ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಎಂ.ನಿಂಬಣ್ಣವರ್ ದೈವಾದೀನರಾಗಿದ್ದಾರೆ.
ಬೆಂಗಳೂರು (ಜು.9): ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಎಂ.ನಿಂಬಣ್ಣವರ್ (76) (C M Nimbannavar) ದೈವಾದೀನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದ ರೈತ ಕುಟುಂಬದಲ್ಲಿ 1947ರಲ್ಲಿ ಜನಿಸಿದ್ದಾರೆ. ಹುಬ್ಬಳ್ಳಿಗೆ ಮೃತದೇಹ ಸಾಗಿಸಲಿದ್ದು, ನಾಳೆ ಮೂರು ಗಂಟಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಸಿ.ಎಂ.ನಿಂಬಣ್ಣವರ್ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದ ರೈತ ಕುಟುಂಬದಲ್ಲಿ 1947ರಲ್ಲಿ ಜನಿಸಿದದ್ದು, ಧಾರವಾಡದ ಜೆಎಸ್‌ಎಸ್ ಬನಶಂಕರಿ ಆರ್ಟ್ಸ್ ಕಾಲೇಜ್‌ನಿಂದ ಇಂಗ್ಲಿಷ್ ವಿಷಯದಲ್ಲಿ ಬಿಎ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಹಾಗೂ ಎಲ್‌ಎಲ್‌ಬಿ ಪದವಿ, ಮೈಸೂರು ವಿವಿಯಿಂದ B.Ed. ಪದವಿ ಮಾಡಿದ್ದಾರೆ.
ನಂತರ ಕಲಘಟಗಿ ತಾಲೂಕಿನ ಮಿಶ್ರೀಕೋಟಿಯಲ್ಲಿರುವ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ 1970ರಲ್ಲಿ ಇಂಗ್ಲಿಷ್ ಶಿಕ್ಷಕರಾಗಿ, ಬಳಿಕ ಪದೋನ್ನತಿ ಹೊಂದಿ ಮುಖ್ಯೋಪಾಧ್ಯಾಯರಾಗಿದ್ದರು. ಬಳಿಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.1995 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಸಕ್ರೀಯ ರಾಜಕಾರಣದಲ್ಲಿದ್ದರು.