ಶಿವಮೊಗ್ಗದಿಂದ ತಂದೆ ಕಣಕ್ಕೆ, ನಾನು ಸ್ಪರ್ಧಿಸಲ್ಲ: ಕಾಂತೇಶ್‌ ಈಶ್ವರಪ್ಪ

Published : Mar 22, 2023, 12:04 PM IST
ಶಿವಮೊಗ್ಗದಿಂದ ತಂದೆ ಕಣಕ್ಕೆ, ನಾನು ಸ್ಪರ್ಧಿಸಲ್ಲ: ಕಾಂತೇಶ್‌ ಈಶ್ವರಪ್ಪ

ಸಾರಾಂಶ

ಶಿವಮೊಗ್ಗ ನಗರ ಕ್ಷೇತ್ರದಿಂದ ಈ ಬಾರಿ ತಂದೆ ಕೆ.ಎಸ್‌.ಈಶ್ವರಪ್ಪ ಅವರೇ ಸ್ಪರ್ಧೆ ಮಾಡುತ್ತಾರೆ. ನಾನು ಸ್ಪರ್ಧಿಸಲ್ಲ ಎಂದು ಪುತ್ರ, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್‌ ಹೇಳಿದ್ದಾರೆ. 

ಶಿವಮೊಗ್ಗ (ಮಾ.22): ಶಿವಮೊಗ್ಗ ನಗರ ಕ್ಷೇತ್ರದಿಂದ ಈ ಬಾರಿ ತಂದೆ ಕೆ.ಎಸ್‌.ಈಶ್ವರಪ್ಪ ಅವರೇ ಸ್ಪರ್ಧೆ ಮಾಡುತ್ತಾರೆ. ನಾನು ಸ್ಪರ್ಧಿಸಲ್ಲ ಎಂದು ಪುತ್ರ, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್‌ ಹೇಳಿದ್ದಾರೆ. ಯಾರೆಷ್ಟೇ ವಿರೋಧ ವ್ಯಕ್ತಪಡಿಸಿದರೂ ನನ್ನ ತಂದೆ ಅವರಿಗೇ ಬಿಜೆಪಿ ಟಿಕೆಟ್‌ ಸಿಗುತ್ತದೆ. ನಾನು ಮುಂದಿನ ಬಾರಿ ಸ್ಪರ್ಧೆ ಮಾಡುತ್ತೇನೆ ಎಂದರು. ಕಳೆದ ವಿಧಾನ ಪರಿಷತ್‌ ಚುನಾವಣೆ ವೇಳೆ ನನ್ನ ಹೆಸರು ಕೇಳಿಬಂದಿತ್ತು. ನಂತರ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಹೆಸರು ಪ್ರಸ್ತಾಪ ಆಗಿತ್ತು. ನಾನು ಕೂಡ ತಂದೆ ಈಶ್ವರಪ್ಪ ಅವರಲ್ಲಿ ಸ್ಪರ್ಧಿಸುವ ಕುರಿತು ಪ್ರಸ್ತಾಪಿಸಿದ್ದೆ. 

ನಾನು ಎಲ್ಲಿಯವರೆಗೆ ಚುನಾಯಿತ ಪ್ರತಿನಿಧಿಯಾಗಿ ರಾಜಕಾರಣದಲ್ಲಿ ಇರುತ್ತೇನೋ ಅಲ್ಲಿಯವರೆಗೂ ಸ್ಪರ್ಧೆ ಬೇಡವೆಂದು ತಂದೆ ಈಶ್ವರಪ್ಪ ಹೇಳಿದ್ದರು. ಅಂದು ತಂದೆ ಹೇಳಿದ ಮಾತಿನಿಂದ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದೆ ಎಂದು ತಿಳಿಸಿದರು. ಈಗ ನನ್ನ ತಂದೆಗೆ 76 ವರ್ಷ ವಯಸ್ಸು. ಬಿಜೆಪಿ ಟಿಕೆಟ್‌ ಕೊಡ್ತಾರೋ, ಇಲ್ಲವೋ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್‌ ಈಶ್ವರಪ್ಪ ಅವರ ಕೈ ಬಿಡುವುದಿಲ್ಲ. ಅವರಿಗೆ ಟಿಕೆಟ್‌ ಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಈಶ್ವರಪ್ಪ ಅವರನ್ನು ಆಶೀರ್ವದಿಸಿ ಎಂದರು.

ನಿಮ್ಮ ಮಗ ಚಿಕ್ಕವ. ಆಮೇಲೆ ಟಿಕೆಟ್‌ ಕೊಡಿಸಿ, ನಾವು ಕ್ಯೂನಲ್ಲಿದ್ದೇವೆ: ಈಶ್ವರಪ್ಪಗೆ ಆಯನೂರು ಟಾಂಗ್‌

ಸಮಾಜ ಸೇವೆ ಮೂಲಕ ಕಾಂತೇಶ್‌ ಹುಟ್ಟು​ಹಬ್ಬ ಅರ್ಥಪೂರ್ಣ: ಜನ್ಮದಿನವನ್ನು ಸಮಾಜಸೇವೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿರುವ ಕೆ.ಈ.ಕಾಂತೇಶ್‌ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಚಿತ್ರದುರ್ಗ ಮಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ನುಡಿದರು. ನಗರದ ಗುರುಪುರದ ನಂಜುಂಡೇಶ್ವರ ಸಭಾಂಗಣದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್‌ ಅವರ 43ನೇ ಜನ್ಮದಿನ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ 2,500ಕ್ಕೂ ಹೆಚ್ಚು ನಿವಾಸಿಗಳಿಗೆ ಸೊಳ್ಳೆ ಪರದೆ ವಿತರಿಸುವ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವ​ರು ಆಶೀರ್ವಚನ ನೀಡಿದರು.

