ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ನಡುವೆ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೊಡುವಂತೆ ಅಭಿಮಾನಿ ಕೂಗಿದ ಈ ವೇಳೆ ಆಯ್ತು ಕೊಡ್ತಿನಿ ಕೂತ್ಕೊ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವ ಘಟನೆ ನಡೆದಿದೆ.
ಹಾಸನ (ಜೂ.27): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ನಡುವೆ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೊಡುವಂತೆ ಅಭಿಮಾನಿ ಕೂಗಿದ ಈ ವೇಳೆ ಆಯ್ತು ಕೊಡ್ತಿನಿ ಕೂತ್ಕೊ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವ ಘಟನೆ ನಡೆದಿದೆ. ಹಾಸನದ ಹಳೇ ತಾಲ್ಲೂಕು ಕಚೇರಿ ಬಳಿ ನಡೆದ ಕೆಂಪೇಗೌಡರ 514ನೇ ಜಯಂತಿ ಕಾರ್ಯಕ್ರಮ ವೇಳೆ ಘಟನೆ ನಡೆದಿದೆ.
ಸಿಎಂ ಭಾಷಣದ ವೇಳೆ ಶಾಸಕ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಒತ್ತಾಯಿಸಿದರು ಇದು ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಕೇಳದ ಕಾರಣ ವೇದಿಕೆಯಿಂದ ಎದ್ದು ಬಂದ ಸಚಿವ ಶಿವರಾಜ್ ತಂಗಡಗಿ, ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೊಡಬೇಕಂತೆ ಎಂದು ಹೇಳಿದರು. ಈ ವೇಳೆ ಆಯ್ತು ಕೊಡ್ತಿನಿ ಕೂತ್ಕೊ ಎಂದ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೊಡಲಾಗುವುದು ಎಂದು ವೇದಿಕೆ ಮೇಲೆ ಘೋಷಿಸಿದರು.
Bengaluru-Mysuru Expressway ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿ.ಎಲ್ ಕ್ಯಾನ್ಸಲ್:
ಹಾಸನದಲ್ಲಿ ನಡೆಯುತ್ತಿರುವ ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿ, 1531 ನೇ ಇಸವಿಯಲ್ಲಿ ಪಟ್ಟಾಭಿಷೇಕ ಆಗ್ತದೆ, ಕೇವಲ 21 ವರ್ಷಕ್ಕೆ ಪಟ್ಟಾಭಿಷೇಕ ಆಗ್ತದೆ. ವಿಜಯನಗರಕ್ಕೆ ಹೋದಾಗ ಕಂಡ ಕನಸು ನನಸು ಮಾಡಲು ಮುಂದಾದರು. ಹಲಸೂರು, ಕೆಂಗೇರಿ, ಯಶವಂತಪುರ, ಯಲಹಂಕ ನಾಲ್ಕು ದ್ವಾರಗಳನ್ನಾಗಿ ಮಾಡಿ ಬೆಂಗಳೂರಿನ ಹೆಬ್ಬಾಗಿಲುಗಳನ್ನು ಮಾಡ್ತಾರೆ. ಕೆಂಪೇಗೌಡರಿಗೆ ದೂರದೃಷ್ಟಿ ಇತ್ತು. ಯಾರಿಗೆ ದೂರದೃಷ್ಟಿ ಇರಲ್ಲ, ಯಾರಿಗೆ ಕನಸುಗಳಿರಲ್ಲ ಅವರು, ಒಳ್ಳೆಯ ರಾಜ್ಯ, ಸಾಮ್ರಾಜ್ಯ, ಒಳ್ಳೆಯ ನಾಡನ್ನು ಕಟ್ಟಲು ಆಗಲ್ಲ.
ಯಾವುದೇ ನಾಡು, ದೇಶ, ರಾಜ್ಯ ಬೆಳೆಯಬೇಕಾದರೆ ಉದ್ದಿಮೆ ಬೆಳೆಯಬೇಕಾಗುತ್ತದೆ. ಉದ್ದಿಮೆ ಬೆಳದರೆ ಉದ್ಯೋಗ ಸಿಕ್ಕಿದ್ರೆ ಜೇಬಿನಲ್ಲಿ ಕಾಸು ಇರ್ತದೆ. ಜೇಬಿನಲ್ಲಿ ಕಾಸು ಇದ್ದರೆ ಮಾತ್ರ ತೆರಿಗೆ ಉತ್ಪಾದನೆ ಆಗುತ್ತೆ ರಾಜ್ಯ ಬೆಳೆಯುತ್ತೆ. ಯಾರು ಆದರ್ಶ ಪುರುಷರಿದ್ದಾರೆ ಅವರು ಒಂದು ಜಾತಿಗೆ ಸ್ವತ್ತಾಗಬಾರದು. ಕೆಂಪೇಗೌಡರು ಒಕ್ಕಲಿಗರ ಸ್ವತ್ತಲ್ಲ, ಇಡೀ ರಾಜ್ಯದ ಏಳು ಕೋಟಿ ಜನರ ಸ್ವತ್ತು. ಸರ್ಕಾರದಿಂದ ಜಯಂತಿ ಮಾಡಿದರೆ ಇಡೀ ಸಮಾಜ ಮಾಡಿದಂತಾಗುತ್ತದೆ ಅದಕ್ಕೆ ಕೆಂಪೇಗೌಡ ಜಯಂತಿ ಆಚರಣೆ ಮಾಡಿದೆವು ಎಂದರು.