
ಬೆಂಗಳೂರು(ಏ.06): ‘ಡಿಕೆಶಿ ನೋಟು..ಡಾಕ್ಟರ್‌ಗೆ ವೋಟು..ಇದೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಶುಕ್ರವಾರ ಬಿಜೆಪಿಯ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನಿವಾಸದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಮನ್ವಯ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸುವ ಸಂಬಂಧ ಡಾ.ಸಿ.ಎನ್.ಮಂಜುನಾಥ್ ಗೆಲ್ಲಿಸಿಕೊಂಡು ಬರಲು ಜನರು ಮನಸ್ಸು ಮಾಡಿದ್ದಾರೆ. ಚುನಾವಣೆಯಲ್ಲಿ ಅವರ ದುಡ್ಡಿನ ಮುಂದೆ ನಮ್ಮ ರಾಜಕೀಯ ಏನಿಲ್ಲ. ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು. ಇದೇ ನಮ್ಮ ರಣತಂತ್ರ ಎಂದು ಹೇಳಿದರು.
'ಅವನೊಬ್ಬ ರೌಡಿ' ಅಂತಾ ಜನರೇ ಹೇಳ್ತಾರೆ: ಡಿಕೆ ಸುರೇಶ್ ವಿರುದ್ಧ ಆರ್ ಆಶೋಕ್ ವಾಗ್ದಾಳಿ
ಹಣದಿಂದ ಕೊಂಡಕೊಂಡ ಬಳಿಕ ಮತ ಪರಿವರ್ತನೆಯಾಗಲಿದೆ ಎಂದು ಅವರು ಭಾವಿಸಿದ್ದಾರೆ. ದುಡ್ಡಿನ ಮದ ಇಳಿಸಲು ಡಾಕ್ಟರ್ ಅಂಕುಶ ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಡಾಕ್ಟರ್ ಅವರ ಸೇವೆಯೇ ನಮ್ಮ ಅಸ್ತ್ರವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೋಟು ಪಡೆದು, ಡಾಕ್ಟರ್‌ಗೆ ಮತ ನೀಡಿ ಎಂಬುದಾಗಿ ಜನರಲ್ಲಿ ಮನವಿ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಬಂಧ ಸಭೆ ನಡೆಸಲಾಗಿದೆ. ಯಾವುದೇ ತಂತ್ರಗಾರಿಕೆ ಇಲ್ಲ, ಚುನಾವಣೆ ಗೆಲ್ಲಬೇಕು ಅಷ್ಟೇ. ಡಾ.ಸಿ.ಎನ್.ಮಂಜುನಾಥ್ ಅವರು ಇಡೀ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸಂಚಲನ ಮಾಡಿದ್ದಾರೆ. ಮಂಜುನಾಥ್ ಅವರು ಜನರಿಗೆ ಹೆಚ್ಚು ಪರಿಚಿತರಾಗಿದ್ದು, ಅಂತಹವರು ಬೇಕು ಎಂದು ಜನರೇ ಕೇಳುತ್ತಿದ್ದಾರೆ ಎಂದರು.
ಅಶ್ವತ್ಥನಾರಾಯಣ ಮಾತನಾಡಿ, ಪ್ರತಿ ಮನೆ ಮನೆಗೆ ತೆರಳಿ ಪರಿಣಾಮಕಾರಿಯಾಗಿ ಪ್ರಚಾರ ಕೈಗೊಳ್ಳುವ ಕುರಿತು ಚರ್ಚಿಸಲಾಗಿದೆ. ಇದು ದೇಶದ ಚುನಾವಣೆಯಾಗಿದ್ದು, ಮೋದಿ ಚುನಾವಣೆ ಎಂಬುದಾಗಿ ಜನರಿಗೆ, ಸ್ಥಳೀಯ ಮುಖಂಡರು, ಕಾರ್ಯಕರ್ತರು ಮನವರಿಕೆ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮತ ನೀಡಿದರೆ ಪ್ರಯೋಜನವಿಲ್ಲ. ಡಾ.ಮಂಜುನಾಥ್ ಉತ್ತಮ ಅಭ್ಯರ್ಥಿ ಎಂಬುದನ್ನು ಜನರಿಗೆ ತಿಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಇಬ್ಬರೂ ಡಾಕ್ಟರ್ ಚಿಕಿತ್ಸೆ ನೀಡಲು ಸಿದ್ದರಾಗಿದ್ದೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಆರೋಗ್ಯ ಹೆಚ್ಚಿಸಿ ನೆಮ್ಮದಿ ಸುಖದಿಂದ ಆ ಭಾಗದ ಜನ ಇರಬೇಕು. ದ್ವೇಷದ ರಾಜಕಾರಣ ತೊಲಗಿಸಬೇಕು. ಹೀಗಾಗಿ ಹೃದಯವಂತ ಡಾಕ್ಟರ್ ಬಂದಿದ್ದಾರೆ. ರಾಮನಗರ ಜಿಲ್ಲಾ ಉಸ್ತುವಾರಿ ಆಗಿ ಕೆಲಸ ಮಾಡಿದ್ದಕ್ಕೆ ಈ ಬಾರಿ ಪಕ್ಷ ಕ್ಷೇತ್ರದ ಜವಾಬ್ದಾರಿ ನೀಡಿದೆ. ಪ್ರತಿಪಕ್ಷ ನಾಯಕ ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಯಾವುದೇ ಕ್ಷೇತ್ರದ ಜವಾಬ್ದಾರಿ ಇರುವುದಿಲ್ಲ. ಇಡೀ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರದ ಜವಾಬ್ದಾರಿ ಇರಲಿದೆ. ಎಲ್ಲಾ ಕಡೆಯೂ ಅವರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಅಭ್ಯರ್ಥಿ ಡಾ.ಮಂಜುನಾಥ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಮುನಿರತ್ನ, ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.