
ಬೆಂಗಳೂರು (ಅ.16): ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ಮನೆಯ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ಜಟಾಪಟಿ ಮುಂದುವರಿದೆ.
ಕುಮಾರಸ್ವಾಮಿ ಅವರೇನು ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇ ಎಂಬುದಾಗಿ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಎಚ್.ಡಿ. ಕುಮಾರಸ್ವಾಮಿ, ''ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ..'', ''ಕಳ್ಳನ ಮನಸ್ಸು ಹುಳ್ಳುಳ್ಳಗೆ..'' ಎನ್ನುವ ಗಾದೆ ಮಾತುಗಳು ಯಾರಿಗೆ ಅನ್ವಯ ಆಗುತ್ತವೋ; ಇಲ್ಲವೋ ಗೊತ್ತಿಲ್ಲ. ಆದರೆ, ಡಿಕೆ ಸಹೋದರರಿಗೆ ಕರಾರುವಾಕ್ಕಾಗಿ ಅನ್ವಯಿಸುತ್ತವೆ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಆ ಕಪ್ಪು ಹಣ ಯಾರದ್ದು? ಆ ಗುತ್ತಿಗೆದಾರ ಯಾರ ಪರಮಾಪ್ತ ಎನ್ನುವುದು ಜಗಜ್ಜಾಹೀರು. ಹೀಗಿದ್ದ ಮೇಲೆ ಸತ್ಯ ಮುಚ್ಚಿಟ್ಟರೆ ''ಶಿವ'' ಮೆಚ್ಟುತ್ತಾನೆಯೇ ಎಂದು ಟಾಂಗ್ ನೀಡಿದ್ದಾರೆ.
BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಿವಕುಮಾರ್ ಅವರದು ಹತಾಶೆಯ ಹೇಳಿಕೆಯಷ್ಟೆ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಇಡುಗಂಟು ಡಿಕೆಶಿ ಅವರದ್ದು ಎಂದು ನಾನು ಹೇಳಿದ್ದೇನೆಯೇ? ನಗದು ಅಭಿವೃದ್ಧಿ ಇಲಾಖೆ ಎಂದರೆ ಅವರದ್ದೇನಾ? ಅವರು ತಿಹಾರ್ ಜೈಲಿನ ವಿಷಯವನ್ನೂ ಪ್ರಸ್ತಾಪ ಮಾಡಿದ್ದಾರೆ, ಸರಿ. ಆದರೆ, ತಿಹಾರಿಗೆ ಹೋಗುವ ಭಯ ಅಥವಾ ಗ್ಯಾರಂಟಿ ಸ್ವತಃ ಅವರಿಗೇ ಇದೆ ಎನ್ನುವುದು ನನ್ನ ಸ್ಪಷ್ಟ ಅನುಮಾನ. ಇಲ್ಲದಿದ್ದರೆ ಅವರು ಇಷ್ಟು ತೀವ್ರವಾಗಿ ನನ್ನ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಅಂದಹಾಗೆ ನಾನು ಐಟಿ ಪ್ರತಿನಿಧಿಯೂ ಅಲ್ಲ, ಇಡಿ ಉದ್ಯೋಗಿಯೂ ಅಲ್ಲ. ಒಬ್ಬ ಹುಲು ಮಾನವನಷ್ಟೇ. ಕೆಲವರ ಭ್ರಮೆಗಳಿಗೆ ನಾನೇನು ಮಾಡಲಿ ಎಂದ ಅವರು, 40% ಕಮೀಷನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇವರಲ್ಲವೇ? ಆದರೆ, ಇವರ ಪರ್ಸಂಟೇಜ್ ಬಗ್ಗೆಯೇ ಹೇಳಿದರೆ ಕೋಪ ಬರುತ್ತದೆ ಎಂದು ಕಾಲೆಳೆದಿದ್ದಾರೆ.
ಚೀನಾದ ಫೋಟೋಗಳನ್ನ ಶೇರ್ ಮಾಡಿದ Dr Bro: ನಕಲಿಗಳ ಮಧ್ಯೆ ನೀವು ಕನ್ನಡದ ಅಸಲಿ ಚಿನ್ನ ಎಂದ ಫ್ಯಾನ್ಸ್!
ಅಲ್ಲದೆ, ಮಾತೆತ್ತಿದರೆ ತನಿಖೆ/ಆಯೋಗ ಎಂದು ಮಂತ್ರ ಜಪಿಸುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಈಗ ಗುತ್ತಿಗೆದಾರರ ಮನೆಗಳಲ್ಲಿ ಕಂತೆಕಂತೆಯಾಗಿ ಸಿಕ್ಕಿಬಿದ್ದಿರುವ ಕನಕ ಮಹಾಲಕ್ಷ್ಮೀ ಬಗ್ಗೆ ಸತ್ಯ ಹೇಳಬೇಕಲ್ಲವೇ ಎಂದು ಕಟುವಾಗಿ ಪ್ರಶ್ನಿಸಿದ ಕುಮಾರಸ್ವಾಮಿ, ಎಷ್ಟೇ ಆಗಲಿ, ಒಬ್ಬರು ಸಿದ್ದಪುರುಷರು! ಇನ್ನೊಬ್ಬರು ಸತ್ಯಪುರುಷರು!! ಸತ್ಯಕ್ಕೆ ಸಮಾಧಿ ಕಟ್ಟುವ ಬದಲು ತನಿಖೆ ಮಾಡಿಸಲಿ. ಅದು ಯಾವ ತನಿಖೆ ಎಂದು ಅವರೇ ಬಾಯಿ ಬಿಟ್ಟು ಹೇಳಲಿ ಎಂದು ಸವಾಲು ಎಸದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.