ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಅಸಮಾಧಾನ ಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆಂಗಳೂರಿಗೆ ಆಗಮಿಸಿದ್ದು, ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಸೇರ್ಪಡೆಗೊಳಿಸಲು ಒಂದೆಡೆ ಕಸರತ್ತು ನಡೆಯುತ್ತಿದೆ.
ಬೆಂಗಳೂರು (ಏ.14): ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಅಸಮಾಧಾನ ಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಭೇಟಿ ಬಳಿಕ ಸಂಧಾನ ಸಫಲ ಆಗದೇ ಇದ್ದಲ್ಲಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದು, ಈ ಕಾರಣದಿಂದ ಸಂಜೆ ನಾಲ್ಕೂ ವರೆಗೆ ಪರಿಷತ್ ಸಭಾಪತಿ ಹೊರಟ್ಟಿ ಬಳಿ ಭೇಟಿಗೆ ಸಮಯ ಕೇಳಿದ್ದಾರೆ.
ಈ ನಡುವೆ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಸೇರ್ಪಡೆಗೊಳಿಸಲು ಒಂದೆಡೆ ಕಸರತ್ತು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಡಿಕೆ ಶಿವಕುಮಾರ್ ಅವರು ತಮ್ಮ ನಿವಾಸದಿಂದ ಖಾಸಗಿ ಸ್ಥಳಕ್ಕೆ ತೆರಳಿದ್ದಾರೆ. ಇನ್ನು ಸವದಿಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ ಹಟ್ಟಿಹೊಳಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಸವದಿ ಕಾಂಗ್ರೆಸ್ ಸೇರ್ಪಡೆಯ ಲಾಭ ನಷ್ಟದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬ ಹೆಚ್ಚು ಆಸಕ್ತಿ ಹೊಂದಿದೆ. ಈ ಬಗ್ಗೆ ಡಿಕೆಶಿವಕುಮಾರ್ ಗೆ ಮನವರಿಕೆ ಮಾಡಿಕೊಡಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ ಹಟ್ಟಿಹೊಳಿ. ಸವದಿ ಬೆಂಗಳೂರಿಗೆ ಆಗಮಿಸುತ್ತಿರುವ ಹೊತ್ತಲ್ಲೇ ರಹಸ್ಯ ಸ್ಥಳಕ್ಕೆ ಡಿಕೆಶಿವಕುಮಾರ್ ತೆರಳಿರುವುದು ಕುತೂಹಲ ಮೂಡಿಸಿದೆ.
ಇಂದು ಬೆಳಗ್ಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಸವದಿ ಬೆಳಗಾವಿಯ ಕಾಂಗ್ರೆಸ್ ಮುಖಂಡರ ಜೊತೆಗೆ ವಿಮಾನ ನಿಲ್ದಾಣದಲ್ಲಿ ಚರ್ಚೆ ನಡೆಸಿದ್ದರು. ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿ ಹಲವರ ಜೊತೆಗೆ ಚರ್ಚೆ ನಡೆಸಲಿದ್ದು, ಇಂದೇ ಬಿಜೆಪಿಗೆ ರಾಜೀನಾಮೆ ಸಲ್ಲಿಸಲಿದ್ದಾರೆನ್ನಲಾಗಿದೆ.
ನಾಳೆ ಬಿಜೆಪಿಗೆ ರಾಜೀನಾಮೆ, ವಿದಾಯ ಭಾಷಣದಲ್ಲಿ ಲಕ್ಷ್ಮಣ ಸವದಿ ಘೋಷಣೆ!
ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಮಾತನಾಡಿದ ಸವದಿ, ಬೆಂಗಳೂರಿಗೆ ಹೋಗಿ ಸಾಧಕ, ಬಾಧಕ ಚರ್ಚೆ ಮಾಡ್ತಿನಿ. ಬಳಿಕ ಒಂದು ನಿರ್ಣಯ ಮಾಡ್ತಿನಿ. ವಿಧಾನ ಪರಿಷತ್ ಸ್ಥಾನ ಪಕ್ಷಕ್ಕೆ ರಾಜೀನಾಮೆ ಕೊಡಬೇಕು. ಇನ್ನೂ ಹಂಗಿನಲ್ಲಿ ಇದ್ದೇನೆ, ಅದರಿಂದ ಹೊರಬರಬೇಕು. ಬಳಿಕ ಏನ್ ಮಾಡಬೇಕು ಎನ್ನುವ ತೀರ್ಮಾನ ಮಾಡ್ತಿನಿ. ಕಾಂಗ್ರೆಸ್, ಜೆಡಿಎಸ್ ನಿಂದ ಆಹ್ವಾನ ಇದೆ, ಸಂಜೆಯ ವರಗೆ ತೀರ್ಮಾನಕ್ಕೆ ಬರ್ತಿನಿ. ಏಪ್ರಿಲ್ 17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಕ್ಷೇತ್ರದ ಜನರ ಒಪ್ಪಿಗೆ ಪಡೆದಿದ್ದೇನೆ. ಖಾಸಗಿಯಾಗೂ ಅನೇಕರು ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಮನೆ ಬಿಟ್ಟು ಹೊರಗೆ ಬಂದ ಮೇಲೆ ಸಂಪರ್ಕ ಮಾಡಿದ್ರೆನು, ಬಿಟ್ಟರೇನು. ನನ್ನ ಸಂಪರ್ಕಕ್ಕೆ ಬಿ ಎಲ್ ಸಂತೋಷ ಬಹಳ ಪ್ರಯತ್ನ ಪಟ್ಟರು. ಕೆಲ ಮುಖಂಡರನ್ನು ಸಹ ಕಳಸಿದ್ರು.
ಆಜ್ಞೆಯನ್ನು ಪಾಲಿಸುವುದು ಕಷ್ಟ, ಬಿಡುವುದು ಕಷ್ಟ. ಸಂತೋಷ ಅವರು ನನ್ನ ಗುರು, ನನ್ನನ್ನು ಕ್ಷಮಿಸಿ ಎಂದು ಹೇಳುತ್ತೇನೆ. ಅವರಿಂದ ಯಾವುದೇ ಅನ್ಯಾಯ ಆಗಿಲ್ಲ, ಕಷ್ಟ ಕಾಲದಲ್ಲಿ ನೆರವು ಕೊಟ್ಟಿದ್ದಾರೆ. ಅಥಣಿ ಕೆಲ ಪ್ರದೇಶ ನೀರಾವರಿಯಿಂದ ವಂಚಿತಗೊಂಡಿದೆ. ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಆಸೆ. ವೈಯಕ್ತಿಕ ಬೇಡಿಕೆ ಅಲ್ಲ, ನೀರಾವರಿ ಬೇಡಿಕೆ ಇಡುತ್ತೇನೆ ಎಂದಿದ್ದಾರೆ.
ಗೆಲ್ಲೋವರೆಗೆ ಹಾರ ಹಾಕಿಸಿಕೊಳ್ಳಲ್ಲ: ಸವದಿ ಶಪಥ
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.