ಮಂಡ್ಯದಲ್ಲಿ ಬೆಂಕಿ ಹಚ್ಚಿದ್ದೇ ಸರ್ಕಾರ: ಕುಮಾರಸ್ವಾಮಿ ವಾಗ್ದಾಳಿ

By Kannadaprabha NewsFirst Published Jan 31, 2024, 4:25 AM IST
Highlights

ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ, ಸರ್ಕಾರ ಮಾಡಿರುವ ತಪ್ಪುಗಳನ್ನು ಜನರಿಗೆ ತಿಳಿಸಲು ಹೋಗಿದ್ದೆ. ಆ ಗ್ರಾಮದ ಸರಕಾರಿ ಕಾರ್ಯಕ್ರಮಕ್ಕೆ ಸ್ಥಳಿಯ ಶಾಸಕರನ್ನು ಆಹ್ವಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ಇದೆನ್ನೆಲ್ಲ ಶುರು ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು(ಜ.31):  ಮಂಡ್ಯದ ಕೆರಗೋಡು ಘಟನೆಗೆ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ. ಸರ್ಕಾರದ ಹುಳುಕು ಮುಚ್ಚಿಟ್ಟಿಕೊಳ್ಳಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ, ಸರ್ಕಾರ ಮಾಡಿರುವ ತಪ್ಪುಗಳನ್ನು ಜನರಿಗೆ ತಿಳಿಸಲು ಹೋಗಿದ್ದೆ. ಆ ಗ್ರಾಮದ ಸರಕಾರಿ ಕಾರ್ಯಕ್ರಮಕ್ಕೆ ಸ್ಥಳಿಯ ಶಾಸಕರನ್ನು ಆಹ್ವಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ಇದೆನ್ನೆಲ್ಲ ಶುರು ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.

ಭೇಟಿ ವೇಳೆ ನಾನು ಕೆರಗೋಡು ಜನರ ಭಾವನೆಗಳ ಕುರಿತು ಮಾತನಾಡಿದ್ದೇನೆ. ಅವರ ಪಕ್ಷದ ಸ್ಥಳೀಯ ಶಾಸಕರಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಹೇಳಿಕೊಡಲಿ. ಕಾಂಗ್ರೆಸ್‌ ನಾಯಕರ ತೀರ್ಮಾನಗಳಿಂದ ಮಂಡ್ಯ ಈ ರೀತಿಯಾಗಿದೆ. ಅಲ್ಲಿ ಲಾಠಿಚಾರ್ಜ್‌ ಮಾಡುವ ಅಗತ್ಯತೆ ಇರಲಿಲ್ಲ. ಸರ್ಕಾರದ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಟಾಂಗ್‌ ಕೊಟ್ಟರು.

Latest Videos

ಎಚ್‌ಡಿಕೆ ಬಿಜೆಪಿ ವಕ್ತಾರರಾಗಿದ್ದು, ಸುಳ್ಳು ಹೇಳೋದು ಬಿಟ್ಟರೆ ಇನ್ನೇನು ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ ಲೇವಡಿ

ಘಟನೆ ಕುರಿತು ತನಿಖೆ ನಡೆಸಲಿ:

ಕೆರಗೋಡು ಗ್ರಾಮದಲ್ಲಿ ಏನು ನಡೆದಿದೆ ಎಂಬ ಬಗ್ಗೆ ವಾಸ್ತವಾಂಶದ ಕುರಿತು ತಿಳಿಸಿದ್ದೇನೆ. ತನಿಖೆ ನಡೆಸುವ ಧೈರ್ಯ ಸರ್ಕಾರಕ್ಕೆ ಇದೆಯಾ? ಯಾವ ಕ್ರಮ ಕೈಗೊಳ್ಳುತ್ತಾರೋ ತೆಗೆದುಕೊಳ್ಳಲಿ. ಘಟನೆ ಕುರಿತು ನ್ಯಾಯಸಮ್ಮತ ತನಿಖೆ ನಡೆಸಿದರೆ ಸತ್ಯ ಹೊರಬೀಳಲಿದೆ ಎಂದು ಆಗ್ರಹಿಸಿದರು.

ನಾನು ಕೇಸರಿ ಅಷ್ಟೇ ಅಲ್ಲ ನೀಲಿ, ಹಸಿರು ಶಾಲೂ ಹಾಕಿದ್ದೇನೆ

ಪಕ್ಷದ ನಾಯಕರ, ಕಾರ್ಯಕರ್ತರ ದುಡಿಮೆಯನ್ನು ನಾನು ಕೇಸರಿ ಶಾಲು ಹಾಕಿಕೊಂಡು ಬಿಜೆಪಿಗೆ ಒಪ್ಪಿಸಿಬಿಟ್ಟಿದ್ದೇನೆ ಎಂಬುದಾಗಿ ಸಚಿವರು ಟೀಕೆ ಮಾಡಿದ್ದಾರೆ. ಆದರೆ, ಕೇಸರಿ ಶಾಲು ಅಷ್ಟೇ ಅಲ್ಲ, ದಲಿತ ಸಮಾವೇಶಗಳಿಗೆ ಹೋದಾಗ ನೀಲಿ ಶಾಲನ್ನು ಹಾಕಿಕೊಂಡಿದ್ದೇನೆ. ರೈತರ ಸಮಾವೇಶಕ್ಕೆ ಹೋದಾಗ ಹಸಿರು ಶಾಲು ಹಾಕಿದ್ದೇನೆ. ನನ್ನ ಉಡುಪು ಬಿಳಿ, ನಮ್ಮ ಪಕ್ಷದ ಬಣ್ಣ ಹಸಿರು. ಆದರೆ, ಕೇಸರಿ ಬಗ್ಗೆ ಮಾತ್ರ ಕಾಂಗ್ರೆಸ್ ನಾಯಕರಿಗೆ ಸಂಕುಚಿತ ಮನೋಭಾವ ಇದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. 

ಕಾಂಗ್ರೆಸ್ ನವರು ತಿರಂಗದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ತಿರಂಗದಲ್ಲಿ ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳಿವೆ. ಕೇಸರಿ ಇಲ್ಲದೆ ತಿರಂಗವನ್ನು ನಾವು ಊಹೆ ಮಾಡಿಕೊಳ್ಳಲು ಆಗುತ್ತದೆಯೇ? ಕಾಂಗ್ರೆಸ್ ಕೇಸರಿ ನೆಪದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಅಲ್ಕೋಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕರಾದ ಸುರೇಶ್ ಗೌಡ, ರಾಜಾ ವೆಂಕಟಪ್ಪ ನಾಯಕ ಇತರರು ಉಪಸ್ಥಿತರಿದ್ದರು.

click me!