* ಪಕ್ಷದ ಸಂಘಟನೆ ಕೊರತೆ, ಮುಖಂಡರ ರಾಜೀನಾಮೆಯೇ ಕಾರಣ
* ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಸಾಧ್ಯತೆ
* ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜೆಡಿಎಸ್ ಸಂಘಟನೆಯೇ ಇಲ್ಲ
ಬಸವರಾಜ ಹಿರೇಮಠ
ಧಾರವಾಡ(ಸೆ. 29): ಬರೀ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಂಘಟನೆ ಬಲಪಡಿಸಿಕೊಳ್ಳುತ್ತಿರುವ ಜೆಡಿಎಸ್ ಪಕ್ಷವು ಉತ್ತರ ಕರ್ನಾಟಕದಲ್ಲಿ(North Karnataka) ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಪಕ್ಷದ ಸಂಘಟನಾ ಕೊರತೆಯಿಂದಾಗಿ ಪಕ್ಷಕ್ಕೆ ಒಬ್ಬೊಬ್ಬರಾಗಿ ರಾಜೀನಾಮೆ ನೀಡುವ ಮೂಲಕ ಧಾರವಾಡ(Dharwad) ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜನತೆ ನಿಧಾನವಾಗಿ ಜೆಡಿಎಸ್ ಮರೆಯುವಂತಾಗಿದೆ.
undefined
ಹು- ಧಾ ಮಹಾನಗರದಲ್ಲಿ ಪಾಲಿಕೆ ಚುನಾವಣೆಗೂ ಮುಂಚೆ ಹತ್ತಾರು ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದ ರಾಜಣ್ಣ ಕೊರವಿ ರಾಜೀನಾಮೆ ನೀಡಿ ಬಿಜೆಪಿ(BJP) ಪಾಲಾದರು. ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್(JDS) 82 ಸ್ಥಾನಗಳ ಪೈಕಿ 49 ಸ್ಥಾನಗಳಲ್ಲಿ ಮಾತ್ರ ಪೈಪೋಟಿ ಮಾಡಿ ಈ ಪೈಕಿ ಒಂದು ಸ್ಥಾನ ಮಾತ್ರ ಗೆಲ್ಲುವಲ್ಲಿ ಶಕ್ತವಾಯಿತು. ಇದಾದ ನಂತರ ಇನ್ಮುಂದೆ ಜೆಡಿಎಸ್‌ನಲ್ಲಿ ರಾಜಕೀಯ ಭವಿಷ್ಯವಿಲ್ಲವೆಂದು ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾಗಿದ್ದ ರಮಾನಂದ ಶಣೈ, ಸೇವಾದಳದ ರಾಜ್ಯ ಉಪಾಧ್ಯಕ್ಷರಾಗಿದ್ದ ಮೋಹನ ಅರ್ಕಸಾಲಿ, ಧಾರವಾಡ ಕಾರ್ಯಾಧ್ಯಕ್ಷ ಸಂಗನಮುಲ್ಲಾ ಪಕ್ಷವನ್ನು ತೊರೆದರು.
ಈ ಹಿಂದಿನ ಪಾಲಿಕೆ ಸದಸ್ಯರಾಗಿದ್ದ ರಾಜು ಅಂಬೋರೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕಮಟ್ಟಿಗೆ ಪಕ್ಷದಿಂದ ಸಹಕಾರ ದೊರೆಯಲಿಲ್ಲ. ಈ ಕಾರಣದಿಂದ ತುಸು ಅಂತರದಲ್ಲಿ ಸೋಲು ಕಂಡು ಇದೀಗ ಅವರು ಪಕ್ಷದ ಕಾರ‍್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅದೇ ಹಾದಿಯಲ್ಲಿ ಜೆಡಿಎಸ್ ಮುಖಂಡ ಹಸನ ಮೆಣಸಗಿ ಸೇರಿದಂತೆ ಹಲವರಿದ್ದಾರೆ. ಪಕ್ಷದಲ್ಲಾಗುವ ಈ ನಡೆಯಿಂದ ಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಮತ್ತಷ್ಟುಇರುಸು-ಮುರುಸು ಉಂಟಾಗುವುದರಲ್ಲಿ ಎರಡು ಮಾತಿಲ್ಲ.
'ಎಚ್ಡಿಕೆ ಮತ್ತೆ ಮುಖ್ಯಮಂತ್ರಿ ಮಾಡಬೇಕು : 120 ಸ್ಥಾನದ ಗುರಿ'
ಇದು ಬರೀ ಧಾರವಾಡ ಮಾತ್ರವಲ್ಲದೇ ಬಾಗಲಕೋಟೆ ಜಿಲ್ಲೆಯನ್ನು ಹೊರತುಪಡಿಸಿದರೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜೆಡಿಎಸ್ ಸಂಘಟನೆಯೇ ಇಲ್ಲ. ಈ ಬಗ್ಗೆ ಪಕ್ಷದ ಮುಖಂಡರಿಗೆ ಮಾಹಿತಿ ಇದ್ದರೂ ಏನೂ ಮಾಡದ ಸ್ಥಿತಿಯಲ್ಲಿದ್ದಾರೆ.
