‘ಅಕ್ಕಿ ಗ್ಯಾರಂಟಿ ಕುರಿತು ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ನೆಪ ಹೇಳುತ್ತಿದ್ದು, ತಾನು ಎಸಗಿದ ಸ್ವಯಂಕೃತ ತಪ್ಪಿಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ಯಮಾರಿಸುತ್ತಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜೂ.22): ‘ಅಕ್ಕಿ ಗ್ಯಾರಂಟಿ ಕುರಿತು ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ನೆಪ ಹೇಳುತ್ತಿದ್ದು, ತಾನು ಎಸಗಿದ ಸ್ವಯಂಕೃತ ತಪ್ಪಿಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ಯಮಾರಿಸುತ್ತಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಕ್ಕಿ ಗ್ಯಾರಂಟಿ ಬಗ್ಗೆ ಕಾಂಗ್ರೆಸ್ಸಿಗರೇನು ಕೇಂದ್ರಕ್ಕೆ ಅರ್ಜಿ ಹಾಕಿದ್ರಾ? ಕೇಂದ್ರ ಸರ್ಕಾರ ಯಾಕೆ ಅಕ್ಕಿ ನೀಡಬೇಕು’ ಎಂದೂ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೋ ಚುನಾವಣಾ ತಂತ್ರಗಾರರ ಮಾತು ಕೇಳಿಕೊಂಡು ಗ್ಯಾರಂಟಿ ಘೋಷಣೆ ಮಾಡಿದಾಗಲೇ ಯೋಜನೆ ಜಾರಿಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.
ಉಡಾಫೆ ಬೇಡ: ಎರಡು ರಾಷ್ಟ್ರೀಯ ಪಕ್ಷಗಳ ಇಂದಿನ ನಡವಳಿಕೆ ನೋಡಿದರೆ ತೀವ್ರ ಬೇಸರವಾಗುತ್ತದೆ. ರಾಜ್ಯದ ಜನತೆ ಅವರನ್ನು ನಂಬಿ ಮತ ನೀಡಿದ್ದಾರೆ. ಜನತೆ ಎರಡು ಪಕ್ಷಗಳ ನಾಟಕ ನೋಡಬೇಕಾಗಿದೆ. ಮುಖ್ಯಮಂತ್ರಿಗಳು, ಭಾರತ ಆಹಾರ ನಿಗಮಕ್ಕೆ ಪತ್ರ ಬರೆದಿದ್ದೆ ಎನ್ನುತ್ತಿದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿದ್ದು ಇಂತಹ ಉಡಾಫೆ ಉತ್ತರ ಕೊಟ್ಟರೆ ಹೇಗೆ? ಕೇಂದ್ರದಿಂದ ಅಕ್ಕಿ ಬೇಕು ಎಂದರೆ ಕೇಂದ್ರದ ಸಂಬಂಧಪಟ್ಟವರ ಸಚಿವರ ಜತೆ ಮಾತನಾಡಬೇಕಿತ್ತು. ಅದನ್ನು ಬಿಟ್ಟು ಉಡಾಫೆ ಹೇಳಿಕೆ ಕೊಡುತ್ತಿದ್ದಾರೆ ಹರಿಹಾಯ್ದರು.
ಪ್ರತಾಪ್ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್ ರಾಜಕಾರಣಿಗಳು: ಎನ್.ಚಲುವರಾಯಸ್ವಾಮಿ
ನಾನು ಕೂಡ ಚುನಾವಣೆ ವೇಳೆ ಪಂಚರತ್ನ ಯೋಜನೆಗಳನ್ನು ಘೋಷಿಸಿದ್ದೆ. ಅವುಗಳನ್ನು ಹೇಗೆ ಜಾರಿ ಮಾಡಬೇಕು, ಅವುಗಳಿಗೆ ಹೇಗೆ ಹಣ ಹೊಂದಿಸಬೇಕು ಎಂಬುದಕ್ಕೆ ಸ್ಪಷ್ಟವಾದ ರೂಪುರೇಷೆ ಸಿದ್ಧಪಡಿಸಿ ಇಟ್ಟುಕೊಂಡಿದ್ದೆ. ಆದರೆ, ಜನರು ನನ್ನನ್ನು ನಂಬಲಿಲ್ಲ. ಪಾಪ ಕಾಂಗ್ರೆಸ್‌ನವರ ಐದು ಗ್ಯಾರಂಟಿಗಳನ್ನು ನಂಬಿದರು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಜಾರಕಿಹೊಳಿಗೆ ಬಾಯಿ ಚಪಲ: ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದ್ದ ಪರಿಣಾಮ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲಾಗುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರ್ರೀ ಸತೀಶ್ ಜಾರಕಿಹೊಳಿ? ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ. ಅವರು ಯಾಕೆ ಹ್ಯಾಕ್ ಮಾಡುತ್ತಾರೆ. ನಿಮ್ಮ ಸರ್ವರ್ ಬಲಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಅಧಿವೇಶನದಲ್ಲಿ ಏನೇನು ಹೇಳುತ್ತಾರೋ ನೋಡೋಣ. ಪ್ರಣಾಳಿಕೆಯಲ್ಲಿ ಸಹ ಅದೆಷ್ಟುಭರವಸೆಗಳನ್ನು ನೀಡಿದ್ದಾರೆ. ಎಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತದೆಯೋ ನೋಡೋಣ ಎಂದರು.
ಹೈನೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ ಸಲಹೆ
ಕುರ್ಚಿಗಾಗಿ ಕುಸ್ತಿ?: ಮುಖ್ಯಮಂತ್ರಿ ಹುದ್ದೆ ಹಂಚಿಕೆ ಕಾಂಗ್ರೆಸ್ ಸೇರಿದ ವಿಚಾರ. ಐದು ವರ್ಷ ಅವರೇ ಇರುತ್ತಾರೋ? ಅಥವಾ ಇನ್ನಾರದರೂ ಬರುತ್ತಾರೋ ನನಗೆ ಗೊತ್ತಿಲ್ಲ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಾಲದಲ್ಲಿ ವಿಧಾನಸೌಧದಲ್ಲಿ ಚೇರ್, ಮೇಜು ಹಿಡಿದುಕೊಂಡು ಕುಸ್ತಿ ಮಾಡಿದ್ದರು. ಈಗಲೂ ಆ ರೀತಿ ಆಗುತ್ತದೋ ಏನೋ ನನಗೆ ಗೊತ್ತಿಲ್ಲ. ಎಲ್ಲವೂ ಮುಂದೆ ಗೊತ್ತಾಗಲಿದೆ ಎಂದು ಹೇಳಿದರು.