ದೇಶ, ರಾಜ್ಯ ಕಾಂಗ್ರೆ​ಸ್‌ ​ಮುಕ್ತ ಆಗ​ಬೇ​ಕು: ಬಿ.ಎಸ್‌.ಯಡಿಯೂರಪ್ಪ

By Kannadaprabha NewsFirst Published Mar 19, 2023, 2:00 AM IST
Highlights

ದೇಶ ಮತ್ತು ರಾಜ್ಯವು ಕಾಂಗ್ರೆಸ್‌ ಮುಕ್ತ ಆಗಬೇಕು. ಈ ದಿಸೆಯಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. 

ಸಾಗರ (ಮಾ.19): ದೇಶ ಮತ್ತು ರಾಜ್ಯವು ಕಾಂಗ್ರೆಸ್‌ ಮುಕ್ತ ಆಗಬೇಕು. ಈ ದಿಸೆಯಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಪಟ್ಟಣದ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಜನರು ಮನಸ್ಸು ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಬಹುದು ಎಂದರು. ಈ ಚುನಾವಣೆಯಲ್ಲಿ ಮಾತ್ರವಲ್ಲ, 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಪರಮ ಗುರಿಯಾಗಿದೆ. ಕಾಂಗ್ರೆಸ್ಸಿನವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. 

ಅದಕ್ಕೆಲ್ಲ ಕಿವಿಗೊಡಬೇಡಿ. ಕಾಂಗ್ರೆಸ್ಸಿನವರು 60 ವರ್ಷ ಆಳ್ವಿಕೆ ಮಾಡಿದಾಗ ಯಾವ ಸ್ಥಿತಿ ಇತ್ತು ಎಂದು ಯೋಚಿಸಿದರೆ ಬಿಜೆಪಿಯಿಂದ ಏನು ಸಾಧ್ಯವಾಗುತ್ತದೆ ಎನ್ನುವುದು ಅರ್ಥವಾಗುತ್ತದೆ. ಬಿಜೆಪಿಯ ಅವಧಿಯಲ್ಲಿ ಜಾರಿಗೆ ಬಂದಿರುವ ಯೋಜನೆಗಳ ಲಾಭ ಸಿಗದ ಒಂದು ಮನೆಯೂ ಇಲ್ಲ. ಕಳೆದ ತಿಂಗಳು ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ಶಿವಮೊಗ್ಗಕ್ಕೆ ಬಂದಾಗ ನಮ್ಮೆಲ್ಲರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಅದನ್ನು ಈ ಚುನಾವಣೆಯಲ್ಲಿ ಸಾಕಾರಗೊಳಿಸಬೇಕಾದ ಜವಾಬ್ದಾರಿ ನಿಮ್ಮದಾಗಿದೆ ಎಂದು ಹೇಳಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾ​ರ​ಸ್ವಾಮಿ ಟೀಕೆ

ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ನಾವು ಮುಸ್ಲಿಂ ವಿರೋಧಿಗಳಲ್ಲ. ಆದರೆ ರಾಷ್ಟ್ರದ್ರೋಹಿ ಮುಸ್ಲೀಮರ ವಿರೋಧಿಗಳು. ಈಗಾಗಲೇ ಪಿಎಫ್‌ಐ ಸಂಘಟನೆಗೆ ಯಾವ ಗತಿ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಮುಂದೆ ಇಂತಹ ರಾಷ್ಟ್ರದ್ರೋಹಿಗಳ ಹುಟ್ಟಡಗಿಸುತ್ತೇವೆ. ಈ ದೇಶಕ್ಕೆ ಗೌರವ ಕೊಡುವುದನ್ನು ಮೊದಲು ಅವರು ಕಲಿತುಕೊಳ್ಳಬೇಕಿದೆ ಎಂದರು. ಕೇವಲ ಅಭಿವೃದ್ಧಿ ಎನ್ನುವ ವಿಷಯಕ್ಕೆ ಮಾತ್ರ ಬಿಜೆಪಿ ಸೀಮಿತವಾಗಿಲ್ಲ. ಪ್ರಸ್ತುತ ಈ ದೇಶದ ರಕ್ಷಣೆ ಎನ್ನುವುದು ಅತ್ಯಂತ ಮಹತ್ವದ್ದಾಗಿದೆ. ಇಂದಿಗೂ ದೇಶ ಮತ್ತು ದೇಶಭಕ್ತರ ಕುರಿತು ಹಗುರವಾಗಿ ಮಾತನಾಡುವ ಮನಸ್ಥಿತಿಯ ಕಾಂಗ್ರೆಸ್ಸಿಗೆ ಯಾವ ಸ್ಥಾನ ಎನ್ನುವುದನ್ನು ಈ ಬಾರಿಯ ವಿಧಾನಸಭಾ ಚುನಾವಣೆ ತೋರಿಸಲಿದೆ. 

ಅಭಿವೃದ್ಧಿಯ ಕೆಲಸ ಮಾಡುತ್ತಿರುವ ಬಿಜೆಪಿಯನ್ನು ಬೆನ್ನುತಟ್ಟಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ರಾಜ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರವಿದ್ದರೆ, ಸಾಗರದಲ್ಲಿ ತ್ರಿಬಲ್‌ ಇಂಜಿನ್‌ ಕೆಲಸ ಮಾಡುತ್ತಿದೆ. ನಾವು ಕೇವಲ ಚುನಾವಣೆಗಾಗಿ ರಾಜಕೀಯ ಮಾಡುತ್ತಿಲ್ಲ. ಬದಲಾಗಿ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡುವುದನ್ನು ಕಲಿತಿದ್ದೇವೆ ಎಂದರು.

ಕಾಂಗ್ರೆಸ್‌ನಿಂದ ಸುಳ್ಳು ಗ್ಯಾರಂಟಿ ಕಾರ್ಡ್‌ ವಿತರಣೆ: ನಳಿನ್‌ ಕುಮಾರ್‌ ಕಟೀಲ್‌

ಶಾಸಕ ಹೆಚ್‌.ಹಾಲಪ್ಪ ಮಾತನಾಡಿ, ಸಾಗರದಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. 5 ವರ್ಷದ ಹಿಂದೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಈಡೇರಿಸಿದ್ದೇವೆ. ಮುಂದೆ ವಿದ್ಯಾಸಾಗರ, ಆರೋಗ್ಯ ಸಾಗರ ಹಾಗೂ ಸುಂದರ ಸಾಗರ ಮಾಡುವ ಭರವಸೆ ನೀಡುತ್ತಿದ್ದೇವೆ ಎಂದು ಹೇಳಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ, ಪ್ರಸನ್ನ ಕೆರೆಕೈ, ರಾಜು ತಲ್ಲೂರು, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ವಿ.ಮಹೇಶ, ಅರವಿಂದ ರಾಯ್ಕರ್‌, ಎಸ್‌.ದತ್ತಾತ್ರಿ, ಕುಪೇಂದ್ರ ರೆಡ್ಡಿ, ಮಾಜಿ ಶಾಸಕ ಸ್ವಾಮಿರಾವ್‌, ಲೋಕನಾಥ ಬಿಳಿಸಿರಿ, ಗಣೇಶಪ್ರಸಾದ, ಎಂ.ಹರನಾಥರಾವ್‌, ಯು.ಎಚ್‌. ರಾಮಪ್ಪ, ಜ್ಯೋತಿಪ್ರಕಾಶ್‌ ಮೊದಲಾದವರು ಇದ್ದರು.

click me!