Uttara Kannada: ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ: ಎಚ್.ಡಿ.‌ಕುಮಾರಸ್ವಾಮಿ

By Govindaraj S  |  First Published Feb 8, 2023, 10:36 PM IST

ರಾಜ್ಯದ ವಿವಿಧೆಡೆ ಪಂಚರತ್ನ ರಥಯಾತ್ರೆಯೊಂದಿಗೆ ಪ್ರವಾಸ ಕೈಗೊಂಡ ಮಾಜಿ ಸಿಎಂ ಎಚ್.ಡಿ.‌ಕುಮಾರಸ್ವಾಮಿ 62ನೇ ದಿನದ ಯಾತ್ರೆಯನ್ನು ಇಂದು ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಪೂರೈಸಿದ್ದಾರೆ.


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್, ಕಾರವಾರ

ಉತ್ತರ ಕನ್ನಡ (ಫೆ.08): ರಾಜ್ಯದ ವಿವಿಧೆಡೆ ಪಂಚರತ್ನ ರಥಯಾತ್ರೆಯೊಂದಿಗೆ ಪ್ರವಾಸ ಕೈಗೊಂಡ ಮಾಜಿ ಸಿಎಂ ಎಚ್.ಡಿ.‌ಕುಮಾರಸ್ವಾಮಿ 62ನೇ ದಿನದ ಯಾತ್ರೆಯನ್ನು ಇಂದು ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಪೂರೈಸಿದ್ದಾರೆ. ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರಕ್ಕೆ ಟೆಂಪಲ್ ರನ್ ನಡೆಸಿದ ಎಚ್‌ಡಿಕೆ, ತಮ್ಮ ಬ್ರಾಹ್ಮಣ ವಿರೋಧಿ ಹೇಳಿಕೆಗೆ ಅರ್ಚಕರೊಬ್ಬರಿಂದ ಕ್ಷೇತ್ರದಲ್ಲೇ ವಿರೋಧ ಎದುರಿಸಿದ ಘಟನೆಯೂ ನಡೆಯಿತು. ಬಳಿಕ ಮಾಧ್ಯಮದ‌‌ ಮುಂದೆ ಸ್ಪಷ್ಠೀಕರಣ ನೀಡಿದ ಎಚ್‌ಡಿಕೆ ಬಿಜೆಪಿ ನಾಯಕರ ಮೇಲೆ ಭರ್ಜರಿ ವಾಕ್ ಪ್ರಹಾರ ನಡೆಸಿದ್ದಾರೆ. ಮಾಜಿ ಸಿಎಂ ಪಂಚರತ್ನ ರಥಯಾತ್ರೆಯ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ. 

Tap to resize

Latest Videos

ಹೌದು! ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಭರ್ಜರಿ ಪಂಚರತ್ನ ರಥಯಾತ್ರೆ ನಡೆಸಿದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಉತ್ತಮ ಸ್ಪಂದನೆ ದೊರಕಿದೆ. ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರಕ್ಕೆ ಟೆಂಪಲ್ ರನ್ ನಡೆಸುವ ಮೂಲಕ ಜಿಲ್ಲೆಯಲ್ಲಿ ಯಾತ್ರೆಯನ್ನು ಪ್ರಾರಂಭಿಸಿದ ಎಚ್‌ಡಿಕೆ, ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಶ್ರೀ ಮಹಾಬಲೇಶ್ವರ‌ ಕ್ಷೇತ್ರಕ್ಕೆ ಭೇಟಿ ನೀಡಿದಂತೆ ಮಹಾಗಣಪತಿ‌ ದೇವಸ್ಥಾನದಲ್ಲಿ‌ ವಿಶೇಷ ಪೂಜೆ ಸಲ್ಲಿಸಿದ ಎಚ್‌ಡಿಕೆ, ಗಣಪತಿಗೆ‌ ಗರಿಕೆ, ಹೂವು, ಹಣ್ಣು ಹಂಪಲು ಅರ್ಪಿಸಿ ಮಂಗಳಾರತಿಯ ಮೂಲಕ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಿಎಂ ಬೊಮ್ಮಾಯಿ

