ನೀವೇ ಸಿಎಂ ಎಂದು ಮೋದಿ ಆಫರ್‌ ನೀಡಿದ್ರು: ಕುಮಾರಸ್ವಾಮಿ

By Kannadaprabha NewsFirst Published Jul 14, 2023, 4:45 AM IST
Highlights

ಸಮ್ಮಿಶ್ರ ಸರ್ಕಾರದ ಮೊದಲ ವರ್ಷದಲ್ಲೇ ಪ್ರಧಾನಮಂತ್ರಿಗಳು ದೆಹಲಿಗೆ ಕರೆದು ಒಂದೂವರೆ ಗಂಟೆ ಮಾತನಾಡಿದರು. ಬಿಜೆಪಿ ಜತೆ ಕೈ ಜೋಡಿಸಿ ನಿಮಗೆ ಯಾವುದೇ ಸಮಸ್ಯೆಯಿಲ್ಲದೆ ಸಹಕರಿಸುತ್ತೇವೆ. ನಾಲ್ಕೂ ವರ್ಷ ನೀವೇ ಮುಖ್ಯಮಂತ್ರಿ ಆಗಿರಿ ಎಂದು ಬಹಿರಂಗವಾಗಿ ಆಫರ್‌ ನೀಡಿದ್ದರು. ಆದರೆ, ಆಗ ಕಾಂಗ್ರೆಸ್‌ಗೆ ಮಾತು ಕೊಟ್ಟಿದ್ದರಿಂದ ಬಿಜೆಪಿ ಜತೆ ಹೋಗಲಿಲ್ಲ: ಕುಮಾರಸ್ವಾಮಿ, ‘

ವಿಧಾನಸಭೆ(ಜು.14): 1-‘ಬಿಜೆಪಿ ಜತೆ ಸೇರಿ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಒಂದೂವರೆ ಗಂಟೆ ನನ್ನ ಮನವೊಲಿಸಲು ಯತ್ನಿಸಿದ್ದರು. ನಾಲ್ಕು ವರ್ಷ ನೀವೇ ಮುಖ್ಯಮಂತ್ರಿ ಎಂಬ ಆಫರ್‌ ಕೂಡ ನೀಡಿದ್ದರು. ಆದರೆ, ಆಗ ನಾನು ಹೋಗಲಿಲ್ಲ. ಈಗ ಕಾಂಗ್ರೆಸ್‌ನವರೇ ಬಿಜೆಪಿ-ಬಿ ಟೀಂ ಎಂದು ನಮ್ಮನ್ನು ನೂಕುತ್ತಿದ್ದಾರೆ. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಬಹಿರಂಗವಾಗಿಯೇ ಮಾಡಿಕೊಳ್ಳುತ್ತೇವೆ’

2. ‘ಇಂದು ಚುನಾವಣೆಗಳು ಜಾತಿ ಆಧಾರದ ಮೇಲೆ ನಡೆಯುತ್ತಿವೆ. ಹೀಗಾಗಿ ಜಾತ್ಯತೀತತೆ ಎಂಬುದೇ ಇಲ್ಲ’

Latest Videos

3- ಶಾಸಕರ ಆಪರೇಷನ್‌ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ.

News Hour: ಕೊನೆಗೂ ವರ್ಗಾವಣೆ ದಾಖಲೆ ಬಿಡುಗಡೆ ಮಾಡಿದ ಕುಮಾರಸ್ವಾಮಿ!

- ರಾಜ್ಯಪಾಲರ ಭಾಷಣದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುವ ವೇಳೆ ನಡೆದ ಮಾತಿನ ಚಕಮಕಿ ವೇಳೆ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ನೀಡಿದ ಮೂರು ಅಚ್ಚರಿಯ ಹೇಳಿಕೆಗಳಿವು.
ರಾಜ್ಯಪಾಲರ ಭಾಷಣಕ್ಕೆ ಉತ್ತರ ನೀಡುತ್ತಿದ್ದ ಸಿದ್ದರಾಮಯ್ಯ ಅವರು ‘ಬಿಜೆಪಿ ಒಮ್ಮೆ ಕೂಡ ಜನರ ಆಶೀರ್ವಾದದೊಂದಿಗೆ ಬಹುಮತ ಪಡೆದು ಸರ್ಕಾರ ರಚನೆ ಮಾಡಿಲ್ಲ. ಆಪರೇಷನ್‌ ಕಮಲದಂತಹ ಅನೈತಿಕ ಕುಕೃತ್ಯದ ಮೂಲಕವೇ ಅಧಿಕಾರಕ್ಕೆ ಬಂದಿದೆ’ ಎಂದು ದೂರಿದರು.

