* ಪಕ್ಷಾಂತರ ಗುಸುಗುಸು ಬೆನ್ನಲ್ಲೇ ಹೊರಟ್ಟಿ ಭೇಟಿ ಮಾಡಿದ
* ಕೆಲವು ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ
* ಹೊರಟ್ಟಿ ಅವರನ್ನು ಬಿಜೆಪಿಗೆ ಕರೆತರಲು ಪಕ್ಷದಲ್ಲಿಯ ಒಂದು ವರ್ಗ ಪ್ರಯತ್ನ
ಬೆಂಗಳೂರು(ಮಾ.30): ಮುಂದಿನ ಜೂನ್ ತಿಂಗಳಲ್ಲಿ ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ನಡೆಯುವ ಚುನಾವಣೆ(Vidhan Parishat Election) ವೇಳೆ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಆಡಳಿತ ಪಕ್ಷ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಹೊರಟ್ಟಿ ಜತೆ ಮಹತ್ವದ ಮಾತುಕತೆ ನಡೆಸಿದರು. ಮಂಗಳವಾರ ಸಭಾಪತಿ ನಿವಾಸಕ್ಕೆ ಉಪಹಾರಕ್ಕಾಗಿ ತೆರಳಿದ ಕುಮಾರಸ್ವಾಮಿ ಅವರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು.
ಹೊರಟ್ಟಿ ಅವರನ್ನು ಬಿಜೆಪಿಗೆ(BJP) ಕರೆತರಲು ಪಕ್ಷದಲ್ಲಿಯ ಒಂದು ವರ್ಗ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದು ವರ್ಗ ವಿರೋಧ ವ್ಯಕ್ತಪಡಿಸುತ್ತಿದೆ. ಅವರಿಗೆ 75 ವರ್ಷವಾಗಿದ್ದು, ಪಕ್ಷದ ನಿಯಮದಂತೆ ಟಿಕೆಟ್ ನೀಡಲು ಅವಕಾಶ ಇಲ್ಲ. ಅವರ ವಿರುದ್ಧ ಕೆಲವೊಂದು ಆರೋಪಗಳಿವೆ. ಹೀಗಾಗಿ ಬೇಡ ಎಂಬ ದೂರು ಕೂಡ ಪಕ್ಷದ ವರಿಷ್ಠರಿಗೆ ರವಾನಿಸಲಾಗಿದೆ.
Karnataka Politics: ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ
ಬಿಜೆಪಿಯಲ್ಲಿ ಭಿನ್ನರಾಗ ಇದ್ದರೂ ಹೊರಟ್ಟಿ ಅವರ ಅಭಿಪ್ರಾಯ ಕೇಳಲು ಕುಮಾರಸ್ವಾಮಿ ತೆರಳಿದ್ದು, ಸಾಧಕ-ಬಾಧಕ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಹೊರಟ್ಟಿ ಅವರು ಸಹ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಲೋಪಗಳ ಬಗ್ಗೆಯೂ ಹೇಳಿದಾಗ, ಅವುಗಳನ್ನು ಸರಿಪಡಿಸುವ ಕುರಿತು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಹೊರಟ್ಟಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಉಪಹಾರಕ್ಕಾಗಿ ಕರೆದಿದ್ದರಿಂದ ಹೋಗಿದ್ದೆ. ಕೆಲವು ರಾಜಕೀಯ(Politics) ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಅದನ್ನು ಬಹಿರಂಗಪಡಿಸುವುದಿಲ್ಲ. ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ಕುರಿತು ಚರ್ಚೆ ಬೇಡ. ಶಿಕ್ಷಕರ ಕ್ಷೇತ್ರದಿಂದ ಏಳು ಬಾರಿ ಗೆಲುವು ಸಾಧಿಸಿರುವ ಹೊರಟ್ಟಿ ಅವರಿಗೆ ಎಲ್ಲಾ ವಿಚಾರವು ಗೊತ್ತಿದೆ. ಅವರು ಹಿರಿಯರಾಗಿದ್ದು, ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ ಎಂದರು.
