ಸಿದ್ದು ಮತ್ತೆ ವಕೀಲ?| ವಕೀಲಿಕೆ ಸನ್ನದು ನವೀಕರಣಕ್ಕೆ ಅರ್ಜಿ ಸಾಧ್ಯತೆ| ಬಾರ್ ಕೌನ್ಸಿಲ್‌ನಲ್ಲಿ ನೋಂದಣಿಯಾದರೆ ಕೋರ್ಟ್‌ನಲ್ಲಿ ವಾದಿಸಲು ಅವಕಾಶ| 1983ರ ನಂತರ ಸಿದ್ದರಾಮಯ್ಯ ಕೋರ್ಟ್‌ನಲ್ಲಿ ವಾದ ಮಂಡಿಸಿಲ್ಲ| ‘ಫ್ರೀ ಕಾಶ್ಮೀರ್’ ನಳಿನಿ ಪ್ರಕರಣದಿಂದ ಮತ್ತೆ ವಕೀಲಿಕೆಯಲ್ಲಿ ಆಸಕ್ತಿ
ಬೆಂಗಳೂರು[ಜ.26]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಕೀಲಿಕೆ ಸನ್ನದು ನವೀಕರಿಸಲು ವಕೀಲರ ಪರಿಷತ್ತಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಹುದ್ದೆಗೇರಿದಾಗ ಸ್ವಯಂಪ್ರೇರಿತವಾಗಿ ರಾಜ್ಯ ವಕೀಲರ ಪರಿಷತ್‌ಗೆ ಹಿಂದಿರುಗಿಸಿದ್ದ ವಕೀಲರ ಸನ್ನದು ಪಡೆಯಲು ಮತ್ತೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ತಮ್ಮ ಕಕ್ಷೀದಾರರ ಪರ ವಾದ ಮಂಡಿಸಲು ರಾಜ್ಯ ವಕೀಲರ ಪರಿಷತ್ ಬಳಿ ವಕೀಲರ ಸನ್ನದು (ಬಾರ್ ಕೌನ್ಸಿಲ್ ನೋಂದಣಿ) ಪಡೆಯಬೇಕು.
ಇಲ್ಲದಿದ್ದರೆ, ತಮ್ಮ ವೈಯಕ್ತಿಕ ಪ್ರಕರಣಗಳಲ್ಲಿ ಮಾತ್ರ ವಾದ ಮಂಡಿಸಲು ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಸನ್ನದು ನವೀಕರಿಸಲು ಪರಿಷತ್ತಿಗೆ ಅರ್ಜಿ ಸಲ್ಲಿಸುವ ಚಿಂತನೆ ಹೊಂದಿದ್ದಾರೆ ಎನ್ನಲಾಗಿದೆ.
KPCC ಹುದ್ದೆ: ವೇಣುಗೋಪಾಲ್-ಡಿಕೆಶಿ ಸಭೆಯ ಮಾತುಕತೆ ಬಹಿರಂಗ
ಸಿದ್ದರಾಮಯ್ಯ ಅವರು 1973ರಿಂದ ವಕೀಲರಾಗಿ ವೃತ್ತಿ ಆರಂಭಿಸಿದ್ದರು. 1973ರಿಂದ 1983ರವರೆಗೆ ದಶಕದ ಕಾಲ ವಕೀಲಿಕೆ ವೃತ್ತಿಯಲ್ಲಿ ತೊಡಗಿದ್ದರು. ಕ್ರಿಮಿನಲ್ ಪ್ರಕರಣಗಳನ್ನು ಹೆಚ್ಚಾಗಿ ಕೈಗೆತ್ತಿಕೊಂಡು ತಮ್ಮ ಕಕ್ಷೀದಾರರ ಪರ ವಾದ ಮಂಡಿಸುತ್ತಿದ್ದರು. ಚಿಕ್ಕ ಬೋರಯ್ಯ ಎಂಬುವವರು ಸಿದ್ದರಾಮಯ್ಯ ಅವರಿಗೆ ಹಿರಿಯ ವಕೀಲರಾಗಿದ್ದರು. 1983ರ ಮಾಚ್‌ರ್‍ನಲ್ಲಿ ಕೊನೆಯ ಪ್ರಕರಣದಲ್ಲಿ ವಾದ ಮಂಡಿಸಿದ್ದ ಅವರು, ಬಳಿಕ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದರು.
ವಕೀಲರಾಗಿ ಪ್ರಕರಣಗಳಲ್ಲಿ ವಾದ ಮಂಡಿಸದಿದ್ದರೂ ವಕೀಲಿಕೆ ಕ್ಷೇತ್ರದಿಂದ ದೂರವಾಗಿರಲಿಲ್ಲ. ಹೀಗಾಗಿ ವಕೀಲ ಸನ್ನದು ಹೊಂದಿದ್ದರು. ಮುಖ್ಯಮಂತ್ರಿಯಾದ ಬಳಿಕ ತಮ್ಮ ವಕೀಲ ಸನ್ನದನ್ನು ರಾಜ್ಯ ವಕೀಲರ ಪರಿಷತ್‌ಗೆ ಒಪ್ಪಿಸಿದ್ದರು. ಇದೀಗ ‘ಫ್ರೀ ಕಾಶ್ಮೀರ್’ ಎಂದು ಪ್ಲಕಾರ್ಡ್ ಹಿಡಿದು ದೇಶದ್ರೋಹ ಆರೋಪ ಎದುರಿಸುತ್ತಿರುವ ನಳಿನಿ ಪ್ರಕರಣದಿಂದ ಮತ್ತೆ ವಕೀಲರ ಸನ್ನದು ಪಡೆಯಲು ಸಿದ್ದರಾಮಯ್ಯ ಆಸಕ್ತಿ ತೋರಿದ್ದಾರೆ. ಆದರೆ ನಳಿನಿ ಪರ ಅವರು ವಕಾಲತ್ತು ವಹಿಸುವುದಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ.
RSS ಕಾರ್ಯದರ್ಶಿಯಿಂದ ಸೋತ ಅಭ್ಯರ್ಥಿಗೆ ಸಚಿವ ಸ್ಥಾನದ ಭರವಸೆ
ಹೀಗಾಗಿ ತಮ್ಮ ಆಪ್ತ ವಕೀಲರಿಂದ ವಕೀಲರ ಸನ್ನದು (ಬಾರ್ ಕೌನ್ಸಿಲ್ ನೋಂದಣಿ) ಪಡೆಯಲು ಅರ್ಜಿ ಸಿದ್ಧಪಡಿಸಲು ತಿಳಿಸಿದ್ದು, ಸದ್ಯದಲ್ಲೇ ರಾಜ್ಯ ವಕೀಲರ ಪರಿಷತ್‌ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.