ನವಲಗುಂದ ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರಾಗಿದ್ದ ಎನ್.ಎಚ್. ಕೋನರಡ್ಡಿ(NH Konareddy) ಹತ್ತಾರು ವರ್ಷಗಳಿಂದ ಪಕ್ಷವನ್ನು ಉತ್ತರ ಕರ್ನಾಟಕದಲ್ಲಿ ಮುನ್ನಡೆಸಿಕೊಂಡು ಬಂದಿದ್ದರು. ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜತೆಗೆ ತಮ್ಮ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಮಂತ್ರಿಗಳಾಗಿದ್ದು, ಅವರನ್ನು ಮುಂದಿನ ಚುನಾವಣೆಯಲ್ಲಿ ಮಣಿಸುವುದು ಜೆಡಿಎಸ್ ಸಹಕಾರದಿಂದ ಕಷ್ಟ ಎಂದರಿತ ಕೋನರಡ್ಡಿ ಅವರು ಕಾಂಗ್ರೆಸ್(Congress) ಮೂಲಕ ಪೈಪೋಟಿ ಒಡ್ಡಲು ಸಜ್ಜಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನು ಜೆಡಿಎಸ್ ಪಕ್ಷದ ಇನ್ನೋರ್ವ ಮುಖಂಡರಾದ ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿರುವುದರಿಂದ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿಲ್ಲ. ಅವರು ವಿಧಾನಪರಿಷತ್ ಸದಸ್ಯರಾಗಿರುವ ಕಾರಣ ಮೊದಲಿನಿಂದಲೂ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸಿನಿಂದಲೇ ಚುನಾವಣೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವರನ್ನು ಬಿಟ್ಟರೆ ಜೆಡಿಎಸ್‌ನಲ್ಲಿ ಉತ್ತರ ಕರ್ನಾಟಕದಲ್ಲಿ ಮತ್ತಾರೂ ಹೇಳಿಕೊಳ್ಳುವ ಮುಖಂಡರೂ ಇಲ್ಲ. ಪ್ರಸ್ತುತ ಪಕ್ಷದ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ, ಗ್ರಾಮೀಣ ಜಿಲ್ಲಾಧ್ಯಕ್ಷ ಗಂಗಾಧರಮಠ ಅವರಿಬ್ಬರು ಪಕ್ಷಕ್ಕಾಗಿ ದುಡಿಯಬೇಕಿದೆ. ಪಕ್ಷದಿಂದ ಸಹಕಾರ, ಪೂರಕ ವಾತಾವಣ ಸೃಷ್ಟಿಯಾಗದ ಕಾರಣ ಅವರು ಸಹ ನಿರೀಕ್ಷೆಯಷ್ಟುಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ರಾಜ್ಯದ ಸಚಿವರ ಪರಮಾಪ್ತ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ
ಪಕ್ಷದ ಮುಖಂಡರುಗಳೇ ಬೇರೆ ಪಕ್ಷಗಳತ್ತ ಹೋದಾಗ ಇದ್ದ ಕೆಲವೇ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ದಾರಿ ನೋಡಿಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಜೆಡಿಎಸ್ ಈ ಭಾಗದ ಜನಮಾನಸದಿಂದ ದೂರ ಸರಿಯುತ್ತಿದೆ. ಪಕ್ಷದ ಯಾವ ಪ್ರಮುಖ ಚಟುವಟಿಕೆಗಳು, ಸಭೆ- ಸಮಾರಂಭಗಳೂ ನಡೆಯುತ್ತಿಲ್ಲ. ಇನ್ನು ಸಂಘಟನೆ ದೂರದ ಮಾತು. ಮಹಾನಗರ ಪಾಲಿಕೆ ಚುನಾವಣೆ ನಡೆದರೂ ಒಂದು ಬಹಿರಂಗ ಸಮಾರಂಭಗಳು ನಡೆಯಿಲ್ಲ. ರಾಜ್ಯದ ಮುಖಂಡರು ಮಹಾನಗರಕ್ಕೆ ಆಗಮಿಸಿ ಪ್ರಚಾರ ಮಾಡಲಿಲ್ಲ. ಇದೀಗ ಬರುವ ವಿಧಾನಸಭಾ ಸೇರಿದಂತೆ ವಿವಿಧ ಚುನಾವಣೆಗಳ ಹಿನ್ನೆಲೆ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ನಡೆಸುತ್ತಿರುವ ಜನತಾ ಪರ್ವ, ಜೆಡಿಎಸ್ ಮಿಷನ್ ಕಾರಾರಯಗಾರ ಅಂತಹ ಪಕ್ಷದ ಸಂಘಟನಾ ಕಾರ‍್ಯದಲ್ಲಿ ತೊಡಗಿದ್ದಾರೆ. ಅದೂ ಸಹ ದಕ್ಷಿಣ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಂಘಟನೆ ನಡೆಯುತ್ತಿರುವುದು ಪಕ್ಷದ ಮಟ್ಟಿಗೆ ಹಿತವೇನಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಜೆಡಿಎಸ್ ಬರೀ ದಕ್ಷಿಣ ಕರ್ನಾಟಕ ಮಾತ್ರವಲ್ಲ. ಇಡೀ ಕರ್ನಾಟಕದ ಪಕ್ಷ. ಪಕ್ಷವೂ ಸಂಘಟನೆ ದೃಷ್ಟಿಯಿಂದ ಈಗ ರಾಜ್ಯದ ಬೆಂಗಳೂರು ಅಲ್ಲದೇ ಎಲ್ಲ ವಿಭಾಗಗಳಲ್ಲಿ ಜನತಾ ಪರ್ವ ಮಾಡಲಾಗುತ್ತಿದೆ. ಈ ಮೂಲಕ ಉತ್ತರ ಕರ್ನಾಟಕದಲ್ಲೂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷದ ಸಂಘಟನೆ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡ ಎನ್.ಎಚ್. ಕೋನರಡ್ಡಿ ತಿಳಿಸಿದ್ದಾರೆ.