ಯುಗಾದಿಯಂದು ಮಾವು, ಬೇವು, ಹೊಂಗೆಯ ಚಿಗುರು ಪರಿಸರವನ್ನು ಹಸಿರು ಮಾಡಿ, ಹೊಸ ಚೈತನ್ಯ ತುಂಬುವಂತೆ ಕಾಂತೇಶ್‌ ಅವರ ಹುಟ್ಟುಹಬ್ಬ ಯುಗಾದಿಯಂದು ಬರುವುದರಿಂದ ಅವರು ಕೂಡ ಹೊಸ ಚೈತನ್ಯದಿಂದ ಸಾಮಾಜಿಕ ಸೇವೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವಂತಾಗಲಿ. ಅವರ ಇಡೀ ಕುಟುಂಬ ಸಮಾಜಮುಖಿಯಾಗಿ ಧಾರ್ಮಿಕವಾಗಿ, ಸೇವಾಕಾರ್ಯ ಮಾಡಿಕೊಂಡು ಬಂದಿದ್ದು, ಅವರಿಗೆ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದರು. ಜಡೆ ಮಠದ ಮಹಾಂತ ಸ್ವಾಮೀಜಿಗಳು ಮಾತನಾಡಿ, ಜನಪರ ಕಾಳಜಿಯಿಂದ ಬದುಕನ್ನು ಯಾವ ರೀತಿ ಮನುಷ್ಯ ಅರ್ಥಪೂರ್ಣ ಆಗಿಸಿದ್ದಾನೆ ಎಂಬುದು ಮುಖ್ಯ. 

ದೇಹ ಭಾರವಾದಾಗ ಯೋಗ ಮಾಡಬೇಕು. ಮನಸ್ಸು ಭಾರವಾದಾಗ ಧ್ಯಾನ ಮಾಡಬೇಕು. ಸಂಪತ್ತು ಭಾರವಾದಾಗ ಧಾನವನ್ನು ಮಾಡು ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ಜನ್ಮದಿನದಂದು ಸಮಾಜ ಸೇವೆಯ ಮೂಲಕ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿದ್ದಾರೆ ಎಂದರು. ಈಶ್ವರಾನಂದಪುರಿ ಶ್ರೀಗಳು ಮಾತನಾಡಿ, ಕಾಂತೇಶ್‌ ಅವರಿಗೆ 2018ರಲ್ಲೇ ಚುನಾವಣೆಗೆ ನಿಲ್ಲುವ ಅವಕಾಶ ಸಿಕ್ಕಿತ್ತು. ಬಳಿಕ ವಿಧಾನ ಪರಿಷತ್ತಿಗೂ ಆಯ್ಕೆಯಾಗುವ ಸಂಭವವಿತ್ತು. ಆದರೆ ಅವರ ಅಪ್ಪಾಜಿಯ ಸೂಚನೆ ಮೇರೆಗೆ ಅವರು ಕಣದಿಂದ ಹಿಂದೆ ಸರಿದಿದ್ದರು. 

ಕಾಂಗ್ರೆಸ್‌ ಗ್ಯಾರಂಟಿಗಳನ್ನು ಜನ ನಂಬಲ್ಲ: ಸಿಎಂ ಬೊಮ್ಮಾಯಿ

ಶಾಸಕ ಕೆ.ಎಸ್‌.ಈಶ್ವರಪ್ಪನವರು ಬಿಜೆಪಿ ಬೆಳೆಸುವಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರಷ್ಟೆಶ್ರಮ ಹಾಕಿದ್ದಾರೆ. 5 ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಉಪಮುಖ್ಯಮಂತ್ರಿ, ಮಂತ್ರಿಯಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮಠಗಳಿಗೆ ಅನುದಾನ ನೀಡಿದ್ದಾರೆ. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದೂ ಧರ್ಮದ ಬೆನ್ನುಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಕೂಡ ಈಶ್ವರಪ್ಪ ಅವರೇ ನಿಲ್ಲಲಿ ಎಂದು ಆಶಿಸಿದರು. ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಜಗದ್ಗುರುಗಳು ಕಾಂತೇಶ್‌ ಜನ್ಮದಿನದ ಕಾರ್ಯಕ್ರಮಕ್ಕೆ ಬಂದು ಒಟ್ಟಾಗಿ ಆಶೀರ್ವಾದ ಮಾಡಿರುವುದು ಪೂರ್ವಜನ್ಮದ ಪುಣ್ಯ. ಆತನಿಗೆ ಸಮಾಜ ಸೇವೆ ಮಾಡಲು ಇನ್ನಷ್ಟುಶಕ್ತಿ ಸಿಕ್ಕಿದೆ. ದೇವರು ಆತನಿಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್