ಮುಸ್ಲಿಮರಿಗೆ ವ್ಯಾಪಾರ ನಿಷೇಧಿಸಲು ಪ್ರಚೋದಿಸುವವರ ಬಂಧಿಸಿ: ಎಚ್‌ಡಿಕೆ
ಮುಸ್ಲಿಂ(Muslim) ಸಮುದಾಯದ ವ್ಯಾಪಾರಿಗಳಿಗೆ ನಿಷೇಧ ಹೇರಿ ಎಂಬ ಸಂದೇಶ ಹರಡುತ್ತಿರುವ ಹಾಗೂ ಪ್ರಚೋದನೆ ಮಾಡುತ್ತಿರುವವರನ್ನು ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕೆಲವು ಸಂಘಟನೆಗಳ ಕೈಗೊಂಬೆಯಾಗಿದ್ದಾರೆ. ಕರ್ನಾಟಕ ರಾಜ್ಯ ಶಾಂತಿಯ ತೋಟವಾಗಿದ್ದು, ಅದನ್ನು ಹಾಳು ಮಾಡಬಾರದು ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯವನ್ನು ಕೆಟ್ಟಪರಿಸ್ಥಿತಿಗೆ ಬಿಜೆಪಿಯವರು ತೆಗೆದುಕೊಂಡು ಹೋಗುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಏನು ಮಾಡುತ್ತಿದೆ. ಮುಖ್ಯಮಂತ್ರಿ ವಿರುದ್ಧ ಮಾತನಾಡಿದ್ದಕ್ಕೆ ಒಬ್ಬನನ್ನು ಬಂಧಿಸಲಾಗಿದೆ(Arrest). ಅದೇ ರೀತಿ ಭಾವನಾತ್ಮಕ ವಿಚಾರಗಳಲ್ಲಿ ಪ್ರಚೋದನೆ ಮಾಡುವವರನ್ನು ಬಂಧಿಸಬೇಕು. ಮುಸ್ಲಿಂ ಸಮುದಾಯದ ಅಂಗಡಿಯಲ್ಲಿ ವ್ಯಾಪಾರ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹಾಕುತ್ತಿರುವ ಕಿಡಿಗೇಡಿಗಳಿಗೆ ಮುಲಾಜಿಲ್ಲದೆ ಕಡಿವಾಣ ಹಾಕಬೇಕು. ಈ ವಿಷಯದಲ್ಲಿ ಸರ್ಕಾರ ಸುಮ್ಮನಿರಬಾರದು ಎಂದು ಒತ್ತಾಯಿಸಿದರು.
ಶಾಸಕರು ಅಥವಾ ಸಚಿವರೇ ಆಗಲಿ. ಪ್ರಚೋದನೆ ಯಾರೇ ಮಾಡಿದರೂ ಅಂತಹವರನ್ನು ಬಂಧಿಸಬೇಕು. ಸಮಾಜವನ್ನು ಒಡೆಯುವ ಇಂತಹವರು ದೇಶ ಉಳಿಸುವವರಲ್ಲ. ದೇಶ ಉಳಿಸುವವರು ಮುಗ್ಧ ಪ್ರಜೆಗಳು. ಪ್ರಚೋದನೆಗಳಿಗೆ ಯುವಕರಿಗೆ ಬಲಿಯಾಗಬಾರದು. ಪ್ರಚೋದನೆಯಿಂದ ಯುವಕರು ಭವಿಷ್ಯವನ್ನು ರೂಪಿಸಿಕೊಳ್ಳಲಾಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ಸಂಘಟನೆಗಳ ಕೈಗೊಂಬೆಯಾಗಿದ್ದಾರೆ. ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೂ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎಲ್ಲವನ್ನು ನೋಡಿಕೊಂಡು ಮುಖ್ಯಮಂತ್ರಿಗಳು ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಮುಸ್ಲಿಂ ಸಮುದಾಯದ ವ್ಯಾಪಾರಗಳಿಗೆ ನಿಷೇಧ ಹೇರಬೇಕು ಎನ್ನುವ ಸಂದೇಶದಲ್ಲಿ ಸುಮಾರು 23 ವಿಚಾರಗಳಿಗೆ ಪ್ರೋತ್ಸಾಹ ನೀಡಬಾರದು ಎಂದು ಬರೆಯಲಾಗಿದೆ. ಹಣ್ಣಿನ ವ್ಯಾಪಾರ, ಹೊಟೇಲ್, ಹಾರ್ಡ್‌ವೇರ್, ಟ್ರಾವೆಲ್, ಕಿರಾಣಿ ಶಾಪು, ಟ್ರಾವಲ್ ಬುಕ್ಕಿಂಗ್, ಮುಸ್ಲಿಂ ವೈದ್ಯರ ಬಳಿ ಹೋಗಬಾರದು ಎಂದು ಜನರ ತಲೆಕೆಡಿಸುವ ಕೆಲಸವಾಗುತ್ತಿದೆ. ಹಿಂದುಗಳ ಅಂಗಡಿಗಳಿಗೆ ಮಾತ್ರ ಹೋಗಿ ಎಂದು ಸಂದೇಶ ಹರಡುತ್ತಿದ್ದಾರೆ. ಇವರು ನಮ್ಮ ದೇಶದಲ್ಲಿ ಎಲ್ಲಿಗೆ ಒಯ್ಯುತ್ತಿದ್ದಾರೆ? ಸರ್ವಜನಾಂಗದ ತೋಟವನ್ನು ಸರ್ವನಾಶ ಮಾಡುತ್ತಿದ್ದಾರೆ. ಇಂತಹವರನ್ನು ಸುಮ್ಮನೆ ಬಿಡಬಾರದು ಎಂದು ಹೇಳಿದರು.
ಸಭಾಪತಿಯಾಗಿ ಯಾಕಿದ್ದೀನೋ ಅನಿಸ್ತಿದೆ: ಹೊರಟ್ಟಿ
ಎಲ್ಲರೂ ಒಂದಲ್ಲ ಒಂದು ದಿನ ಮಣ್ಣಿಗೆ ಹೋಗುತ್ತಾರೆ. ಕರ್ನಾಟಕ ರಾಜ್ಯ ಶಾಂತಿಯ ತೋಟವಾಗಿದ್ದು, ಅದನ್ನು ಹಾಳು ಮಾಡಬಾರದು. ಇಂತಹ ವ್ಯಕ್ತಿಗಳನ್ನು ಕರ್ನಾಟಕ ಜನರು ಬಹಿಷ್ಕಾರ ಮಾಡಬೇಕು. ಇಲ್ಲದಿದ್ದರೆ ಮುಂದೆ ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲ್ಲ ಎಂದು ಬೇಸರದಿಂದ ನುಡಿದರು.
ಉತ್ತರ ಭಾರತದಲ್ಲಿ ಮತಕ್ಕಾಗಿ ಮಾಡಿದ್ದನ್ನೇ ಇಲ್ಲಿಯೂ ಮಾಡಲು ಹೊರಟ್ಟಿದ್ದಾರೆ. ಉತ್ತರವೇ ಬೇರೆ, ದಕ್ಷಿಣವೇ ಬೇರೆ. ಉತ್ತರದಲ್ಲಿ ಮೊಘಲರ ಆಡಳಿತ ಇತ್ತು. ಅನೇಕ ದಾಳಿಗಳು ನಡೆದವು. ಆದರೆ, ಇಲ್ಲಿನ ಪರಿಸ್ಥಿತಿ ಬೇರೆ. ನಮ್ಮ ರಾಜ್ಯ ನೆಮ್ಮದಿಯ ನಾಡು. ಆದರೂ ಅಶಾಂತಿಯನ್ನು ಹುಟ್ಟುಹಾಕುವ ಕೃತ್ಯ ನಡೆಯುತ್ತಿದೆ. ಇದು ಸರಿಯಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸಮಾಜವನ್ನು ವಿಂಗಡನೆ ಮಾಡುತ್ತಿರುವವರು ಹಿಂದೂ ದೇವಾಲದಲ್ಲಿ ದಲಿತರನ್ನು ಪೂಜೆ ಮಾಡಲು ಬಿಡುತ್ತಾರಾ? ದೇವಸ್ಥಾನ ಕಟ್ಟುವವರು ಹಿಂದುಳಿದ ವರ್ಗದವರು, ದಲಿತರು. ದೇವಸ್ಥಾನದೊಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ಇಂತಹ ವಿದ್ರೋಹದ ಕೆಲಸ ಮಾಡುವವರು ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.