Election Result 2022 ಬಿಜೆಪಿಗೆ ರಾಷ್ಟ್ರಪತಿ ಚುನಾವಣೆ ಅನಾಯಾಸ

By Kannadaprabha NewsFirst Published Mar 11, 2022, 5:15 AM IST
Highlights

ಬಿಜೆಡಿ, ಟಿಆರ್‌ಎಸ್‌, ವೈಎಸ್‌ಆರ್‌ ಬೆಂಬಲವಿಲ್ಲದೆ ಗೆಲ್ಲಬಹುದು

ಮಿತ್ರರ ಮೇಲೆ ಅವಲಂಬನೆ ಅನಿವಾರ್ಯತೆಯಂದ ಬಿಜೆಪಿ ಪಾರು

ರಾಜ್ಯಸಭೆಯಲ್ಲೂ ಬಿಜೆಪಿಗೆ ಅನುಕೂಲ

ನವದೆಹಲಿ (ಮಾ.10): ಉತ್ತರ ಪ್ರದೇಶದಲ್ಲಿ (Uttar Pradesh) ಭರ್ಜರಿ ಗೆಲುವು ಸಾಧಿಸಿರುವುದರಿಂದ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲೂ (presidential election) ಬಿಜೆಪಿ (BJP) ಅನಾಯಾಸವಾಗಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಶಕ್ತಿ ಪಡೆದುಕೊಂಡಿದೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (President Ram Nath Kovind) ಅವರ ಅವಧಿ ಜು.24ಕ್ಕೆ ಅಂತ್ಯಗೊಳ್ಳುತ್ತದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರು, ರಾಜ್ಯ ವಿಧಾನಸಭೆಗಳ ಸದಸ್ಯರು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಸದಸ್ಯರು ಮತದಾರರಾಗಿರುತ್ತಾರೆ. ವಿಧಾನಪರಿಷತ್‌ ಸದಸ್ಯರಿಗೆ ಮತ ಇಲ್ಲ. ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 10,98,903 ಮತಗಳು ಚಲಾವಣೆಯಾಗುತ್ತವೆ. ಅಭ್ಯರ್ಥಿ ಗೆಲ್ಲಲು ಶೇ.50ಕ್ಕಿಂತ ಹೆಚ್ಚು ಮತ ಪಡೆಯಬೇಕು. ಉತ್ತರ ಪ್ರದೇಶದ ಒಬ್ಬ ಶಾಸಕನಿಗೆ ದೇಶದಲ್ಲೇ ಅತಿಹೆಚ್ಚು, ಅಂದರೆ 208 ಮತಗಳಿವೆ. ಈಗ ಉತ್ತರ ಪ್ರದೇಶವನ್ನು, ಜೊತೆಗೆ ಉತ್ತರಾಖಂಡ, ಗೋವಾ ಹಾಗೂ ಮಣಿಪುರವನ್ನು ಬಿಜೆಪಿ ಗೆದ್ದಿರುವುದರಿಂದ ರಾಷ್ಟ್ರಪತಿ ಚುನಾವಣೆಯಲ್ಲೂ ಅನಾಯಾಸವಾಗಿ ಗೆಲ್ಲಲಿದೆ.

ಈಗಿನ ಪಂಚರಾಜ್ಯಗಳ ಚುನಾವಣೆಗೂ (Five State Election) ಮೊದಲು ಬಿಜೆಪಿ ಬಳಿ ರಾಷ್ಟ್ರಪತಿಯನ್ನು ಆಯ್ಕೆ ಮಾಡಿಕೊಳ್ಳಲು ಬೇಕಾದಷ್ಟುಮತಗಳಿದ್ದವು. ಉತ್ತರ ಪ್ರದೇಶದಲ್ಲಿ ಸೋತಿದ್ದರೆ ಬಿಜೆಡಿ, ಟಿಆರ್‌ಎಸ್‌, ವೈಎಸ್‌ಆರ್‌ ಪಕ್ಷಗಳ ಬೆಂಬಲ ಕೇಳಬೇಕಾಗುತ್ತಿತ್ತು. ಈಗ, ಪಂಚರಾಜ್ಯಗಳ ಚುನಾವಣೆಗೂ ಮೊದಲು ಇದ್ದ ಪರಿಸ್ಥಿತಿಯೇ ಮರುಕಳಿಸಿರುವುದರಿಂದ ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗಲಿದ್ದಾರೆ.

ರಾಜ್ಯಸಭೆಯಲ್ಲೂ ಬಿಜೆಪಿಗೆ ಅನುಕೂಲ: ಚುನಾವಣೆ ನಡೆದ ಪಂಚರಾಜ್ಯಗಳ ಪೈಕಿ ಮೊದಲಿನಂತೆಯೇ ನಾಲ್ಕು ರಾಜ್ಯಗಳನ್ನು ಬಿಜೆಪಿ ಗೆದ್ದಿರುವುದರಿಂದ ಈ ವರ್ಷ ಎದುರಾಗುವ ರಾಜ್ಯಸಭೆ ಚುನಾವಣೆಯಲ್ಲೂ ಬಿಜೆಪಿಗೆ ಅನುಕೂಲವಾಗಲಿದೆ.

