪ್ಪರನ್ನು ತೆಗೆಯುತ್ತಾರೆ : ಉನ್ನತ ಮೂಲದಿಂದ ಮಾಹಿತಿ
2008ರ ರಾಜಕೀಯ ಎತ್ತಿದ HDK
2008ರಲ್ಲಿ ದೇವೇಗೌಡರೇ ಅಪ್ಪ, ಮಕ್ಕಳನ್ನ ಮುಗಿಸುತ್ತೇವೆ ಎಂದಿದ್ದರು. ಬಳಿಕ ರಾಜಕಾರಣದಲ್ಲಿ ಏನೆಲ್ಲಾ ಆಯ್ತು. ಮೂವರು ಸಿಎಂ ಬದಲಾದರು. ಜೆಡಿಎಸ್ ನಿರ್ಣಾಮ ಮಾಡುತ್ತೇವೆ ಎಂದವರೆಲ್ಲ ಎಲ್ಲೆಲ್ಲೋ ಹೋಗಿದ್ದಾರೆ. ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ. ನನ್ನ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ. ನನ್ನ ಸುದ್ದಿಗೆ ಬಂದರೆ ಸರಿ ಇರಲ್ಲ ಎಂದು ಬಿಎಸ್‌ವೈಗೆ ಖಡಕ್ ವಾರ್ನಿಂಗ್ ಕೊಟ್ಟರು.
ಈ ಹಿಂದೆಯೂ ಯಡಿಯೂರಪ್ಪ 10 ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದಿದ್ದರು. ಆಮೇಲೆ ಅವರು ಎಲ್ಲಿ ಹೋದರು? ಎಂದು ಲೇವಡಿ ಮಾಡಿದ ಕುಮಾರಸ್ವಾಮಿ, ಅವನ್ಯಾರೋ ನೀರಾವರಿ ಸಚಿವ ಮಾತನ್ನಾಡಿದ್ದಾನೆ. ಸಿ.ಪಿ. ಯೋಗೇಶ್ವರ್ 9 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅಂತ. ಮನೆ ಮಾರಿ ಸಾಲ ಮಾಡಿ ಖರ್ಚು ಮಾಡಿದ್ದಾರಂತೆ. ನನ್ನ ಅವಧಿಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದರು. ಈಗ ಇವರೆಲ್ಲ ಎಲ್ಲಿ ಹೋದರು? ಎಂದು ಐಟಿ ಇಲಾಖೆ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಸಿದ್ದುಗೆ ಎಚ್‌ಡಿಕೆ ಟಾಂಗ್
ಕಾಂಗ್ರೆಸ್ ನಾಯಕರೊಬ್ಬರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದಿದ್ದರು. ಇದೀಗ ಆರ್‌ಎಸ್‌ಎಸ್ ಮೂಲಗಳ ಪ್ರಕಾರ ಏಪ್ರಿಲ್ಗೆ ಯಡಿಯೂರಪ್ಪ ಬದಲಾಗಲಿದ್ದಾರೆ ಎಂದಿದ್ದಾರೆ. ಹಾಗಾದರೆ ಅವರು ಆರ್ಎಸ್ಎಸ್ನ ಬೀ ಟೀಮ್ ಇರಬೇಕು. ಅವರಿಗೆ ಆರ್‌ಎಸ್‌ಎಸ್ ಮೂಲಗಳಿಂದಲೇ ಗೊತ್ತಾಗುತ್ತಾ? ಎಂದು ಹೆಸರು ಹೇಳಿದೇ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.