ಬಿಜೆಪಿ ವಿದ್ಯಮಾನದಿಂದ ನೋವು: ವಲಸಿಗರ ಬಗ್ಗೆ ಈಶ್ವರಪ್ಪ ಹೇಳಿಕೆಗೆ ಸದಾನಂದಗೌಡ ಪ್ರತಿಕ್ರಿಯೆ

By Kannadaprabha NewsFirst Published Jun 28, 2023, 8:01 AM IST
Highlights

ನಿಜವಾದ ತಪ್ಪಿತಸ್ಥರ ವಿರುದ್ಧ ಟ್ರೀಟ್‌ಮೆಂಟ್‌ ಕೊಡಲು ಪಕ್ಷ ಸಿದ್ಧವಿದೆ. ಸಂಘಟನೆಯಲ್ಲಿ ಹಲವಾರು ಸಂದರ್ಭದಲ್ಲಿ ತಪ್ಪು ಮಾಡಿದವರನ್ನು ತಿದ್ದುವ ಕೆಲಸ ಹಿಂದಿನಿಂದಲೇ ನಡೆದಿದೆ. ಆದರೆ, ಆತುರಾತುರವಾಗಿ ಕ್ರಮ ಕೈಗೊಳ್ಳುವುದಿಲ್ಲ: ಡಿ.ವಿ.ಸದಾನಂದಗೌಡ 

ಬೆಂಗಳೂರು(ಜೂ.28): ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ನೋವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ವಲಸಿಗರ ಬಗ್ಗೆ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ನೀಡಿರುವ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮನೆಗೆ ಬಂದ ಅವರು ನಮ್ಮವರು. ವೈಯಕ್ತಿಕವಾಗಿ ಸೋಲಿನ ವಿಶ್ಲೇಷಣೆ ಮಾಡಬೇಕು. ಬೇರೆ ಪಕ್ಷದಿಂದ ಬಂದವರಿಂದ ಸೋತಿದ್ದೇವೆ ಎನ್ನಲಾಗದು. ಬಂದವರ ಪೈಕಿ ಕೆಲವರು ಸೋತಿದ್ದಾರೆ. ಅವರನ್ನು ಅವರೇ ಸೋಲಿಸಿಕೊಳ್ಳುತ್ತಾರಾ?’ ಎಂದು ಪ್ರಶ್ನಿಸಿದರು.

Latest Videos

ಹಾವೇರಿ ಸಂಸತ್‌ ಟಿಕೆಟ್‌ಗೆ ಪುತ್ರ ಆಕಾಂಕ್ಷಿ: ಕೆ.ಎಸ್‌.ಈಶ್ವರಪ್ಪ

‘ನನ್ನ ಕ್ಷೇತ್ರದ ಚುನಾವಣೆಯಲ್ಲೂ ಬೇರೆ ಪಕ್ಷದಿಂದ ಬಂದ ಮುಖಂಡರು ನನ್ನ ಪರವಾಗಿ ಕೆಲಸ ಮಾಡಿದ್ದರಿಂದ ಗೆಲುವು ಸಾಧಿಸಲು ಅನುಕೂಲವಾಯಿತು. ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ಭರವಸೆಗಳ ಹಿನ್ನೆಲೆಯಲ್ಲಿ ನಾವು ಸೋತಿರುವ ಸಾಧ್ಯತೆ ಇದೆ. ನಮಗಿಂತ ಹೆಚ್ಚಿನ ರಾಜಕೀಯ ತಂತ್ರಗಾರಿಕೆ ಮಾಡುವುದರಲ್ಲಿ ನಮ್ಮ ವಿರೋಧಿಗಳು ಯಶಸ್ವಿ ಆಗಿರುವಂತಿದೆ. ಸೋತ ತಕ್ಷಣ ಬೇರೆ ಪಕ್ಷದಿಂದ ಬಂದವರ ಮೇಲೆ ಆರೋಪ ಹೊರಿಸುವುದು ಸೂಕ್ತ ಎಂದು ನನಗೆ ಅನಿಸುವುದಿಲ್ಲ’ ಎಂದರು.

‘ಹೊಂದಾಣಿಕೆ ರಾಜಕಾರಣ ಬಿಜೆಪಿಯದಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೊಂದಾಣಿಕೆ ರಾಜಕಾರಣ ಆಗಿರಬಹುದು. ಕಾಂಗ್ರೆಸ್‌ನವರು ಹಾಸನದಲ್ಲಿ ಅವರ ಜತೆ ಹೋಗಿದ್ದಾರೆ. ಮೈಸೂರು ಭಾಗ, ಕೊಡಗಿನಲ್ಲಿ ಬೇರೆ ರೀತಿಯ ರಾಜಕಾರಣ ನೋಡಿದ್ದೇವೆ. ಇದರ ಅರ್ಥ ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದೆ ಎಂದಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಗಾಳಿ ನಮ್ಮ ಮೇಲೂ ಬಿದ್ದಿದೆ, ಹಾಗಾಗಿ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ: ಈಶ್ವರಪ್ಪ

‘ಹಾಸನದಲ್ಲಿ ಹೊಂದಾಣಿಕೆ ರಾಜಕೀಯ ಕಾಣಬಹುದು. ಸಿ.ಟಿ.ರವಿಯವರ ಕ್ಷೇತ್ರದಲ್ಲಿ ಒಳ ಒಪ್ಪಂದ ಆದಂತಿದೆ. ಇದೆಲ್ಲ ಒಳ ರಾಜಕೀಯ. ಒಪ್ಪಂದದ ರಾಜಕಾರಣ ಇದು. ಅಲ್ಲಿ ಇಲ್ಲಿ ನಮ್ಮ ಪಕ್ಷದಲ್ಲೂ ಒಳ ಒಪ್ಪಂದ ಆಗಿರಲೂ ಬಹುದು. ನಮ್ಮಲ್ಲಿ ಅಂಥದ್ದಕ್ಕೆ ಅವಕಾಶ ಇಲ್ಲ. ಆದರೂ ವೈಯಕ್ತಿಕ ದ್ವೇಷಕ್ಕಾಗಿ ಸಣ್ಣಪುಟ್ಟಆಗಿದ್ದರೆ, ಅದನ್ನು ರಾಜಕಾರಣದಲ್ಲಿ ದೊಡ್ಡ ಸಂಗತಿ ಎಂದು ನಾನು ತಿಳಿದುಕೊಳ್ಳುವುದಿಲ್ಲ’ ಎಂದರು.

ನಿಜವಾದ ತಪ್ಪಿತಸ್ಥರ ವಿರುದ್ಧ ಟ್ರೀಟ್‌ಮೆಂಟ್‌ ಕೊಡಲು ಪಕ್ಷ ಸಿದ್ಧವಿದೆ. ಸಂಘಟನೆಯಲ್ಲಿ ಹಲವಾರು ಸಂದರ್ಭದಲ್ಲಿ ತಪ್ಪು ಮಾಡಿದವರನ್ನು ತಿದ್ದುವ ಕೆಲಸ ಹಿಂದಿನಿಂದಲೇ ನಡೆದಿದೆ. ಆದರೆ, ಆತುರಾತುರವಾಗಿ ಕ್ರಮ ಕೈಗೊಳ್ಳುವುದಿಲ್ಲ ಎಂದು ನುಡಿದರು.

click me!