ಬಿಜೆಪಿ- ಜೆಡಿಎಸ್‌ ಸೀಟು ಹಂಚಿಕೆಗಾಗಿ ಕುಮಾರಸ್ವಾಮಿ ಶೀಘ್ರ ದೆಹಲಿಗೆ

By Kannadaprabha NewsFirst Published Dec 20, 2023, 3:39 AM IST
Highlights

ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ವಿದೇಶಕ್ಕೆ ತೆರಳಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ನಗರಕ್ಕೆ ಹಿಂತಿರುಗಿದ್ದಾರೆ. ಸೀಟು ಹಂಚಿಕೆ ವಿಚಾರವಾಗಿ ಪಕ್ಷದ ಕೆಲವು ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ದೆಹಲಿಗೆ ತೆರಳುವ ನಿರೀಕ್ಷೆ ಇದೆ. ಸಂಸತ್‌ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರ ಸಮಯ ಸಿಗಲಿದೆ. 

ಬೆಂಗಳೂರು(ಡಿ.20): ಪಂಚ ರಾಜ್ಯಗಳ ಚುನಾವಣೆ ಮುಗಿದು ಅಲ್ಲಿ ನೂತನ ಸರ್ಕಾರಗಳು ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸೀಟು ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಶೀಘ್ರದಲ್ಲಿಯೇ ದೆಹಲಿಯೇ ತೆರಳುವ ಸಾಧ್ಯತೆ ಇದೆ.

ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ವಿದೇಶಕ್ಕೆ ತೆರಳಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ನಗರಕ್ಕೆ ಹಿಂತಿರುಗಿದ್ದಾರೆ. ಸೀಟು ಹಂಚಿಕೆ ವಿಚಾರವಾಗಿ ಪಕ್ಷದ ಕೆಲವು ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ದೆಹಲಿಗೆ ತೆರಳುವ ನಿರೀಕ್ಷೆ ಇದೆ. ಸಂಸತ್‌ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರ ಸಮಯ ಸಿಗಲಿದೆ. ಅಲ್ಲದೇ, ಅಧಿವೇಶನದಲ್ಲಿ ಭಾಗವಹಿಸಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸಹ ದೆಹಲಿಯಲ್ಲಿಯೇ ತಂಗಿದ್ದಾರೆ. ಹೀಗಾಗಿ ಬಿಜೆಪಿ ವರಿಷ್ಠರ ಜತೆ ಸಮಾಲೋಚನೆ ನಡೆಸಲು ಸೂಕ್ತ ಸಮಯ ಇದಾಗಿದೆ ಎಂಬ ಕಾರಣಕ್ಕಾಗಿ ಶೀಘ್ರದಲ್ಲಿಯೇ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos

ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾದ್ರೆ ರಾಜ್ಯಕ್ಕೂ, ದೇಶಕ್ಕೂ ಒಳ್ಳೆಯದಾಗುತ್ತೆ: ಕೆಎಸ್ ಈಶ್ವರಪ್ಪ

ಸೀಟು ಹಂಚಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್‌ 4ರಿಂದ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದೆ. ಈ ವಿಚಾರವಾಗಿ ಬಿಜೆಪಿ ವರಿಷ್ಠರೊಂದಿಗೆ ಪ್ರಸ್ತಾಪಿಸಿ ಚರ್ಚಿಸಲಾಗುವುದು. ಈಗಾಗಲೇ ಹಾಸನವು ಜೆಡಿಎಸ್‌ ಹಿಡಿತದಲ್ಲಿದ್ದು, ಈ ಕ್ಷೇತ್ರದ ಜತೆಗೆ ತುಮಕೂರು, ಕೋಲಾರ ಮತ್ತು ಉತ್ತರ ಕರ್ನಾಟಕದ ಒಂದು ಕ್ಷೇತ್ರ ಸೇರಿದಂತೆ ನಾಲ್ಕೈದು ಸ್ಥಾನಗಳನ್ನು ನೀಡುವಂತೆ ಕೇಳುವ ಉದ್ದೇಶವನ್ನು ಹೊಂದಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಸಮ್ಮುಖದಲ್ಲಿಯೇ ಈ ವಿಚಾರ ಸಮಾಲೋಚನೆ ನಡೆಸಲಾಗುತ್ತದೆ ಎನ್ನಲಾಗಿದೆ.

ದೆಹಲಿಗೆ ತೆರಳುವ ಮುನ್ನ ಕುಮಾರಸ್ವಾಮಿ ಅವರು ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಿದ್ದಾರೆ. ಸೀಟು ಹಂಚಿಕೆ ಬಳಿಕ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಉಭಯ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಬೇಕಾಗುತ್ತದೆ. ಇದರಲ್ಲಿ ಯಾವುದೇ ಪ್ರತಿಷ್ಠೆಯನ್ನಿಟ್ಟುಕೊಳ್ಳದೆ ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಮೈತ್ರಿ ವಿಚಾರವಾಗಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿರಲಿಲ್ಲ. ನೇರವಾಗಿ ವರಿಷ್ಠರ ಜತೆಯೇ ಚರ್ಚಿಸಿ ಅಂತಿಮಗೊಳಿಸಿದ್ದರು. ಅದರಂತೆಯೇ ಸೀಟು ಹಂಚಿಕೆಯಲ್ಲೂ ಬಿಜೆಪಿ ವರಿಷ್ಠರ ಜತೆಯೇ ನೇರವಾಗಿ ಚರ್ಚಿಸಿ ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ. ಚುನಾವಣೆ ಸಮಯದ ವೇಳೆ ರಾಜ್ಯದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇರುವ ಕಾರಣ ಜೆಡಿಎಸ್‌ ಮತ್ತು ಬಿಜೆಪಿಯ ವರಿಷ್ಠರು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ ಎಂದು ಹೇಳಲಾಗಿದೆ.

click me!