ಈ ವರ್ಷ ರಾಜ್ಯಸಭೆಯ 75 ಸೀಟುಗಳು ತೆರವಾಗಲಿವೆ. ಅವುಗಳಲ್ಲಿ 68 ಸೀಟುಗಳಿಗೆ ಶಾಸಕರಿಂದಲೇ ಆಯ್ಕೆ ನಡೆಯಲಿದೆ. ಆ ಪೈಕಿ 19 ಸೀಟುಗಳು ಉತ್ತರ ಪ್ರದೇಶ (11), ಪಂಜಾಬ್‌ (7) ಹಾಗೂ ಉತ್ತರಾಖಂಡ (1)ದಲ್ಲಿವೆ. ಬಿಜೆಪಿಯೀಗ ಹೆಚ್ಚುಕಮ್ಮಿ ಮೊದಲಿನಷ್ಟೇ ಸೀಟುಗಳನ್ನು ಗೆದ್ದಿರುವುದರಿಂದ ರಾಜ್ಯಸಭೆಯಲ್ಲಿ ತನ್ನ ಪಕ್ಷದಿಂದ ತೆರವಾಗುವ ಅಷ್ಟೂಸೀಟುಗಳನ್ನು ಮತ್ತೆ ಗೆಲ್ಲಲು ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.

Election Result 2022 ಚನಿ to ಧಮಿ, ಪಂಚ ರಾಜ್ಯ ಚುನಾವಣೆಯಲ್ಲಿ ಹಾಲಿ, ಮಾಜಿ ಸಿಎಂಗೆ ಸೋಲಿನ ಕಹಿ!
ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆಯೇ ಇಲ್ಲವೇ ಎಂಬುದು ಇನ್ನಿತರ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದನ್ನು ಅವಲಂಬಿಸಿದೆ. ಇತರ ರಾಜ್ಯಗಳ ಪೈಕಿ ರಾಜ್ಯಸಭೆಯಲ್ಲಿ ತೆರವಾಗುವ ಹೆಚ್ಚಿನ ಸೀಟುಗಳು ಮಹಾರಾಷ್ಟ್ರ, ರಾಜಸ್ಥಾನ, ಬಿಹಾರ, ಜಾರ್ಖಂಡ, ಕೇರಳ, ಅಸ್ಸಾಂ, ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ತ್ರಿಪುರ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಹಿಮಾಚಲ ಪ್ರದೇಶಗಳಲ್ಲಿವೆ. ಈ ಪೈಕಿ ಹೆಚ್ಚಿನ ರಾಜ್ಯಗಳಲ್ಲಿ ಪ್ರಾದೇಶಿಕ ಅಥವಾ ಬಿಜೆಪಿಯೇತರ ಪಕ್ಷ ಅಧಿಕಾರದಲ್ಲಿದೆ. ಈ ಅಂಶ ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತ ಗಳಿಸುವುದಕ್ಕೆ ಅಡ್ಡಿಯಾಗಲಿದೆ.

UP Election Results: ಯುಪಿಯಲ್ಲಿ ಬಿಜೆಪಿ ಗೆಲುವು ಜಾತಿ ರಾಜಕಾರಣ ನಡೆಸುವವರಿಗೆ ದೊಡ್ಡ ಪಾಠ: ಮೋದಿ ಗುದ್ದು!
ನಮ್ಮ ಮುಂದಿನ ಗುರಿ ಹಿಮಾಚಲ: ಆಪ್‌
ಶಿಮ್ಲಾ:
ದೆಹಲಿಯ ನಂತರ ಪಂಜಾಬ್‌ನಲ್ಲಿ ಭರ್ಜರಿ ಜಯ ಸಾಧಿಸಿರುವ ಆಮ್‌ ಆದ್ಮಿ ಪಕ್ಷ, ಮುಂದಿನ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಗೆಲ್ಲುವ ಗುರಿ ಹೊಂದಿದೆ. ದೆಹಲಿಯಲ್ಲಿ ಕೇಜ್ರಿವಾಲ್‌ ನೀಡಿದ ವಿನೂತನ ಆಡಳಿತ ಮಾದರಿಯಿಂದಾಗಿ ಪಂಜಾಬ್‌ನಲ್ಲಿ ಗೆಲುವು ಸಾಧಿಸಿದೆ. ಇದೇ ಮಾದರಿಯನ್ನು ಬಳಸಿಕೊಂಡು ಹಿಮಾಚಲ ಪ್ರದೇಶದಲ್ಲೂ ಅಧಿಕಾರ ಹಿಡಿಯುವ ಗುರಿ ಹೊಂದಿದೆ. ಪಂಜಾಬ್‌ ಗೆಲುವಿನ ನಂತರ ಮಾತನಾಡಿದ ಆಮ್‌ ಆದ್ಮಿ ಪಕ್ಷದ ಹಿಮಾಚಲ ಪ್ರದೇಶದ ರಾಜ್ಯಾಧ್ಯಕ್ಷ ಅನೂಪ್‌ ಕೇಸರಿ, ‘ಸಾಂಪ್ರಾದಾಯಿಕ ರಾಜಕೀಯ ಪಕ್ಷಗಳಿಂದ ರಾಜ್ಯದ ಜನರು ಬೇಸರಗೊಂಡಿದ್ದಾರೆ. ಹಾಗಾಗಿ ಪಂಜಾಬ್‌ನಲ್ಲಿ ನಿರ್ಮಿಸಿದಂತಹ ಇತಿಹಾಸವನ್ನು ಹಿಮಾಚಲ ಪ್ರದೇಶದಲ್ಲೂ ನಿರ್ಮಿಸಲಿದೆ. ಮುಂದಿನ ಬಾರಿ ಪಂಜಾಬ್‌ ಸರ್ಕಾರ ರಚಿಸಲಿದೆ’ ಎಂದು ಹೇಳಿದ್ದಾರೆ.

click me!