
ಬೆಂಗಳೂರು/ರಾಮನಗರ: ರಾಜಕೀಯದಲ್ಲಿ ಸಮಯಪ್ರಜ್ಞೆ ಮತ್ತು ತಂತ್ರಗಾರಿಕೆ ಬಹಳ ಮುಖ್ಯ ಎಂಬ ಮಾತೊಂದು ಇದೆ. ಈ ಹಿಂದೆ ದೆಹಲಿಯಲ್ಲಿ 'ನೀಟ್' ಅಕ್ರಮದ ವಿರುದ್ಧ ಜೆನ್‌ಜಿ (Gen-Z) ಯುವಜನತೆ ಹೋರಾಟಕ್ಕಿಳಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಸಂಚಲನ ಮೂಡಿಸಿದ್ದರು. ಈಗ ಅದೇ ಮಾದರಿಯ ತಂತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಸರಿಸಿದ್ದಾರೆ ಎಂಬ ಅನುಮಾನ ಮೂಡಿದೆ.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಇಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಪಡೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಎಚ್ಚೆತ್ತ ಡಿ.ಕೆ. ಶಿವಕುಮಾರ್, ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಸಂದೇಶವೊಂದನ್ನು ಹರಿಬಿಡುವ ಮೂಲಕ ಪ್ರತಿಪಕ್ಷಗಳ ಅಸ್ತ್ರವನ್ನ ಕುಗ್ಗಿಸಲು ಪ್ರಯತ್ನಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ? ಸರ್ಕಾರದ ಸ್ಪಷ್ಟನೆ ಇಲ್ಲಿದೆ
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದೆ. ಇದು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ 'ಅತ್ಯಾಧುನಿಕ ಎಐ ಸಿಟಿ' (AI City) ಆಗಿ ಅಭಿವೃದ್ಧಿ ಹೊಂದಲಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದ್ದಾರೆ.
ರೈತರ ಹಿತರಕ್ಷಣೆಯೇ ನಮ್ಮ ಆದ್ಯತೆ ಎಂದಿರುವ ಡಿ.ಕೆ.ಎಸ್, ಪರಿಹಾರದ ಮೊತ್ತದ ಮೂಲಕ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿತ್ತು. ಆದರೆ ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಹೇಳುವ ಮೂಲಕ ರೈತರ ಗಮನ ಸೆಳೆದಿದ್ದಾರೆ.
ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ ಶೇ. 50ರಷ್ಟು ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಮೂಲಕ ರೈತರು ಯೋಜನೆಯ ಪಾಲುದಾರರಾಗಬಹುದು ಎಂಬ ಆಫರ್ ನೀಡಿದ್ದಾರೆ.
ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವಿರೋಧ ಪಕ್ಷಗಳ 'ಬಲವಂತದ ಭೂಸ್ವಾಧೀನ' ಎಂಬ ಆರೋಪಕ್ಕೆ ಆರಂಭದಲ್ಲೇ ತಣ್ಣೀರೆರಚಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆಯು ಬೆಂಗಳೂರು ದಕ್ಷಿಣ ಜಿಲ್ಲೆಯ ಆರ್ಥಿಕ ಚಿತ್ರಣವನ್ನೇ ಬದಲಿಸಲಿದೆ. ಯುವಜನತೆಗೆ ಸಾವಿರಾರು ಉದ್ಯೋಗಾವಕಾಶ ಸೃಷ್ಟಿಸುವುದು ಮತ್ತು ಅನ್ನದಾತರಿಗೆ ಗೌರವಯುತ ಜೀವನ ಒದಗಿಸುವುದು ನಮ್ಮ ಗುರಿ ಎಂದು ಹೇಳಿರುವ ಡಿ.ಕೆ. ಶಿವಕುಮಾರ್, ಈ ಅಭಿವೃದ್ಧಿ ಕಾರ್ಯಕ್ಕೆ ಜನರ ಸಹಕಾರ ಕೋರಿದ್ದಾರೆ. ಒಟ್ಟಿನಲ್ಲಿ, ಪ್ರತಿಪಕ್ಷಗಳ ಪಾದಯಾತ್ರೆಗೆ ಕೌಂಟರ್ ನೀಡಲು ಡಿ.ಕೆ.ಶಿವಕುಮಾರ್ ಅವರು ಮೋದಿ ಮಾದರಿಯಲ್ಲೇ ಡಿಜಿಟಲ್ ಅಸ್ತ್ರ ಪ್ರಯೋಗಿಸಿದ್ದು ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.