ಇದಕ್ಕೆ ಬಿಜೆಪಿಯ ಬಸವರಾಜ ಬೊಮ್ಮಾಯಿ, ‘ನೀವು ಸಮ್ಮಿಶ್ರ ಸರ್ಕಾರ ಮಾಡಿದಾಗ ಬಹುಮತ ಇತ್ತೇ? ಅದೂ ಅನೈತಿಕ ಸರ್ಕಾರವಲ್ಲವೇ? ನಿಮ್ಮ ಸರ್ಕಾರದಲ್ಲಿ ಜೆಡಿಎಸ್‌ ಶಾಸಕರನ್ನು ‘ಆಪರೇಷನ್‌ ಹಸ್ತ’ ಮಾಡಿದ್ದು ಸುಳ್ಳೇ?’ ಎಂದು ಕಿಡಿ ಕಾರಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ ಹಲವು ಅಚ್ಚರಿಯ ಹೇಳಿಕೆ ನೀಡಿದರು. ಮುಖ್ಯವಾಗಿ ‘ಶಾಸಕರ ಆಪರೇಷನ್‌, ಬಹುಮತದ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. 2004ರಲ್ಲಿ ಕಾಂಗ್ರೆಸ್ಸನ್ನು ಬಹುಮತ ನೀಡದೆ ಜನತೆ ತಿರಸ್ಕರಿಸಿದರೂ ದೆಹಲಿ ಹೈಕಮಾಂಡ್‌ ಸಮ್ಮಿಶ್ರ ಸರ್ಕಾರ ಮಾಡಿ ಕಾಂಗ್ರೆಸ್‌ನವರನ್ನೇ ಮುಖ್ಯಮಂತ್ರಿ ಮಾಡಿದ್ದರು’ ಎಂದು ದೂರಿದರು.

ಇದಕ್ಕೆ ಸಿದ್ದರಾಮಯ್ಯ, ‘ಯಾಕೋ ಕುಮಾರಸ್ವಾಮಿ ಅವರು ಬಿಜೆಪಿ ಅವರ ಜತೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣ್ತಿದೆಯಲ್ಲಾ?’ ಎಂದು ಕಾಲೆಳೆದರು.

ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಸಮ್ಮಿಶ್ರ ಸರ್ಕಾರದ ಮೊದಲ ವರ್ಷದಲ್ಲೇ ಪ್ರಧಾನಮಂತ್ರಿಗಳು ದೆಹಲಿಗೆ ಕರೆದು ಒಂದೂವರೆ ಗಂಟೆ ಮಾತನಾಡಿದರು. ಬಿಜೆಪಿ ಜತೆ ಕೈ ಜೋಡಿಸಿ ನಿಮಗೆ ಯಾವುದೇ ಸಮಸ್ಯೆಯಿಲ್ಲದೆ ಸಹಕರಿಸುತ್ತೇವೆ. ನಾಲ್ಕೂ ವರ್ಷ ನೀವೇ ಮುಖ್ಯಮಂತ್ರಿ ಆಗಿರಿ ಎಂದು ಬಹಿರಂಗವಾಗಿ ಆಫರ್‌ ನೀಡಿದ್ದರು. ಆದರೆ, ಆಗ ಕಾಂಗ್ರೆಸ್‌ಗೆ ಮಾತು ಕೊಟ್ಟಿದ್ದರಿಂದ ಬಿಜೆಪಿ ಜತೆ ಹೋಗಲಿಲ್ಲ. ಬಳಿಕ ಬಿಜೆಪಿ ಬಿ-ಟೀಂ ಎಂದು ಹೇಳಿ ನೀವೇ ನಮ್ಮನ್ನು ಬಿಜೆಪಿ ಕಡೆಗೆ ನೂಕುತ್ತಿದ್ದಿರಿ. ಸಮಯ ಬಂದಾಗ ಏನೇನು ಮಾಡಬೇಕೋ ಬಹಿರಂಗವಾಗಿ ಮಾಡುತ್ತೇವೆ’ ಎಂದು ಸೂಚ್ಯವಾಗಿ ಹೇಳಿದರು.

ಫ್ರೀ ಕರೆಂಟ್‌ ಅಂತಾ ಫೋಟೋ ಹಾಕಿಸಿಕೊಂಡಿದ್ದೀರಿ, ದರ ಏರಿಕೆ ಮಾಡಿದ್ದಕ್ಕೂ ಹಾಕಿಕೊಳ್ಳಿ ಎಂದ ಕುಮಾರಸ್ವಾಮಿ!

ಇದಕ್ಕೆ ಕಾಂಗ್ರೆಸ್‌ ಸದಸ್ಯರು ‘ಕೋಮುವಾದಿ ಪಕ್ಷದ ಜತೆ ಹೇಗೆ ಹೋಗುತ್ತೀರಿ ನಿಮ್ಮದು ಜ್ಯಾತ್ಯಾತೀತ ಪಕ್ಷವಲ್ಲವೇ?’ ಎಂದು ಪ್ರಶ್ನಿಸಿದಾಗ, ‘ಚುನಾವಣೆಗಳು ಹೇಗೆ ನಡೆಯುತ್ತಿವೆ ಎಂಬುದನ್ನೂ ನೋಡುತ್ತಿದ್ದೇವೆ. ರಾಜಕೀಯ ನಡೆಯುತ್ತಿರುವುದೇ ಜಾತಿ ಆಧಾರದ ಮೇಲೆ. ಇನ್ನು ಜ್ಯಾತ್ಯಾತೀತೆ ಎಂಬುದು ಇಲ್ಲ. ರಾಜಕೀಯದಲ್ಲಿ ನೈತಿಕತೆ ಅಧಃಪತನಕ್ಕೆ ಹೋಗಿದೆ’ ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವ ನೈತಿಕತೆಯೂ ಯಾರಿಗೂ ಇಲ್ಲ. ಯುಪಿಎ ಸರ್ಕಾರ ನ್ಯೂಕ್ಲಿಯರ್‌ ಡೀಲ್‌ಗಾಗಿ ಹೇಗೆ ಕುದುರೆ ವ್ಯಾಪಾರ ಮಾಡಿತು ಎಂಬುದು ನೋಡಿದ್ದೇವೆ ಎಂದರು.

click me!