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರು ಇಟ್ಟಿದ್ದು ನಮ್ಮ ಸರ್ಕಾರ. ನಾನು ಇಟ್ಟಿದ್ದು, ಮುಖ್ಯಮಂತ್ರಿಯಾಗಿ ನಾನೇ ನಾಮಕರಣ ಮಾಡಿದ್ದು. ಸ್ವಾಮೀಜಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಸಲಹೆ ಕೊಟ್ಟರು. ನಾನೇ ಪ್ರಾಧಿಕಾರ ರಚನೆ ಮಾಡಿ ಐದು ಎಕರೆ ಜಮೀನು ಕೊಟ್ಟೆ. ಕೆಂಪೇಗೌಡರನ್ನು ಹಾಡಿ ಹೊಗಳುವ ಬಹಳ ಜನ ಇರಬಹುದು. ಆದರೆ ಇತಿಹಾಸ ಯಾವಾಗಲೂ ಇತಿಹಾಸವಾಗಿಯೇ ಉಳಿಯುತ್ತೆ. ಕೆಲವರು ಇತಿಹಾಸನ ತಿರುಚುವ ಕೆಲಸವನ್ನು ಮಾಡಿದ್ರು. ಪಠ್ಯ ಪುಸ್ತಕದಲ್ಲಿ ಕುವೆಂಪು, ನಾರಾಯಣ ಗುರು, ಅಂಬೇಡ್ಕರ್ ಅವರ ಇತಿಹಾಸ ತಿರುಚಿದ್ರು. ನಾವು ಈಗ ಮತ್ತೆ ಅದನ್ನು ಸರಿ ಮಾಡುವ ಕೆಲಸ ಮಾಡಿದ್ದೇವೆ. ಜನರಿಗೆ ಸತ್ಯ ತಿಳಿಸುವ ಕೆಲಸ ಮಾಡಿದ್ದೇವೆ. ಯಾರೂ ಕೂಡ ಇತಿಹಾಸ ತಿರುಚಬಾರದು ಎಂದರು.
ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆಗೆ ಚಾರ್ಚ್ ಫ್ರೇಮ್ ರೆಡಿಯಾಗಿದೆ: ಸಚಿವ
ಪ್ರತಿ ವರ್ಷ ಕೆಂಪೇಗೌಡ ಜಯಂತಿ ಮಾಡುತ್ತೇವೆ. ಯಾರು ಸಮಾಜಮುಖಿಯಾಗಿರುತ್ತಾರೆ. ಅವರನ್ನು ನೆನಪು ಮಾಡಿಕೊಳ್ಳಬೇಕು, ಸ್ಮರಿಸಬೇಕು. ಯಾರು ಸಮಾಜ ವಿರೋಧಿಯಾಗಿರುತ್ತಾರೆ ಅವರನ್ನು ವಿರೋಧ ಮಾಡಬೇಕು.
ನಮ್ಮ ಸರ್ಕಾರ ಬಂದು ಒಂದು ತಿಂಗಳಾಯ್ತು. ಬಹಳಷ್ಟು ಜನ ನಮ್ಮನ್ನು ಟೀಕೆ ಮಾಡ್ತಿದ್ದಾರೆ. ನಮ್ಮ ಐದು ಗ್ಯಾರೆಂಟಿಗಳನ್ನು ಟೀಕೆ ಮಾಡಿದರು. ಈಗಾಗಲೇ ಒಂದು ಗ್ಯಾರೆಂಟಿ ಜಾರಿ ಮಾಡಿದ್ದೇವೆ. ಇವತ್ತು ವಸ್ತು ಬೆಲೆಗಳು ಜಾಸ್ತಿಯಾಗಿವೆ. ಜನರು ವಸ್ತುಗಳನ್ನು ಖರೀದಿ ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಮಹಿಳೆಯರ ಅಕೌಂಟ್‌ಗೆ ಎರಡು ಸಾವಿರ ಹಣ ಹಾಕುತ್ತೇವೆ. ಒಂದು ಕೋಟಿ 28 ಲಕ್ಷ ಕುಟುಂಬಗಳಿವೆ. ಎಲ್ಲರಿಗೂ ಎರಡು ಸಾವಿರ ಹಣ ಹಾಕ್ತಿವಿ ಎಂದರು.
ಅಕ್ಕಿಯಲ್ಲಿ ರಾಜಕಾರಣ ಮಾಡುತ್ತಿರುವುದು ನೀಚತನದ ರಾಜಕಾರಣ. ನಾವೇನು ಅಕ್ಕಿಯನ್ನು ಪುಕ್ಕಟೆ ಕೇಳಿಲ್ಲ. ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ. ಏನೇ ಆಗಲಿ, ಎಷ್ಟೇ ಕಷ್ಟ ಆಗಲಿ ಅಲ್ಲಿ ಕೊಟ್ಟೇ ಕೊಡ್ತಿವಿ. ಕೆಲವರು ಟೀಕೆ ಮಾಡುತ್ತಿದ್ದಾರೆ ಇವರ ಮಾತುಗಳಿಗೆ ಕಿವಿಗೊಡಬೇಡಿ. ಯಾರು ಏನೇ ಹೇಳಲಿ, ನಾವು ವಾಗ್ದಾನ ಕೊಟ್ಟಿದ್ದೇವೆ. ನುಡಿದಂತೆ ನಡೆಯುತ್ತೇವೆ, ನಾವು ಕೊಟ್ಟಿರುವ ಎಲ್ಲಾ ವಾಗ್ದಾನಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇವೆ. ಎಲ್ಲಾ ವಾಗ್ದಾನಗಳನ್ನು ಈಡೇರಿಸುವುದು ಗ್ಯಾರೆಂಟಿ ಗ್ಯಾರೆಂಟಿ ಗ್ಯಾರೆಂಟಿ ಎಂದು ಸಿದ್ದರಾಮಯ್ಯ ಹೇಳಿದರು.