3 ವರ್ಷ ಬಿಎಸ್‌ವೈ ರಾಜ್ಯದ ಸಿಎಂ, ಬದಲಾವಣೆ ಮಾತೇ ಇಲ್ಲ: ಗುಡುಗಿದ ಬಿಜೆಪಿ ಸಾರಥಿ!

By Suvarna News  |  First Published Oct 21, 2020, 12:56 PM IST

ರಾಜ್ಯ ಬಿಜೆಪಿಯಿಂದ ಅಧಿಕೃತ ಟ್ವೀಟ್| ರಾಜ್ಯದಲ್ಲಿ ‌ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ | ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪನವರೇ ಸಿಎಂ ಆಗಿರಲಿದ್ದಾರೆ| ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಶಿಸ್ತು ಕ್ರಮ ಜರಗಿಸುತ್ತೇವೆ | ಯತ್ನಾಳ್ ಹೇಳಿಕೆಗೆ ನಳೀನ್ ಕುಮಾರ್ ಕಟೀಲ್ ಎಚ್ಚರಿಕೆ


ಬೆಂಗಳೂರು(ಅ.21): ಆರ್‌ಆರ್‌ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆ ಹೊಸ್ತಿಲಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಎಂ ಬದಲಾವಣೆ ಸಂಬಂಧ ನೀಡಿದ್ದ ಹೇಳಿಕೆ ಪಕ್ಷಕ್ಕೆ ಭಾರೀ ಮುಜುಗರವುಂಟು ಮಾಡಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂಬ ಮಾತುಗಳೂ ಕೇಳಿ ಬಂದಿದ್ದವು. ಆದರೀಗ ಈ ಸಂಬಂಧ ರಾಜ್ಯ ಬಿಜೆಪಿ ಸಾರಥಿ ನಳಿನ್ ಕುಮಾರ್ ಸ್ಪಷ್ಟನೆ ನೀಡಿದ್ದು, ಮುಂದಿನ ಮೂರು ವರ್ಷ ಸಿಎಂ ಬದಲಾವಣೆ ಮಾತೇ ಇಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

ಹೌದು ಯತ್ನಾಳ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಅಧ್ಯಕ್ಷ ನಳಿನ್ ಕುಮಾರ್ ಹೇಳಿಕೆಯನ್ನು, ಬಿಜೆಪಿ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ 'ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಮೂರು ವರ್ಷಗಳ ಕಾಲ ಶ್ರೀ 
ಬಿ. ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ' ಎಂದು ಖಡಕ್‌ ಆಗಿ ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. 

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಮೂರು ವರ್ಷಗಳ ಕಾಲ ಶ್ರೀ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ.

- ಶ್ರೀ , ಬಿಜೆಪಿ ರಾಜ್ಯಾಧ್ಯಕ್ಷರು pic.twitter.com/avwZEvM9TT

— BJP Karnataka (@BJP4Karnataka)

Latest Videos

undefined

ಏನಿದು ವಿವಾದ?

ಸೋಮವಾರ ರಾತ್ರಿ ವಿಜಯಪುರ ನಗರದ ವಾರ್ಡ್‌ ನಂ.3ರಲ್ಲಿ ಶಿಂಧೆ ಕಾಲೋನಿಯಲ್ಲಿ ಹನುಮಾನ್‌ ದೇವಸ್ಥಾನದ ಕಾಂಪೌಂಡ್‌ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಯಡಿಯೂರಪ್ಪ ಅವರು ಕೇವಲ ಶಿವಮೊಗ್ಗಕ್ಕೆ ಅನುದಾನ ತೆಗೆದುಕೊಂಡು ಹೋಗುತ್ತಿದ್ದಾರೆ. ಇದೇ ಕಾರಣಕ್ಕೆ ‘ಯಡಿಯೂರಪ್ಪ ಶಿವಮೊಗ್ಗ ಮುಖ್ಯಮಂತ್ರಿಯೋ, ರಾಜ್ಯದ ಮುಖ್ಯಮಂತ್ರಿಯೋ’ ಎಂದು ಶಾಸಕ ಉಮೇಶ ಕತ್ತಿ ಪ್ರಶ್ನಿಸಿದ್ದಾರೆ. ಇನ್ನು ವಿಜಯಪುರ ಕ್ಷೇತ್ರಕ್ಕೆ ಮಂಜೂರಾದ .125 ಕೋಟಿ ಅನುದಾನವನ್ನು ಯಡಿಯೂರಪ್ಪ ಕಡಿತ ಮಾಡಿದ್ದಾರೆ. ಈ ವಿಷಯದಲ್ಲಿ ನನಗೂ, ಅವರಿಗೂ ಜಗಳ ಶುರುವಾಗಿದೆ. ಏನೇ ಆದರೂ ನಾನಂತು ಕಡಿತಗೊಳಿಸಿದ ಅನುದಾನ ಮರಳಿ ಪಡೆದುಕೊಂಡೇ ತೀರುತ್ತೇನೆ ಎಂದು ಹೇಳಿದ್ದರು.

ಅಲ್ಲದೇ ಉತ್ತರ ಕರ್ನಾಟಕದ ಮತದಾರರೇ 100 ಮಂದಿ ಬಿಜೆಪಿ ಶಾಸಕರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸುತ್ತಾರೆ. ಉಳಿದ ಭಾಗದಿಂದ ಕೇವಲ 15 ಬಿಜೆಪಿ ಶಾಸಕರು ಆಯ್ಕೆಯಾಗುತ್ತಾರೆ. ಆದರೆ, ಮುಖ್ಯಮಂತ್ರಿ ಮಾತ್ರ ಇವರಲ್ಲೇ ಒಬ್ಬರು ಆಗುತ್ತಾರೆ. ಆದರೆ ಮುಂದಿನಬಾರಿ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗುವುದು ಪಕ್ಕಾ. ಪ್ರಧಾನಿ ಮೋದಿ ಕೂಡ ಉತ್ತರ ಕರ್ನಾಟಕವರನ್ನೇ ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಪಕ್ಷದ ವರಿಷ್ಠರಿಗೂ ಯಡಿಯೂರಪ್ಪ ಏನೆಂಬುದು ಗೊತ್ತಾಗಿದೆ. ಇನ್ನು ಬಹಳ ದಿನ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಉಳಿಯುವುದಿಲ್ಲ ಎಂದು ಹೇಳಿದ್ದರು.

ಯತ್ನಾಳರ ಈ ಹೇಳಿಗೆಡ ಉಪಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಬಹಿರಂಗವಾಗೇ ಅಸಮಾಧಾನ ಪ್ರಕಟಿಸಿದ್ದ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆಯೂ ಒತ್ತಾಯ ಮಾಡಿದ್ದರು.

click me!