
ಬೆಂಗಳೂರು(ಡಿ.11): ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಕೋವಿಡ್‌ನಿಂದಾಗಿ ಅಕಾಲಿಕವಾಗಿ ಅಗಲಿದ ಕೇಂದ್ರದ ಸಚಿವರಾಗಿದ್ದ ಸುರೇಶ್ ಅಂಗಡಿ ಅವರಿಂದ ತೆರವಾಗಿರುವ ಬೆಳಗಾವಿ ಉಪಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗದಿದ್ದರೂ ಯಾರನ್ನು ಕಣಕ್ಕಿಳಿಸಬೇಕು ಎಂಬ ರಾಜಕೀಯ ಲೆಕ್ಕಾಚಾರ ಆಡಳಿತಾರೂಢ ಬಿಜೆಪಿಯ ತೆರೆಮರೆಯಲ್ಲಿ ಲೆಕ್ಕಾಚಾರ ನಡೆದಿದೆ. ಸುರೇಶ್ ಅಂಗಡಿ ಅವರ ಬೀಗರಾಗಿರುವ ಶೆಟ್ಟರ್ ಅವರ ಹೆಸರೂ ಕೇಳಿಬಂದಿದೆ. ಆ ಭಾಗದ ಕೆಲ ಮುಖಂಡರು ಶೆಟ್ಟರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಶೆಟ್ಟರ್, ನಾನು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂಬ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ಅದು ಕೇವಲ ಊಹಾಪೋಹ ಅಷ್ಟೇ. ನಾನು ಧಾರವಾಡ ಜಿಲ್ಲೆಯಲ್ಲಿಯೇ ರಾಜಕಾರಣ ಆರಂಭಿಸಿ ಸುದೀರ್ಘ ಕಾಲ ಸಾಗಿ ಬಂದಿದ್ದೇನೆ. ಹೀಗಿರುವಾಗ ಈಗ ಧಾರವಾಡ ಜಿಲ್ಲೆ ಬಿಟ್ಟು ಬೆಳಗಾವಿ ಜಿಲ್ಲೆಗೆ ಹೋಗಿ ರಾಜಕಾರಣ ಮಾಡುವ ಅಗತ್ಯವೇ ನನಗಿಲ್ಲ ಎಂದು ತಿಳಿಸಿದರು.
ಬೆಳಗಾವಿ ಎಂಪಿ ಉಪಚುನಾವಣೆಗೆ ಶೆಟ್ಟರ್ ಅಭ್ಯರ್ಥಿ?
ಆ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಪಕ್ಷದ ವಿವಿಧ ಹಂತದಲ್ಲಿ ಚರ್ಚೆ ನಡೆದಿದೆ. ಆದರೆ, ಚರ್ಚೆಯ ಯಾವ ಹಂತದಲ್ಲೂ ನನ್ನ ಹೆಸರು ಪ್ರಸ್ತಾಪವಾಗಿಲ್ಲ. ಕಳೆದ ವಾರ ಬೆಳಗಾವಿಯಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯ ವೇಳೆಯೂ ನನ್ನ ಹೆಸರು ಕೇಳಿಬಂದಿಲ್ಲ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯ ಸಮಸ್ಯೆಯಿಲ್ಲ. ಆಕಾಂಕ್ಷಿಗಳ ಕೊರತೆಯೂ ಇಲ್ಲ. ಅಭ್ಯರ್ಥಿಗಳಾಗಲು ನಮ್ಮ ಪಕ್ಷದಲ್ಲಿ ಸಾಕಷ್ಟು ಸಂಖ್ಯೆಯ ಸಮರ್ಥರಿದ್ದಾರೆ. ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ನೀಡಿದರೆ ಸೂಕ್ತ ಎಂಬ ಅಭಿಪ್ರಾಯವೂ ಇದೆ. ಆದರೆ, ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷದ ಜಿಲ್ಲಾ ಮತ್ತು ರಾಜ್ಯ ನಾಯಕರು ಸಮಾಲೋಚನೆ ನಡೆಸಿ ವರಿಷ್ಠರಿಗೆ ಕಳುಹಿಸಲಿದ್ದಾರೆ. ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟದ್ದು. ಆದರೆ, ಯಾವುದೇ ಕಾರಣಕ್ಕೂ ನನ್ನ ಹೆಸರು ಎಲ್ಲಿಯೂ ಪ್ರಸ್ತಾಪವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.