* ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟ
* ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೇನೆ
* ಸ್ವತಂತ್ರ ಸರ್ಕಾರ ನೀಡಿದರೆ ಮಾತ್ರ ನಿಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯ
ರಾಮನಗರ(ಸೆ.29): ಯಾವ ಪಕ್ಷದಲ್ಲಿಯೂ ನಡೆಯದ ರೀತಿ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮ ಸಹಕಾರ ನಮಗೆ ತುಂಬಾ ಮುಖ್ಯವಾಗಿದೆ. ಜೆಡಿಎಸ್ ಪಕ್ಷದ ಸಂಘಟನೆಗೆ ನಿಮ್ಮ ಶಕ್ತಿ ಮುಖ್ಯವಾಗಿದೆ. ಅತ್ಯಾಚಾರ, ಹಲ್ಲೆ, ಅಕ್ರಮಗಳು ರಾಜ್ಯದಲ್ಲಿ ನಡೆಯುತ್ತಿವೆ. ದಿನ ಬೆಳಗಾದರೆ ನಮ್ಮ ಮನೆಗೆ ಹೆಣ್ಣು ಮಕ್ಕಳು ಬಂದು ಕಷ್ಟ ಹೇಳಿಕೊಳ್ಳುತ್ತಾರೆ. ಅವರ ದುಖಃ ದುಮ್ಮಾನ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೇನೆ ಅಂತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ(HD Kumaraswamy) ತಿಳಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ನಡೆಯುತ್ತಿರುವ ಜೆಡಿಎಸ್(JDS) ಕಾರ್ಯಾಗಾರದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಸಂಘಟನೆ ಮಾಡುವ ಮಹಿಳೆಯರಿಗೆ ಗೌರವ ನೀಡಿ. ಅವರನ್ನು ಗೌರವ ರೀತಿ ನಡೆಸಿಕೊಳ್ಳಿ ಎಂದು ಮುಖಂಡರಿಗೆ ಹೇಳಿದ್ದೇನೆ. ಪಕ್ಷದ ಸಂಘಟನೆಗೆ ಮನವೊಲಿಸಿ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಟ 100 ಜನ ಮಹಿಳೆಯರನ್ನು ಸೇರಿಸಿ ಎಂದಿದ್ದೇನೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿಗೆ ಸಲಹೆ ನೀಡಿದ ಅನಿತಾ : ಬೇಡಿಕೆಗಳ ಪಟ್ಟಿ ಇಟ್ಟ ಶಾಸಕಿ
ಇದೇ ವೇಳೆ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಅಭ್ಯರ್ಥಿ ಹೆಸರನ್ನ ಪ್ರಕಟಿಸಿದ್ದಾರೆ. ಕರಿಯಮ್ಮ ಅವರು ದೇವದುರ್ಗದ ಮುಂದಿನ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅವರು ಬಡ ಕುಟುಂಬದಿಂದ ಬಂದವರಾಗಿದ್ದಾರೆ. ಅವರೇನು ಶ್ರೀಮಂತ ಕುಟುಂಬದಿಂದ ಬಂದವರಲ್ಲ ಎಂದು ಹೇಳಿದ್ದಾರೆ.
ಮುಂಬರುವ ಚುನಾವಣೆಗೆ 30-35 ಜನ ಮಹಿಳೆಯರಿಗೆ(Woman) ಟಿಕೆಟ್ ಕೊಡಲು ನಾನು ಸಿದ್ಧನಿದ್ದೇನೆ. ಆದರೆ ನೀವು ಮಾನಸಿಕವಾಗಿ ಸಿದ್ಧವಾಗಬೇಕಲ್ಲ. ಅದು ಮುಖ್ಯವಾಗಿರುತ್ತದೆ. ರಾಜ್ಯದ ಉಳಿವಿಗಾಗಿ ನಮ್ಮ ಪಕ್ಷ ಅಧಿಕಾರ ಬರಬೇಕು. ಬಿಜೆಪಿ- ಕಾಂಗ್ರೆಸ್ ನೋಡಿದ್ದೇವೆ. ಬಡತನ, ಕೊರೋನಾ ಸಮಯದಲ್ಲಿ ನಡೆದುಕೊಂಡ ರೀತಿಯನ್ನ ನೋಡಿದ್ದೇವೆ. ನಿಮ್ಮ ಸಹಕಾರ, ಶ್ರಮ ಬೇಕಾಗಿದೆ. ನಾನು ಸಿಎಂ(Chief Minister) ಆಗಬೇಕು ಅಂದರೆ ನಿಮ್ಮ ದುಡಿಮೆ ಮುಖ್ಯವಾಗಿದೆ. ಇನ್ಯಾರ ಜೊತೆಗೋ ಸರ್ಕಾರ ಮಾಡಿದ್ರೆ ನಿಮ್ಮ ದುಡಿಮೆ ವ್ಯರ್ಥವಾಗುತ್ತದೆ. ಹೀಗಾಗಿ ಸ್ವತಂತ್ರ ಸರ್ಕಾರ ನೀಡಿದರೆ ಮಾತ್ರ ನಿಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ತಿಳಿಸಿದ್ದಾರೆ.