ಈ ವೇಳೆ ಗಣಪತಿಯ ಬಲಭಾಗದಿಂದ‌ ಹೂವು ಬಿದ್ದಿರುವುದು ಎಚ್‌ಡಿಕೆ ಮನಸ್ಸಿಗೆ ಇನ್ನಷ್ಟು ಖುಷಿ ನೀಡಿತ್ತು. ಬಳಿಕ‌ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಆತ್ಮಲಿಂಗ ಸ್ಪರ್ಷಿಸಿ, ಮಹಾಬಲೇಶ್ವರನಿಗೆ‌ ರುದ್ರಾಭಿಷೇಕ, ನವಧಾನ್ಯ ಸಮರ್ಪಣೆ, ನಾಗಾಭರಣ ಪೂಜೆ ಸಲ್ಲಿಸಿ ತಾಮ್ರಗೌರಿ ಕ್ಷೇತದಲ್ಲೂ ದೇವಿಯ ಕೃಪೆಗೆ ಪಾತ್ರರಾದರು. ಈ ವೇಳೆ ಬ್ರಾಹ್ಮಣ ಸಮುದಾಯದ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರ ಸಂಬಂಧಿಸಿ ಅವರನ್ನು ಅಡ್ಡ ಹಾಕಿದ ಅರ್ಚಕ ನರಸಿಂಹ ಉಪಾಧ್ಯ, ನಿಮ್ಮ ಹೇಳಿಕೆಯಿಂದ ನಮಗೆ ಬೇಸರವಾಗಿದೆ. ನಿಮ್ಮ ಕುಟುಂಬದ ಮೇಲೆ ಅಭಿಮಾನವಿದೆ. ನಾವು ನೇರವಾಗಿ ಪ್ರಶ್ನೆ ಮಾಡುತ್ತೇವೆ. 

ಸ್ಪಷ್ಟೀಕರ‌ಣ ಗೋಕರ್ಣದಲ್ಲೇ ನೀಡುವಂತೆ ಅರ್ಚಕ ಒತ್ತಾಯಿಸಿದರು. ಇದಕ್ಕೆ ಉತ್ತರವಾಗಿ ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಠೀಕರಣ ನೀಡಿದರು. ಅಲ್ಲದೇ, ಅದೇ ಅರ್ಚಕರಿಗೆ ಕರೆ ಮಾಡಿ ತಾನು ನೀಡಿದ ಹೇಳಿಕೆ ಸಂಬಂಧಿಸಿ ನೈಜಾಂಶ ತಿಳಿಸಿದ್ದಲ್ಲದೇ, ಅರ್ಚಕರ ಕುಟುಂಬದ ಕುಶಲೋಪರಿ ವಿಚಾರಿಸಿದರು. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ರಥಯಾತ್ರೆ ಮಾಡಲಾಗುವುದು. ಜನರ ಉತ್ತೇಜನ ಪ್ರೋತ್ಸಾಹ ಯಾತ್ರೆಗೆ ಇದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ಕೆಲವರು ಪಕ್ಷ ಬಿಟ್ಟು ಹೋಗುತ್ತಾರೆ.

ಅದು ಚುನಾವಣಾ ಸಂದರ್ಭದಲ್ಲಿ ಕಾಮನ್. ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡರಿಂದ ಮೂರು ಸ್ಥಾನ ಗೆಲ್ಲಲಿದೆ. ನಾವು ಬ್ರಾಹ್ಮಣ ವಿರೋಧಿಯಲ್ಲ. ರಾಮಕೃಷ್ಣ ಹೆಗಡೆ ಅವರನ್ನ ಸಿಎಂ ಮಾಡಿದ್ದ ದೇವೆಗೌಡರು ನಳೀನ್ ಕುಮಾರ್ ಕಟೀಲ್‌ಗೆ ರಾಜಕೀಯ ಎಲ್ಲಿ ಗೊತ್ತಿದೆ..? ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದು ಜನರು ನಿರ್ಧರಿಸುತ್ತಾರೆ. ಬಿಜೆಪಿ ನಾಯಕರು ನಿರ್ಧರಿಸುವುದಲ್ಲ. ಹಿಂದೂ ಧರ್ಮ ರಕ್ಷಣೆ ನಾವು ಮಾಡುತ್ತೇವೆ. ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರ ಬಂದವರು ಏನು ಮಾಡಿದ್ದಾರೆ ಎನ್ನುವುದು ತಿಳಿದಿದೆ. 

