ಸಂಪುಟ ಜ.29ಕ್ಕೋ, ಫೆ.8ರ ನಂತರವೋ?: ಬಿಎಸ್‌ವೈ, ಸಂತೋಷ್‌ ಸಮಾಲೋಚನೆ!

Published : Jan 26, 2020, 07:37 AM ISTUpdated : Jan 26, 2020, 08:02 AM IST
ಸಂಪುಟ ಜ.29ಕ್ಕೋ, ಫೆ.8ರ ನಂತರವೋ?: ಬಿಎಸ್‌ವೈ, ಸಂತೋಷ್‌ ಸಮಾಲೋಚನೆ!

ಸಾರಾಂಶ

ಸಂಪುಟ ಜ.29ಕ್ಕೋ, ಫೆ.8ರ ನಂತರವೋ?| ಬಿಎಸ್‌ವೈ, ಬಿ.ಎಲ್‌.ಸಂತೋಷ್‌ ಭೇಟಿ, ಸಮಾಲೋಚನೆ| ಈಗಲೇ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಒಲವು| ತರಾತುರಿ ಬೇಡ, ನಡ್ಡಾ ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಿ| ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್‌ನಿಂದ ಸಲಹೆ ರವಾನೆ

ಬೆಂಗಳೂರು[ಜ.26]: ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಈ ತಿಂಗಳಾಂತ್ಯಕ್ಕೆ ನಡೆಯಲಿದೆಯೇ ಅಥವಾ ದೆಹಲಿ ವಿಧಾನಸಭಾ ಚುನಾವಣೆ ಬಳಿಕ ನಡೆಯಲಿದೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂಬ ಒತ್ತಡ ಮೂಡಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಂಗಳಾಂತ್ಯಕ್ಕೆ ವಿಸ್ತರಣೆ ಮಾಡಲು ಆಸಕ್ತಿ ತೋರಿದ್ದಾರೆ. ಸಾಧ್ಯವಾದರೆ ಈ ತಿಂಗಳ 29ರಂದು ಅಂದರೆ ಬುಧವಾರ ವಿಸ್ತರಣೆ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ, ಮುಖ್ಯಮಂತ್ರಿಗಳ ಇಂಗಿತಕ್ಕೆ ಹೈಕಮಾಂಡ್‌ ಇನ್ನೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಸಂಪುಟ ವಿಸ್ತರಣೆಯನ್ನು ತರಾತುರಿಯಲ್ಲಿ ಮಾಡುವುದು ಬೇಡ ಎಂಬುದೇ ಈಗಲೂ ಹೈಕಮಾಂಡ್‌ನ ಅಭಿಪ್ರಾಯ.

ಸಿಎಂಗೆ ವಚನಭ್ರಷ್ಟ ಕಳಂಕ ಅಂಟಿಸಲು ಸೋತವರ ಪ್ರಯತ್ನ?

ದೆಹಲಿ ಚುನಾವಣೆಯು ಫೆ.8ಕ್ಕೆ ಮುಕ್ತಾಯವಾಗಲಿದ್ದು, ಚುನಾವಣೆಯ ಬಳಿಕ ವಿಸ್ತರಣೆ ಕುರಿತು ವಿಸ್ತೃತವಾಗಿ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಬಹುದು ಎಂಬ ಸಲಹೆಯನ್ನು ಕೇಂದ್ರದ ನಾಯಕರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಾವೋಸ್‌ಗೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ ಶುಕ್ರವಾರವಷ್ಟೇ ರಾಜ್ಯಕ್ಕೆ ಹಿಂತಿರುಗಿದ್ದಾರೆ. ಅವರು ವಾಪಸಾಗುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಪ್ರಯತ್ನ ಗರಿಗೆದರಿದ್ದು, ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ….ಸಂತೋಷ್‌ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಸಂತೋಷ್‌ ಅವರು ದೆಹಲಿಗೆ ಮರಳುವ ಮೊದಲು ಶನಿವಾರ ಬೆಳಗ್ಗೆ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ 15 ನಿಮಿಷ ಸಮಾಲೋಚನೆ ನಡೆಸಿದರು. ಇದು ಸಂಪುಟ ವಿಸ್ತರಣೆ ಕುರಿತು ಮತ್ತಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನಡ್ಡಾ ಸೂಚನೆಯಂತೆ ಬಿಎಸ್‌ವೈ ಭೇಟಿ:

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ಮೇರೆಗೆ ಸಂತೋಷ್‌ ಅವರು ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ್ದು, ಉಪ ಚುನಾವಣೆಯಲ್ಲಿ ಗೆದ್ದಿರುವವರ ಪೈಕಿ ಎಷ್ಟುಮಂದಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಮೂಲ ಬಿಜೆಪಿಗರಿಗೆ ಎಷ್ಟುಸ್ಥಾನ ನೀಡಬೇಕು ಎಂಬುದರ ಕುರಿತು ಸಮಾಲೋಚನೆ ನಡೆದಿದೆ ಎಂದು ಹೇಳಲಾಗಿದೆ. ಯಡಿಯೂರಪ್ಪ ಜತೆಗೆ ಮಾತುಕತೆ ನಡೆಸಿದ ಬಳಿಕ ದೆಹಲಿಗೆ ತೆರಳಿರುವ ಸಂತೋಷ್‌ ಅವರು ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆಯ ವಿಷಯದ ಕುರಿತು ಮಾಹಿತಿ ನೀಡಲಿದ್ದಾರೆ. ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸ್ಪಷ್ಟಚಿತ್ರಣ ಗೊತ್ತಾಗಲಿದೆ ಎಂದು ಹೇಳಲಾಗಿದೆ.

