ಇಡೀ ಚಳಿಗಾಲದ ಅಧಿವೇಶನಕ್ಕೆ ಗೈರು| ಕಳೆದ ಬಾರಿಯ ಅಧಿವೇಶನಕ್ಕೂ ಹಾಜರಾಗದ ಕುಮಾರಸ್ವಾಮಿ| ಕೊರೋನಾ ನೆಪ ಹೇಳಿ ಕೇವಲ ಒಂದು ದಿನ ಮಾತ್ರ ಹಾಜರಾಗಿದ್ದ ಎಚ್‌ಡಿಕೆ| ಜೆಡಿಎಸ್ ಪಕ್ಷದಲ್ಲಿಯೂ ಅಸಮಾಧಾನಕ್ಕೆ ಕಾರಣ|
ಬೆಂಗಳೂರು(ಡಿ.11): ಪ್ರತಿಪಕ್ಷ ಕಾಂಗ್ರೆಸ್ ನಡೆಯನ್ನು ಖಂಡಿಸಿ ರೈತರ ಕುರಿತ ಕಾಳಜಿಯನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಾರಿಯ ಚಳಿಗಾಲದ ವಿಧಾನಸಭೆಯ ಅಧಿವೇಶನಕ್ಕೆ ಸಂಪೂರ್ಣ ಗೈರು ಹಾಜರಾಗಿದ್ದರು.
ಕಳೆದ ಬಾರಿಯ ಅಧಿವೇಶನದಲ್ಲಿಯೂ ಕುಮಾರಸ್ವಾಮಿ ಹಾಜರಾಗಿರಲಿಲ್ಲ. ಕೊರೋನಾ ನೆಪ ಹೇಳಿ ಕೇವಲ ಒಂದು ದಿನ ಮಾತ್ರ ಹಾಜರಾಗಿದ್ದರು. ಆದರೆ, ಈ ಬಾರಿ ಕೇವಲ ನಾಲ್ಕು ದಿನಗಳ ಕಾಲ ನಡೆದರೂ ಒಮ್ಮೆಯೂ ಸದನದತ್ತ ಸುಳಿಯಲಿಲ್ಲ. ಇದು ಜೆಡಿಎಸ್ ಪಕ್ಷದಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿದೆ.
undefined
ಡಿಕೆಶಿ, ಎಚ್ಡಿಕೆ ಕುತಂತ್ರದಿಂದಾಗಿ ಸರ್ಕಾರ ಕೆಡವಲು ನೆರವಾದೆ: ಯೋಗೇಶ್ವರ್
ಸಮಾಜದ ಬಗ್ಗೆ, ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಕೇವಲ ಟ್ವೀಟರ್‌ಗೆ ಮಾತ್ರ ಸಿಮೀತರಾಗಿದ್ದಾರೆ. ಅಧಿವೇಶನದ ವೇಳೆ ಸದನದಿಂದ ದೂರ ಉಳಿಯುತ್ತಾರೆ. ಪಕ್ಷದ ಸದಸ್ಯರು ಮಾತ್ರ ಭಾಗಿಯಾಗುತ್ತಾರೆ. ಕುಮಾರಸ್ವಾಮಿ ಅವರು ಸದನದಿಂದ ದೂರ ಉಳಿಯುತ್ತಿರುವುದರ ಕಾರಣ ಮಾತ್ರ ನಿಗೂಢವಾಗಿದೆ. ಕೆಲವೊಮ್ಮೆ ವಿಧಾನಸೌಧದಕ್ಕೆ ಆಗಮಿಸುವ ಕುಮಾರಸ್ವಾಮಿ, ಅಧಿವೇಶನದ ಚರ್ಚೆಯಲ್ಲಿ ಭಾಗಿಯಾಗುವುದಿಲ್ಲ. ಇದು ಪಕ್ಷದ ಸದಸ್ಯರಿಗೆ ಆತ್ಮವಿಶ್ವಾಸ ಕುಂದಿಸುವಂತೆ ಮಾಡುತ್ತದೆ. ಅಧಿವೇಶನಕ್ಕೂ ಮುನ್ನ ಪ್ರತಿಬಾರಿ ಪಕ್ಷದ ಶಾಸಕಾಂಗ ಸಭೆಯನ್ನು ಕರೆಯಲಾಗುತ್ತದೆ. ಆದರೆ, ಈ ಬಾರಿ ಸದನದಲ್ಲಿ ಯಾವ ವಿಷಯದ ಬಗ್ಗೆ ಪಕ್ಷವು ಚರ್ಚೆ ನಡೆಸಬೇಕು ಎಂಬುದರ ಬಗ್ಗೆ ತೀರ್ಮಾನಿಸುವ ಸಂಬಂಧ ಪಕ್ಷದ ಶಾಸಕಾಂಗ ಸಭೆಯನ್ನೇ ಕರೆದಿಲ್ಲ ಪಕ್ಷದ ಹಲವು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕುಮಾರಸ್ವಾಮಿ ಅವರ ಹೇಳಿಕೆಯು ಬಿಜೆಪಿಗೆ ಬೆಂಬಲ ನೀಡುವಂತಾಗಿದ್ದು, ಪಕ್ಷದ ಸದಸ್ಯರು ಅದನ್ನು ಸಮರ್ಥಿಸಿಕೊಳ್ಳಲು ಇರಿಸು-ಮುರಿಸು ಉಂಟು ಮಾಡುತ್ತಿದೆ. ರೈತರ ಪರವಾಗಿ ಮಾತನಾಡುವ ಅವರು ಭೂ ಸುಧರಣಾ ಕಾಯ್ದೆಯ ಪರವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷದ ಸದಸ್ಯರು ಕಾಯ್ದೆಯನ್ನು ವಿರೋಧಿಸಿದರೂ ಕುಮಾರಸ್ವಾಮಿ ಸೂಚನೆ ಮೇರೆಗೆ ಮನಸ್ಸಿಲ್ಲದಿದ್ದರೂ ಬಿಜೆಪಿಗೆ ಬೆಂಬಲ ನೀಡಬೇಕಾದ ಅನಿಯವಾರ್ಯತೆ ಎದುರಾಗಿದೆ ಎಂಬ ಮಾತುಗಳು ಕೇಳಿಬಂದಿವೆ.