ಬ್ರಾಹ್ಮಣ ಸಮುದಾಯಕ್ಕೆ ನಾನು ಸಿಎಂ ಆದಾಗ ಬೆಂಗಳೂರಿನಲ್ಲಿ ಸಮುದಾಯ ಭವನಕ್ಕೆ ಜಾಗ ಕೊಟ್ಟೆ. ಬ್ರಾಹ್ಮಣ ಪ್ರಾಧಿಕಾರ ರಚನೆ ಮಾಡಿದೆ. ಬಿಜೆಪಿ ಏನು ಮಾಡಿದೆ ಎಂದು ಬ್ರಾಹ್ಮಣ ಸಮುದಾಯಕ್ಕೆ ಹೇಳಿ. ನಮಗೆ ಸಾವರ್ಕರ್ ಸಂಸ್ಕೃತಿ‌‌ ಬೇಡ. ಸರ್ವೆ ಜನ ಸುಖಿನೋಭವ ಅನ್ನುವ ಬ್ರಾಹ್ಮಣರು ನಮಗೆ ಬೇಕು ಎಂದು ಹೇಳಿದರು. ಗೋಕರ್ಣದಿಂದ ಪ್ರಚಾರ ಪ್ರಾರಂಭಿಸಿದ ಮಾಜಿ ಸಿಎಂ, ಗಂಗಾವಳಿ, ಬರ್ಗಿ, ಮಿರ್ಜಾನ, ದೀವಗಿ, ಕಾಗಾಲ, ಅಘನಾಶಿನಿ ಮುಂತಾದೆಡೆ ವಾಹನದ ಮೇಲೆ‌ ನಿಂತು ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿಸಿ ಸೂರಜ್‌ ನಾಯ್ಕ್ ಪರ ಬಹಿರಂಗ ಪ್ರಚಾರ ನಡೆಸಿದರು. ಎಚ್‌ಡಿಕೆಗೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದು ಸೂರಜ್ ನಾಯ್ಕ್ ಸೋನಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಗಣಪಯ್ಯ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಸಾಥ್ ನೀಡಿದರು. 

ಬಹಿರಂಗ ಪ್ರಚಾರದ ನಡುವೆ ಜಗದೀಶ್ ಶೆಟ್ಟರ್, ಎಚ್‌ಡಿಕೆ ಬ್ರಾಹ್ಮಣ ವಿರೋಧಿ ಹೇಳಿಕೆ ಸರಿಯಲ್ಲ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಯಿಸಿದ ಕುಮಾರಸ್ವಾಮಿ, ನಾನು ಯಾವ ಸಮುದಾಯದ ಬಗ್ಗೆ ಮಾತನಾಡಿದ್ದೇನೆ? ಬ್ರಾಹ್ಮಣ ಸಮುದಾಯದ ಬಗ್ಗೆ ಮಾತನಾಡಿಲ್ಲ. ನಾನು ಸಮುದಾಯದ ಬಗ್ಗೆ ಮಾತನಾಡಿಲ್ಲ, ವ್ಯಕ್ತಿಗಳ ಬಗ್ಗೆ ಮಾತನಾಡಿದ್ದೆ, ತಪ್ಪು ತಿಳ್ಕೋಬೇಡಿ.‌ರಾವಣನನ್ನು ರಾಕ್ಷಸ ಅಂತಾ ಕರೀತೇವೆ... ಆತ ಯಾರಿಗೆ ಹುಟ್ಟಿದ್ದು..? ಬ್ರಾಹ್ಮಣನಿಗೆ ಹುಟ್ಟಿದವ. ಶಿವನಿಗೆ ರುದ್ರಾಭಿಷೇಕ‌ ಮಾಡಬೇಕೆಂದಿರುವುದನ್ನು ಪ್ರಾರಂಭಿಸಿದ್ದೇ ರಾವಣೇಶ್ವರ. ರಾವಣನನ್ನು ರಾಕ್ಷಸ ಎಂದು ಗುರುತಿಸುತ್ತೇವೆ ಹೊರತು ಬ್ರಾಹ್ಮಣ ಎಂದಲ್ಲ. 