ಈ ನಡುವೆ, ಭಾನುವಾರ ಮತ್ತು ಸೋಮವಾರ ರಾಜ್ಯದಲ್ಲಿ ಯಡಿಯೂರಪ್ಪ ಅವರ ಕಾರ್ಯಕ್ರಮಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರದ ಬಳಿಕ ದೆಹಲಿಗೆ ತೆರಳುವ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ ಇದೆ. ಕೇಂದ್ರದ ವರಿಷ್ಠರು ಭೇಟಿಗೆ ಕಾಲಾವಕಾಶ ನೀಡಿದರೆ ಅವರೊಂದಿಗೆ ಚರ್ಚಿಸಿ ಅದಷ್ಟುಬೇಗ ಸಂಪುಟ ವಿಸ್ತರಣೆ ಮಾಡುವ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 11 ಶಾಸಕರಿಗೂ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಅವರಿಗೆ ಒಲವಿದ್ದರೂ ಬಿಜೆಪಿಯ ಮತ್ತೊಂದು ಬಣದಲ್ಲಿ ಹೆಚ್ಚಿನ ಆಸಕ್ತಿ ಇಲ್ಲ. ಮೂಲ ಬಿಜೆಪಿಗರಿಗೂ ಸಹ ಸಚಿವ ಸ್ಥಾನ ಸಿಗಬೇಕು ಎಂಬ ಒತ್ತಡ ಹೇರಲಾಗಿದೆ.

'ಶ್ರೀರಾಮುಲು DCM ಆಗಬೇಕು ಅನ್ನೋದು ಜನರ ಬೇಡಿಕೆ,ನಾನೇಕೆ ಅಲ್ಲಗಳೆಯಲಿ'

2-3 ಮೂಲ ಬಿಜೆಪಿಗರಿಗೆ ಮಂತ್ರಿಗಿರಿ:

ಮೂಲ ಬಿಜೆಪಿಗರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡ ಇರುವ ಕಾರಣಕ್ಕಾಗಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 11 ಶಾಸಕರ ಪೈಕಿ ಕೆಲವರನ್ನು ಕೈಬಿಡುವ ಆಲೋಚನೆ ಪ್ರಾರಂಭವಾಗಿದೆ. ಒಂಭತ್ತು ನೂತನ ಶಾಸಕರಿಗೆ ಮತ್ತು 2-3 ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ನೀಡುವುದು ಖಚಿತವಾದರೆ ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರ ಮನವೊಲಿಕೆ ಮಾಡುವ ಪ್ರಯತ್ನ ನಡೆಸಲಾಗುವುದು. ಒಂದು ವೇಳೆ ಮಹೇಶ್‌ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್‌ ಇದಕ್ಕೆ ಸಹಮತ ವ್ಯಕ್ತಪಡಿಸದಿದ್ದರೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಶಾಸಕರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ಹೈಕಮಾಂಡ್‌ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.

‘ಗೆದ್ದವರಿಗೆ ಮಂತ್ರಿಗಿರಿ ನೀಡದಿದ್ದರೆ ಸಿಎಂಗೆ ವಚನಭ್ರಷ್ಟ ಹಣೆಪಟ್ಟಿ’

ಈ ಎಲ್ಲಾ ಬೆಳವಣಿಗೆ ಮಧ್ಯೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಆಪ್ತರ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಶಾಸಕರಿಗೆ ಯಾವುದೇ ಆತಂಕಕ್ಕೊಳಗಾಗುವ ಅಗತ್ಯ ಇಲ್ಲ ಎಂದು ಅಭಯ ನೀಡಿದ್ದಾರೆ. ಶಾಸಕ ಬಿ.ಸಿ.ಪಾಟೀಲ್ ಭೇಟಿ ವೇಳೆಯಲ್ಲಿಯೂ ಸಹ ಸಚಿವ ಸ್ಥಾನದ ಬಗ್ಗೆ ಆತಂಕ ಬೇಡ ಎಂದಿದ್ದಾರೆ. ವರಿಷ್ಠರೊಂದಿಗೆ ಮಾತುಕತೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈಗಾಗಲೇ ನೀಡಿದ ಆಶ್ವಾಸನೆಯಂತೆ ನಡೆದುಕೊಳ್ಳಲಾಗುವುದು. ವಿಳಂಬ ಮಾಡದೆ ಸಾಧ್ಯವಾದಷ್ಟುಬೇಗ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಂದೇಶ ರವಾನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