ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂದು ಎಲ್ಲಿಯಾದರೂ ಹೇಳಿದ್ದೀನಾ? ಹಾವೇರಿ–ಗದಗ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತೇನೆ ಎಂಬುದು ಮಾಧ್ಯಮದ ಸೃಷ್ಟಿ. ನಾನು ಲೋಕಸಭೆ ಚುನಾವಣೆಗೆ ನಿಲ್ಲೋ ಪ್ರಶ್ನೆಯೇ ಇಲ್ಲ. ಅಭ್ಯರ್ಥಿ ಆಯ್ಕೆಯನ್ನು ಕೇಂದ್ರದಲ್ಲಿ ಪಕ್ಷ ತೀರ್ಮಾನಿಸುತ್ತದೆ: ಶಾಸಕ ಬಸವರಾಜ ಬೊಮ್ಮಾಯಿ
ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ(ಸೆ.09): ಲೋಕಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಲ್ಲ ಎನ್ನುವ ಮೂಲಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ರಾಜಕೀಯದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆಗೆ ಫುಲ್ ಸ್ಟಾಪ್ ಇಡೋ ಪ್ರಯತ್ನ ಮಾಡಿದ್ದಾರೆ.
undefined
ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂದು ಎಲ್ಲಿಯಾದರೂ ಹೇಳಿದ್ದೀನಾ? ಹಾವೇರಿ–ಗದಗ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತೇನೆ ಎಂಬುದು ಮಾಧ್ಯಮದ ಸೃಷ್ಟಿ. ನಾನು ಲೋಕಸಭೆ ಚುನಾವಣೆಗೆ ನಿಲ್ಲೋ ಪ್ರಶ್ನೆಯೇ ಇಲ್ಲ. ಅಭ್ಯರ್ಥಿ ಆಯ್ಕೆಯನ್ನು ಕೇಂದ್ರದಲ್ಲಿ ಪಕ್ಷ ತೀರ್ಮಾನಿಸುತ್ತದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರೇ ಬರಗಾಲ ಘೋಷಣೆ ಮಾಡಿ: ಬೊಮ್ಮಾಯಿ
ಹಾವೇರಿ–ಗದಗ ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಪಕ್ಷದ ಅಧ್ಯಕ್ಷರು ಪದಾಧಿಕಾರಿಗಳು ಸೇರಿ ಕೋರ್ ಸಮಿತಿ ರಚಿಸಬೇಕು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಜೊತೆ ಚರ್ಚೆ ಮಾಡಿದ್ದೇವೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ, ಯುವಕರಿಗೆ, ಮಹಿಳೆಯರಿಗೆ, ಒಬಿಸಿಯವರಿಗೆ ಹೆಚ್ಚಿನ ಪ್ರಧಾನ್ಯತೆ ಕೊಡಲು ನಿರ್ಣಯ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ವಿರುದ್ಧ ಹೋರಾಟ
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ದ ಜನಾಂದೋಲನ ರೂಪಿಸುವ ಬಗ್ಗೆಯೂ ಚರ್ಚೆ ಆಯಿತು. ಹಲವು ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಆಡಳಿತದ ಪಕ್ಷದ ಶಾಸಕರೇ ಪತ್ರ ಬರೆದಿದ್ದಾರೆ. ಬಿಜೆಪಿ ಶಾಸಕರ ಬಗ್ಗೆ ಮತ್ತು ಅವರ ಕ್ಷೇತ್ರಗಳ ಬಗ್ಗೆ ಸರ್ಕಾರ ತಾರತಮ್ಯ ತೋರಿಸುತ್ತಿದೆ ಎಂದು ಆರೋಪಿಸಿದರು.
ಬರೀ ಭಾಷಣ ಮಾಡಿ, ರೈತರ ಮೂಗಿಗೆ ತುಪ್ಪ ಹಚ್ಚುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಬಗ್ಗೆ ಪ್ರೀತಿಯಿಂದ ಮಾತನಾಡುವ ಕಾಂಗ್ರೆಸ್‌ನವರು ಸಮಾಜ ಕಲ್ಯಾಣ ಇಲಾಖೆಯ ₹11 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದು ಇವರ ಬದ್ಧತೆಯಾ? ನಾವು ಕೊಟ್ಟ ಕೇಂದ್ರ ಸರ್ಕಾರದ ಅಕ್ಕಿಯನ್ನೂ ಜನರಿಗೆ ಪೂರ್ಣ ಪ್ರಮಾಣದಲ್ಲಿ ಕೊಡುತ್ತಿಲ್ಲ. ಪಡಿತರ ಚೀಟಿ ರದ್ದು ಮಾಡಿದ್ರು, ಗೃಹಜ್ಯೋತಿ ಜಾರಿಗೆ ತಂದು ವಿದ್ಯುತ್ ಕಡಿತ ಮಾಡಿದ್ರು, ಡಬಲ್ ಬಿಲ್ ಬರ್ತಾ ಇದೆ ಎಂದು ವಾಗ್ದಾಳಿ ನಡೆಸಿದರು.
‘ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಟ್ರಿಬುನಲ್ ಮಾಡಿ ಅಂತ ಅಫಿಡವಿಟ್ ಕೊಟ್ಟಿದ್ರು. ಅದರ ಬಗ್ಗೆ ಸಿದ್ದರಾಮಯ್ಯ ಏಕೆ ಮಾತಾಡಲ್ಲ?. ಯೋಜನೆ ಆಗಬಾರದು ಅಂತ ಗೋಡೆ ಕಟ್ಟಿದರೆ, ನೀರು ಹೆಂಗೆ ಬರುತ್ತೆ? ಕ್ಲಿಯರೆನ್ಸ್ ಕೊಡೋ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲೇ ಇದೆ. ಮೊದಲು ಅದನ್ನು ಮಾಡಲಿ ಎಂದು ಕುಟುಕಿದರು.
ಜೆಡಿಎಸ್ ಮೈತ್ರಿ ಇಂಗಿತ ಇದೆ.ಆದರೆ ಸ್ಪಷ್ಟತೆ ಸಿಕ್ಕಿಲ್ಲ
ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ದೆಹಲಿಯಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಅನಿಷ್ಟ ಸರ್ಕಾರದ ವಿರುದ್ಧ ಜಂಟಿ ಹೋರಾಟ ಮಾಡುವ ಭಾವನೆ ಎಲ್ಲರಿಗೂ ಇದೆ. ಅಮಿತ್ ಶಾ- ದೇವೇಗೌಡರ ಭೇಟಿ ಸ್ವಾಗತಾರ್ಹ. ಜೆಡಿಎಸ್‌ನವರೂ ಸ್ಪಷ್ಟವಾಗಿ ಏನೂ ಹೇಳ್ತಾ ಇಲ್ಲ. ಕೆಲವೇ ವಾರಗಳಲ್ಲಿ ಅಂಕಿ ಸಂಖ್ಯೆ ಸ್ಪಷ್ಟ ಆಗಲಿದೆ. ವಿಪಕ್ಷ ನಾಯಕ ಸ್ಥಾನ ಯಾಕೆ ವಿಳಂಬ ಆಗ್ತಾ ಇದೆ ಅಂತ ಯಾರಿಗೂ ಗೊತ್ತಿಲ್ಲ. ರಾಜ್ಯಾದ್ಯಕ್ಷ ಹಾಗೂ ವಿಪಕ್ಷ ನಾಯಕ ಎರಡೂ ಒಟ್ಟಿಗೆ ಮಾಡಲು ಸಮಯ ಹಿಡಿದಿರಬಹುದು ಅನಿಸುತ್ತದೆ’ ಎಂದರು.