ಎಲ್ಲಿದೆ ಕಾಂಗ್ರೆಸ್. ಕಾಂಗ್ರೆಸ್‌ನ ಕಾಲ ಮುಗಿದು ಹೋಗಿದೆ. ತಮ್ಮ ಅಸ್ಥಿತ್ವಕ್ಕಾಗಿ ಕಾಂಗ್ರೆಸ್ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತುರುವೇಕೆರೆ (ಮಾ.22): ಎಲ್ಲಿದೆ ಕಾಂಗ್ರೆಸ್. ಕಾಂಗ್ರೆಸ್‌ನ ಕಾಲ ಮುಗಿದು ಹೋಗಿದೆ. ತಮ್ಮ ಅಸ್ಥಿತ್ವಕ್ಕಾಗಿ ಕಾಂಗ್ರೆಸ್ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪಟ್ಟಣದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ರಾಜ್ಯದಲ್ಲಿ ಧೂಳೀಪಟವಾಗಲಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ಮೂಲಕ ಪುನಃ ರಾಜ್ಯದಲ್ಲಿ ಸರ್ಕಾರ ರಚನೆಯಾಗಲಿದೆ. ಬೊಮ್ಮಾಯಿಯವರೂ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾವು ಪಕ್ಷದ ಅಧ್ಯಕ್ಷ ಗಾದಿಯನ್ನು ತ್ಯಜಿಸಿದ್ದು ಮತ್ತು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿದ್ದೂ ಸಹ ಸ್ವಂತ ನಿರ್ಧಾರದಿಂದ. ನನಗೆ ಯಾರೂ ಬಲವಂತಮಾಡಿ ಅಧಿಕಾರದಿಂದ ಕೆಳಗೆ ಇಳಿಸಿಲ್ಲ. ಕಾಂಗ್ರೆಸ್‌ನ ಕೆಲವರು ನನ್ನ ರಾಜೀನಾಮೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನವರು ಯಶಸ್ವಿಯೂ ಆಗುವುದಿಲ್ಲ. ಕಾಂಗ್ರೆಸ್‌ನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ವೀರಶೈವ ಲಿಂಗಾಯತ ಸಮಾಜದವರು ಯಾರೂ ನಂಬಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದರು. ಈ ಕ್ಷೇತ್ರದ ಶಾಸಕರಾಗಿರುವ ಮಸಾಲಾ ಜಯರಾಮ್ ಸರ್ಕಾರದಿಂದ ಸುಮಾರು 1500 ಕೋಟಿಗೂ ಹೆಚ್ಚು ಹಣ ತಂದು ಹಲವಾರು ಅಭಿವೃದ್ಧಿ ಕಾರ್ಯವನ್ನು ಮಾಡಿದ್ಧಾರೆ.
ರಾಹುಲ್ ಭೇಟಿಯಿಂದ ರಾಜ್ಯಕ್ಕೆ ಯಾವುದೇ ಪರಿಣಾಮ ಬೀರಿಲ್ಲ: ಸಿಎಂ ಬೊಮ್ಮಾಯಿ
ಇವರ ಉದ್ದೇಶ ತಮ್ಮ ಕ್ಷೇತ್ರದ ಉದ್ದಾರವೇ ಆಗಿತ್ತು. ಮಸಾಲಾ ಜಯರಾಮ್ ಮಾಡಿರುವ ಸಾಧನೆ ಗಮನಿಸಿದರೆ ಮುಂಬರುವ ಚುನಾವಣೆಯಲ್ಲಿ ಕನಿಷ್ಠ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವುದು ಶತಃಸ್ಸಿದ್ಧ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು. ಯಡಿಯೂರಪ್ಪ ಭಾಷಣದ ಉದ್ದಕ್ಕೂ ಕಾಂಗ್ರೆಸ್‌ನ್ನು ಟೀಕಿಸಿದರೇ ವಿನಃ ಜೆಡಿಎಸ್ ಬಗ್ಗೆ ಎಲ್ಲೂ ಚಕಾರವನ್ನೇ ಎತ್ತದಿದ್ದುದು ಅಚ್ಚರಿ ತರಿಸಿತು. ಆದರೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಠೇವಣಿ ಸಿಗದಂತೆ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಯಡಿಯೂರಪ್ಪನವರು ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ನಂತರ ಪಟ್ಟಣದ ಪ್ರವಾಸಿ ಮಂದಿರದಿಂದ ಗುರುಭವನದ ಆವರಣದಲ್ಲಿ ನಡೆದ ಸಮಾರಂಭದ ವೇದಿಕೆಯವರೆಗೂ ಅದ್ಧೂರಿ ಸ್ವಾಗತ ಕೋರಲಾಯಿತು. ಜೆಸಿಬಿ ಮೂಲಕ ಹೂವಿನ ಮಳೆಗೆರೆದರೆ, ಜೆಸಿಬಿ ಸಹಾಯದಿಂದ ಕೊಬ್ಬರಿ ಹಾರ, ಸೇಬಿನ ಹಾರ, ಹೂವಿನ ಹಾರ ಹಾಕುವ ಮೂಲಕ ತಮ್ಮ ಅಭಿಮಾನವನ್ನು ಮೆರೆದರು. ಸಹಸ್ರಾರು ಬಿಜೆಪಿ ಕಾರ್ಯಕರ್ತರು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ಕೋಳಿಗಳನ್ನು ಕತ್ತರಿಸಿ, ಶಾಸಕರಾಗಿರುವ ಮಸಾಲಾ ಜಯರಾಮ್‌ರವರ ಮಸಾಲಾಗೆ ಅರೆದು ಜಯರಾಮ್‌ರನ್ನು ಗೆಲ್ಲಿಸಿ ಎಂದರು. ಜಯರಾಮ್‌ರವರು ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರು ಈ ಹಿಂದೆ ನೀಡಿದ್ದ ಭರವಸೆಗಳನ್ನು ಬಹುಪಾಲು ಈಡೇರಿಸಿದ್ದಾರೆ. ತಮ್ಮ ಸೇವೆ ಮಾಡಿದ್ದಾರೆ. ಹಾಗಾಗಿ ಅವರಿಗೆ ತಮ್ಮ ಬೆಂಬಲ (ಕೂಲಿ) ನೀಡಿ ಎಂದು ವಿನಂತಿಸಿಕೊಂಡರು.
ಶಿವಮೊಗ್ಗದಿಂದ ತಂದೆ ಕಣಕ್ಕೆ, ನಾನು ಸ್ಪರ್ಧಿಸಲ್ಲ: ಕಾಂತೇಶ್ ಈಶ್ವರಪ್ಪ
ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಮಾಜಿ ಸಂಸದ ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೇ ನಾರಾಯಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ, ಜಿಲ್ಲಾ ಮುಖಂಡರಾದ ಭೈರಪ್ಪ, ಬ್ಯಾಟರಂಗೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಕಾರ್ಯದರ್ಶಿಗಳಾದ ಪ್ರಕಾಶ್, ರಾಮೇಗೌಡ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ದುಂಡ ರೇಣುಕಯ್ಯ, ಜಿಲ್ಲಾ ಕಾರ್ಯದರ್ಶಿ ಸಂಪಿಗೆ ಶ್ರೀಧರ್, ಮುದಿಗೆರೆ ಕೆಂಪರಾಜ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಭಾಕರ್, ಉಪಾಧ್ಯಕ್ಷೆ ಶೀಲಾ ಶಿವಪ್ಪ ನಾಯ್ಕ, ಸದಸ್ಯರಾದ ಚಿದಾನಂದ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.