ರಾಮನನ್ನು ರಾಕ್ಷಸ ಅಂತಾ ಕರಿಯೋಕಾಗುತ್ತಾ...?ಶೃಂಗೇರಿಯ ಚಂದ್ರಮೌಳೀಶ್ವರ ದೇವಸ್ಥಾನ ಧ್ವಂಸ ಮಾಡಿದ ಡಿಎನ್‌ಎಗಳ ಬಗ್ಗೆ ಮಾತನಾಡಿದ್ದು. ವಿದ್ಯಾರಣ್ಯರು ಕಟ್ಟಿದ ಈ ದೇವಸ್ಥಾನದ ಮೇಲೆ ದಾಳಿ ಮಾಡಿದವರು ಯಾರು..? ಶಿವಾಜಿ ಹತ್ಯೆ ಮಾಡಿದವರು ಯಾರು..? ಈ ವರ್ಗದ ಜನರನ್ನು ನೀವು ಬ್ರಾಹ್ಮಣರು ಅಂತಾ ಕರಿತೀರಾ..? ಕರಿಯೋಕಾಗುತ್ತಾ..? ಬ್ರಾಹ್ಮಣ ಸಮಾಜದ ಬಗ್ಗೆ ನಾನು ಇಂದಿಗೂ ಗೌರವ ಇಟ್ಟುಕೊಂಡಿದ್ದೇನೆ. ಗೋಕರ್ಣದ ಅರ್ಚರಿಗೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅರ್ಚಕರು ಕರೆ ಮಾಡಿದಾಗ ನಾವು ನಿಮ್ಮ ಹಾಗೂ ನಿಮ್ಮ ಕುಟುಂಬದ ಅಭಿಮಾನಿ ಅಂದಿದ್ರು.‌ 

ಆದರೆ, ನಿಮ್ಮ ಹೇಳಿಕೆಗೆ ಭಾರೀ ಚರ್ಚೆ ನಡೆಯುತ್ತಿದೆಯಲ್ಲಾ ಅಂದಿದ್ರು. ನಾನೆಂದಿಗೂ ಬ್ರಾಹ್ಮಣ ಸಮಾಜದ ಬಗ್ಗೆ ಎಲ್ಲೂ ಟೀಕೆ ಮಾಡಿಲ್ಲ, ಈ ಸಮಾಜದ ಬಗ್ಗೆ ಗೌರವ ಇಟ್ಟಿದ್ದೇನೆ ಎಂದು ಹೇಳಿದ್ದೆ. ಇಲ್ಲಿ ವ್ಯಕ್ತಿಯ ಬಗ್ಗೆ ಚರ್ಚೆಯಾಗಿರೋದು. ಪಾಪ ಜಗದೀಶ್ ಶೆಟ್ಟರು ಯಾವ ಅರ್ಥದಲ್ಲಿ ಕ್ಲಾರಿಫಿಕೇಶನ್ ನೀಡಲು ಹೊರಟ್ರೋ ಗೊತ್ತಿಲ್ಲ. ನನಗೆ ಜಗದೀಶ್ ಶೆಟ್ಟರ್ ಬಗ್ಗೆ ಗೌರವವಿದೆ. ಆದ್ರೂ ಅವರಲ್ಲೊಂದು ಕೇಳೋಕೆ ಬಯಸ್ತೇನೆ.‌ ಹುಬ್ಬಳ್ಳಿಗೆ ಪ್ರಧಾನಿ ಬಂದಿದ್ದಾಗ ಮಾಜಿ ಮುಖ್ಯಮಂತ್ರಿಯಾಗಿದ್ದ ನಿಮ್ಮನ್ನು ಯಾಕೆ ವೇದಿಕೆಗೆ ಕರೆಯಿಸಿಲ್ಲ..? ಈ‌ ರೀತಿಯ ತಾರತಮ್ಯ ಹೋಗಬೇಕೆನ್ನುವುದು ನನ್ನ ಉದ್ದೇಶ. 

ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಸುಧಾಕರ್

ಇನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ವಿಚಾರ ಸಂಬಂಧಿಸಿ ಮಾಜಿ‌ ಸಿಎಂ ಎಚ್.ಡಿ.‌ಕುಮಾರಸ್ವಾಮಿ,  ಅವರು ಏನು ಮಾಡೋಕೆ ಬರುತ್ತಿದ್ದಾರೆ...? ನಾವು ಕಟ್ಟುವ ತೆರಿಗೆ ಹಣ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಹೋಗುತ್ತಿದೆ.‌ದಕ್ಷಿಣ ಭಾರತದ ದುಡ್ಡನ್ನೆಲ್ಲಾ ಅಭಿವೃದ್ಧಿ ಎಂದು ತೆಗೆದುಕೊಂಡು ಹೋಗಿ ನಮಗೆ ಮೋಸ ಮಾಡ್ತಿದ್ದಾರೆ. ಇವತ್ತು ಯಾವ ಮುಖ ಹೊತ್ತುಕೊಂಡು ಏನು ಚರ್ಚೆ ಮಾಡೋಕೆ ಬರ್ತಿದ್ದಾರೆ..? 2017ರಲ್ಲಿ ಏನು ಹಂಚಿಕೆಯಾಯ್ತು,  2022ರಲ್ಲಿ ಏನು ಹಂಚಿಕೆಯಾಯ್ತು ಎಂದು ಮಾಧ್ಯಮದಲ್ಲೇ ಬಂದಿದೆ. ಬಿಜೆಪಿ ರಾಜ್ಯ ನಾಯಕರೇ ಮೋದಿ, ಅಮಿತ್ ಶಾ ಬಂದು ಸುದರ್ಶನ ಚಕ್ರ ತರ್ತಾರೆ, ಇನ್ನೇನೋ ತರ್ತಾರೆ ಅಂತಾರಲ್ಲಾ..ನೀವು 3 ವರ್ಷ ಮಾಡಿದ್ದೇನು..? 

ಯಡಿಯೂರಪ್ಪ ಮುಖ್ಯಮಂತ್ರಿಯಾದ್ರೂ ಅವರನ್ನು ಯಾವ ರೀತಿ ನಡೆಸಿಕೊಂಡ್ರು..? ಎಂದು ಎಚ್‌ಡಿಕೆ ಪ್ರಶ್ನೆಗಳನ್ನು ಮುಂದಿರಿಸಿದರು. ಇಡೀ ದಿನ ಪಂಚರತ್ನ ರಥಯಾತ್ರೆಯ ಮೂಲಕ ಪ್ರಚಾರ ಯಾತ್ರೆ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಸಂಜೆ ತಲಗೇರಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದರ ಜತೆಗೆ ಗ್ರಾಮಗಳ ಜನರೊಂದಿಗೆ ಮಾತುಕತೆ ನಡೆಸಿ ಅಹವಾಲು ಕೂಡಾ ಸ್ವೀಕರಿಸಿದರು. ನಾಳೆ ಮತ್ತೆ ಭಟ್ಕಳ ವ್ಯಾಪ್ತಿಯಲ್ಲಿ ಭಟ್ಕಳ ಜೆಡಿಎಸ್ ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿ ಪರ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಅಭ್ಯರ್ಥಿಗಳ ಪರವಾಗಿ ಕುಮಾರಸ್ವಾಮಿ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದು, ಇದು ಎಷ್ಟರಮಟ್ಟಿಗೆ ಜೆಡಿಎಸ್‌ಗೆ ಫಲಪ್ರದವಾಗಲಿದೆ ಎಂದು ಕಾದು ನೋಡಬೇಕಷ್ಟೇ.

click me!